ಕಾಳಗಿ: ‘ರಾಜ್ಯ ಸರ್ಕಾರಿ ನೌಕರರ ಹಿತ ಕಾಪಾಡಲು ರಾಜ್ಯ ಸರ್ಕಾರ ಕೂಡಲೇ 7ನೇ ವೇತನ ಆಯೋಗದ ವರದಿ ಜಾರಿಗೊಳಿಸಬೇಕು’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕ ಆಗ್ರಹಿಸಿದೆ.
ಸೋಮವಾರ ತಹಶೀಲ್ದಾರ್ ಘಮಾವತಿ ರಾಠೋಡ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಿದ ಸಂಘದ ಪದಾಧಿಕಾರಿಗಳು ‘ರಾಜ್ಯ 7ನೇ ವೇತನ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿ ಸರ್ಕಾರ ಕೂಡಲೇ ಆದೇಶ ಹೊರಡಿಸಬೇಕು. ಎನ್.ಪಿ.ಎಸ್ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಬೇಕು. ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನ ಯೋಜನೆ (ಕೆ.ಎ.ಎಸ್.ಎಸ್) ಅನುಷ್ಠಾನಗೊಳಿಸಬೇಕು’ ಎಂದು ಒತ್ತಾಯಿಸಿದ್ದಾರೆ.
‘ಈ ಮೂರು ಪ್ರಮುಖ ಬೇಡಿಕೆಗಳು ನ್ಯಾಯಯುತವಾಗಿ ಜಾರಿಗೊಳಿಸುವಲ್ಲಿ ಸರ್ಕಾರ ಈಗಾಗಲೇ ತುಂಬಾ ವಿಳಂಬ ಧೋರಣೆ ಅನುಸರಿಸಿದೆ. ರಾಜ್ಯದ ಎಲ್ಲ 31 ಕಂದಾಯ ಜಿಲ್ಲೆ, 3 ಶೈಕ್ಷಣಿಕ ಜಿಲ್ಲೆ ಹಾಗೂ 183 ತಾಲ್ಲೂಕುಗಳಲ್ಲಿ ಸಂಘದ ಶಾಖೆ ಹೊಂದಿ ಸಮಸ್ತ 6ಲಕ್ಷ ನೌಕರರನ್ನು ಪ್ರತಿನಿಧಿಸುವ ರಾಜ್ಯ ಸರ್ಕಾರಿ ನೌಕರರ ಏಕೈಕ ಬೃಹತ್ ಸಂಘಟನೆ ನಮ್ಮದಾಗಿದೆ. ರಾಜ್ಯದಲ್ಲಿ 2.60ಲಕ್ಷ ಹುದ್ದೆಗಳು ಖಾಲಿಯಿವೆ. ರಾಜ್ಯ ಅಭಿವೃದ್ಧಿ ಸೂಚ್ಯಂಕದ ಬೆಳವಣಿಗೆ ಮತ್ತು ಜಿ.ಎಸ್.ಟಿ ತೆರಿಗೆ ಸಂಗ್ರಹಣೆಯಲ್ಲಿ ದೇಶಕ್ಕೆ ಮಾದರಿಯಾಗಲು ಸರ್ಕಾರಿ ನೌಕರರ ಪಾತ್ರ ಪ್ರಮುಖವಾಗಿದೆ. ಹೀಗಿದ್ದಾಗ ನಮ್ಮ ಬೇಡಿಕೆ ಈಡೇರಿಕೆಯಲ್ಲಿ ಸರ್ಕಾರ ಮೀನಮೇಷ ಎಣಿಸುತ್ತಿರುವುದು ಸರಿಯಲ್ಲ. ಇದೇ ತಿಂಗಳು 28ರ ಒಳಗಡೆ ಬೇಡಿಕೆ ಈಡೇರದೆ ಇದ್ದಲ್ಲಿ ನಮ್ಮೆಲ್ಲ ನೌಕರರು ಕರ್ತವ್ಯಕ್ಕೆ ಗೈರಾಗಿ ಮುಷ್ಕರ ಕೈಗೊಳ್ಳಲಿದ್ದಾರೆ’ ಎಂದು ತಾಲ್ಲೂಕು ಘಟಕದ ಅಧ್ಯಕ್ಷ ಶರಣಗೌಡ ಪಾಟೀಲ ಹೇಳಿದರು.
ವಿವಿಧ ಇಲಾಖೆ ನೌಕರರಾದ ಮಹಾಂತೇಶ ಪಂಚಾಳ, ಶೌಕತ್ ಅಲಿ ನಾವದಗೀಕರ್, ಜಗನ್ನಾಥ ಬಂಡಿ, ಅನೀಲ ರಾಠೋಡ, ಚಂದ್ರಕಾಂತ ಕಾಳೇರ, ಜಗನ್ನಾಥ ಕೆ.ಸಿ, ಶಿವಾನಂದ ಹೆಬ್ಬಾಳ, ಹಣಮಂತರಾಯ ಬಿರಾದಾರ, ಗಂಗಾಧರ ಸಾವಳಗಿ, ಸಂತೋಷಕುಮಾರ, ಸಿದ್ದಲಿಂಗ ಕ್ಷೇಮಶೆಟ್ಟಿ, ಸಂತೋಷ ಮಾನವಿ, ಮಂಜುನಾಥ ಮಹಾರುದ್ರ, ಪ್ರಕಾಶ ಸಿತಾಳೆ, ರವಿಕಿರಣ, ಸಂಜಯ ಕಾಂಬಳೆ, ಮಲ್ಲಪ್ಪ ಕೊಡದೂರ, ದೇವಿಂದ್ರಪ್ಪ ಓಕಳಿ, ನೀಲಕಂಠ, ಶರಣು ಮರತೂರ, ರೇಣುಕಾ, ಸುವರ್ಣ, ಅಕ್ಕಮಹಾದೇವಿ, ಸವಿತಾ, ವನಿತಾ ಅನೇಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.