ADVERTISEMENT

ಬಾಗಲಕೋಟೆ ಪ್ರಕರಣ ಸಮಗ್ರ ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 8:07 IST
Last Updated 1 ಮಾರ್ಚ್ 2026, 8:07 IST

ಕಲಬುರಗಿ: ‘ಬಾಗಲಕೋಟೆಯ ಕೋಮು ಪ್ರಚೋದಿತ ಸಂಘರ್ಷದ ಪ್ರಕರಣವನ್ನು ಸರ್ಕಾರ ಸಮಗ್ರವಾಗಿ ತನಿಖೆ ನಡೆಸಬೇಕು ಮತ್ತು ಅಲ್ಲಿ ಶಾಂತಿ, ಸೌಹಾರ್ದ ನೆಲೆಸುವಂತೆ ಮಾಡಬೇಕು’ ಎಂದು ಸೌಹಾರ್ದ ಕರ್ನಾಟಕ ವೇದಿಕೆ ಆಗ್ರಹಿಸಿದೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಕೆ.ನೀಲಾ, ಮೀನಾಕ್ಷಿ ಬಾಳಿ ಅವರು, ‘ವಿವಿಧ ಸಂಘಟನೆಗಳ 10ಕ್ಕೂ ಹೆಚ್ಚು ಜನರ ಸತ್ಯಶೋಧನಾ ಸಮಿತಿಯಿಂದ ಶುಕ್ರವಾರ ಬಾಗಲಕೋಟೆಗೆ ನಿಯೋಗ ತೆರಳಿ, ಫೆ.19ರಂದು ಮಸೀದಿ ಎದುರು ಸಂಭವಿಸಿದ್ದ ಘಟನೆ ಕುರಿತು ಸ್ಥಳೀಯರಿಂದ ಮಾಹಿತಿ ಕಲೆಹಾಕಲಾಗಿದೆ. ಸದ್ಯದಲ್ಲೇ ಸರ್ಕಾರಕ್ಕೆ ವಿಸ್ತೃತ ವರದಿ ಸಲ್ಲಿಸಲಾಗುವುದು’ ಎಂದರು.

‘ಶಿವಾಜಿ ಜಯಂತಿ ಮೆರವಣಿಗೆಯಲ್ಲಿ ಕೋಮುವಾದಿಗಳು ಅನವಶ್ಯಕ ನೃತ್ಯ, ಡಿ.ಜೆ ಹಚ್ಚಿ ಕುಣಿದು ಕುಪ್ಪಳಿಸಿದ್ದಲ್ಲದೇ, ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಿಂದಿನೀಯವಾಗಿ ವರ್ತಿಸಿದ್ದಾರೆ. ಇದು ಅಲ್ಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಇದೊಂದು ಪೂರ್ವನಿಯೋಜಿತ ರಾಜಕೀಯ ಸಂಚು. ಆಕಸ್ಮಿಕವಾಗಿ ಸಂಬಂಧಿಸಿದ್ದಲ್ಲ. ಅಲ್ಲಿ ನಡೆಯಲಿರುವ ಉಪಚುನಾವಣೆ ಗಮನದಲ್ಲಿಟ್ಟುಕೊಂಡು ಸಂಘ ಪರಿವಾರದವರು ಗಲಭೆ ಎಬ್ಬಿಸಿರುವುದು ಸ್ಪಷ್ಟವಾಗಿದೆ’ ಎಂದು ಆರೋಪಿಸಿದರು.

ADVERTISEMENT

‘ತಡರಾತ್ರಿವರೆಗೂ ಮೆರವಣಿಗೆ ನಡೆಸಲು ಅನುಮತಿಸಿದ್ದು ಮತ್ತು ಮಸೀದಿಯ ಎದುರು ಉದ್ರೇಕಕಾರಿ ಹಾಡುಗಳಿಗೆ ಅವಕಾಶ ಕಲ್ಪಿಸಿದ್ದಕ್ಕೆ ಜಿಲ್ಲಾಡಳಿತ ಹೊಣೆಯಾಗಿದೆ. ಕಾರಣ ಜಿಲ್ಲಾಧಿಕಾರಿ ಮತ್ತು ಎಸ್‌ಪಿ ಅವರನ್ನು ವರ್ಗಾವಣೆ ಮಾಡಬೇಕು’ ಎಂದು ಆಗ್ರಹಿಸಿದರು.

‘ಮೆರವಣಿಗೆ ವೇಳೆ ಮಸೀದಿಯೊಳಗಿನಿಂದ ಕಲ್ಲು ಬಂದಿದೆ ಎಂದು ಹೇಳಲಾಗುತ್ತಿದ್ದು, ಆ ಯುವಕನನ್ನು ಬಂಧಿಸಲಾಗಿದೆ. ಆದರೆ, ಕೋಮುವಾದಿಗಳು ಮರುದಿನ ಅಂಗಡಿಗಳನ್ನು ಮುಚ್ಚಿಸಿದ್ದು, ಕಲ್ಲು ತೂರಾಟ ಸಹ ನಡೆದಿದೆ. ತಳ್ಳುಗಾಡಿಗಳನ್ನು ಸುಡಲಾಗಿದೆ. ಕೋಮುವಾದಿ ಸಂಘಟನೆಗಳು ನಡೆಸಿದ ಧರಣಿಯಲ್ಲಿ ದ್ವೇಷಭಾಷಣ ಮಾಡಿದ ಜೇವರ್ಗಿಯ ಸಿದ್ದಲಿಂಗ ಸ್ವಾಮೀಜಿ ಅವರನ್ನು ಬಂಧಿಸಬೇಕು’ ಎಂದು ಒತ್ತಾಯಿಸಿದರು.

‘ಹಿಂದೆ ಶಿವಾಜಿ ಜಯಂತಿ ಮೆರವಣಿಗೆ ಮಸೀದಿ ಎದುರು ಚಲಿಸುವಾಗ ಮುಸ್ಲಿಮರು ಹಿಂದೂ ಮುಖಂಡರನ್ನು ಸನ್ಮಾನಿಸಿ, ತಂಪು ಪಾನೀಯ, ಸಿಹಿ ನೀಡಿ ಗೌರವಿಸುತ್ತಿದ್ದರಂತೆ. ಇತ್ತೀಚೆಗೆ ಕೋಮುವಾದಿ ಗುಂಪುಗಳಿಂದ ಈ ಪರಂಪರೆ ನಿಂತಿದೆ ಎಂದು ತಿಳಿದುಬಂದಿದೆ. ಹೋಳಿ, ಯುಗಾದಿ, ರಂಜಾನ್‌ ಬರುತ್ತಿದ್ದು, ಅಲ್ಲಿ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಉಪಚುನಾವಣೆ ಶಾಂತಿಯುತವಾಗಿ ನಡೆಸಬೇಕು’ ಎಂದರು.

ಕಾಶಿನಾಥ ಅಂಬಲಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.