ಕಲಬುರಗಿ: ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದೇವದಾಸಿ ಪದ್ಧತಿ ನಿರ್ಮೂಲನೆಗಾಗಿ ಕೈಗೊಂಡಿದ್ದ ಸಮೀಕ್ಷೆಯಲ್ಲಿ ಬಿಟ್ಟು ಹೋಗಿರುವ ದೇವದಾಸಿ ಮಹಿಳೆಯರು ಮತ್ತು ಅವರ ಮಕ್ಕಳ ಸಮೀಕ್ಷೆ ನಡೆಸಬೇಕು’ ಎಂದು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಮಾಳಮ್ಮ ಒತ್ತಾಯಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2007ರ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ 46 ಸಾವಿರ ದೇವದಾಸಿ ಮಹಿಳೆಯರಿದ್ದಾರೆ. ಆದರೆ ನಾನಾ ಕಾರಣಗಳಿಂದ ಇನ್ನೂ 30 ಸಾವಿರ ಜನ ಹೊರಗುಳಿದಿದ್ದಾರೆ. ಇದರಿಂದಾಗಿ ಅವರಿಗೆ ಸರ್ಕಾರದ ಸೌಲಭ್ಯಗಳು ದೊರೆಯುತ್ತಿಲ್ಲ. ಹೀಗಾಗಿ ಮರು ಸಮೀಕ್ಷೆ ಅಗತ್ಯವಿದೆ’ ಎಂದರು.
‘ದೇವದಾಸಿ ಪದ್ಧತಿಗೆ ಬಡತನ ಮತ್ತು ಮೂಢನಂಬಿಕೆ ಮೂಲ ಕಾರಣವಾಗಿದೆ. ಸಂಘಟನೆ ವತಿಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ, ಇದರ ಸಂಪೂರ್ಣ ನಿರ್ಮೂಲನೆಗೆ ಸರ್ಕಾರದ ನೆರವು ಅಗತ್ಯವಾಗಿದೆ. ಅವರಿಗೆ ಸೌಲಭ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ನಿರಂತರ ಹೋರಾಟ ನಡೆಸಿದರೂ ಸರ್ಕಾರ ಸ್ಪಂದಿಸುತ್ತಿಲ್ಲ’ ಎಂದು ದೂರಿದರು.
‘ಬೆಲೆ ಏರಿಕೆಯಿಂದಾಗಿ ದೇವದಾಸಿ ಮಹಿಳೆಯರ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ಮಾಸಾಶನ ₹6000ಕ್ಕೆ ಹೆಚ್ಚಿಸಬೇಕು. ತಲಾ 5 ಎಕರೆ ಕೃಷಿ ಜಮೀನು ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯದಾದ್ಯಂತ ಅನಿರ್ದಿಷ್ಟ ಅವಧಿ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಚಂದಮ್ಮ, ಪ್ರಮುಖರಾದ ಸುಧಾಮ ಧನ್ನಿ, ಪಾಂಡುರಂಗ ಮಾವಿನಕರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.