ADVERTISEMENT

ಪುನರ್ ವಸತಿ ಕಲ್ಪಿಸಲು ಆಗ್ರಹ

ಗಾರಂಪಳ್ಳಿ ಗ್ರಾಮದ ಪರಿಶಿಷ್ಟ ಜಾತಿ ಬಡಾವಣೆ ನಿವಾಸಿಗಳ ಆರ್ತನಾದ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2020, 7:18 IST
Last Updated 18 ಅಕ್ಟೋಬರ್ 2020, 7:18 IST
ಚಿಂಚೋಳಿ ತಾಲ್ಲೂಕು ಗಾರಂಪಳ್ಳಿಯ ಪರಿಶಿಷ್ಟ ಜಾತಿ ಬಡಾವಣೆಗೆ ನೀರು ನುಗ್ಗಿದ್ದರಿಂದ ಗ್ರಾಮದೊಂದಿಗೆ ಸಂಪರ್ಕ ಕಡಿತಗೊಂಡಿದೆ
ಚಿಂಚೋಳಿ ತಾಲ್ಲೂಕು ಗಾರಂಪಳ್ಳಿಯ ಪರಿಶಿಷ್ಟ ಜಾತಿ ಬಡಾವಣೆಗೆ ನೀರು ನುಗ್ಗಿದ್ದರಿಂದ ಗ್ರಾಮದೊಂದಿಗೆ ಸಂಪರ್ಕ ಕಡಿತಗೊಂಡಿದೆ   

ಚಿಂಚೋಳಿ: ನಾಗರಾಳ ಜಲಾಶಯ ದಿಂದ ನದಿಗೆ ಹೆಚ್ಚುವರಿ ನೀರು ಬಿಟ್ಟಾಗಲೆಲ್ಲ ತಾಲ್ಲೂಕಿನ ಗಾರಂಪಳ್ಳಿಯ ಪರಿಶಿಷ್ಟ ಜಾತಿ ಬಡಾವಣೆಯ ನಿವಾಸಿಗಳು ತೀವ್ರ ತೊಂದರೆಗೆ ಈಡಾಗುತ್ತಿದ್ದಾರೆ.

ನದಿಯಲ್ಲಿ ನೀರಿನ ಮಟ್ಟ ಹೆಚ್ಚಾದಂತೆ ಗಾರಂಪಳ್ಳಿಯ ಪರಿಶಿಷ್ಟ ಜಾತಿ ಜನರ ಬಡಾವಣೆಯು ಗ್ರಾಮದೊಂದಿಗಿನ ಸಂಪರ್ಕ ಕಡಿತಗೊಳ್ಳುತ್ತಿದೆ. ಅಲ್ಲದೆ ಮರಪಳ್ಳಿ ಯಂಪಳ್ಳಿ ಸುತ್ತಲೂ ಭಾರಿ ಮಳೆ ಸುರಿದರೆ ಪಾಂಡುರಂಗ ಗುಡಿ ಮತ್ತು ಗೌಡನಹಳ್ಳಿ ಗಡಿಯಿಂದ ನಾಲಾ ಬಂದು ಬಡಾವಣೆಯನ್ನು ಅತಂತ್ರಗೊಳಿಸುತ್ತಿದೆ.

ಪ್ರವಾಹ ಪರಿಸ್ಥಿತಿ ಎದುರಾದರೆ ಪರಿಶಿಷ್ಟ ಬಡಾವಣೆಯ ನಿವಾಸಿಗಳು ಗ್ರಾಮಕ್ಕೆ ಬರಲು ಸಾಧ್ಯವೇ ಆಗುವುದಿಲ್ಲ. ಮನೆಗಳು ಎತ್ತರದಲ್ಲಿ ಇರುವುದರಿಂದ ಮನೆಗಳಿಗೆ ನೀರು ನುಗ್ಗುವುದಿಲ್ಲ ಆದರೆ ಜನರಿಗೆ ಪ್ರವಾಹದ ನೀರು ದಿಗ್ಭಂಧನ ಹಾಕುತ್ತಿದೆ.

ADVERTISEMENT

ಇದರಿಂದ ಅಗತ್ಯ ವಸ್ತುಗಳಿಗಾಗಿ ಗ್ರಾಮಕ್ಕೆ ಹೋಗಲು ಆಗುವುದಿಲ್ಲ. ಬಹಿರ್ದೆಸೆಗೂ ಹೊರ ಹೋಗದ ದುಸ್ಥಿತಿ ಎದುರಾಗುತ್ತಿದೆ. ಇದರಿಂದ ಮಹಿಳೆಯರು, ಮಕ್ಕಳು, ವೃದ್ಧರು ತೊಂದರೆ ಎದುರಿಸುತ್ತಿದ್ದಾರೆ.

ಪ್ರವಾಹ ಪರಿಸ್ಥಿತಿ ಎದುರಾದರೆ ಅನಾರೋಗ್ಯ ಅಥವಾ ಹೆರಿಗೆ ಮೊದಲಾದ ಸಂದರ್ಭದಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಲು ಆಗದ ಸ್ಥಿತಿ ನಿರ್ಮಾಣವಾಗುತ್ತಿದೆ. ಹೀಗಾಗಿ ಪರಿಶಿಷ್ಟ ಜಾತಿ ಜನರ ಬಡಾವಣೆಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಬೇಕು ಎಂಬುದು ಸ್ಥಳೀಯರ ಆಗ್ರಹ.

ಈ ಬಡಾವಣೆಯ ನಿವಾಸಿಗಳು ಪ್ರತಿ ವರ್ಷ ಮಳೆಗಾಲದಲ್ಲಿ ನಡುಗಡ್ಡೆಯಲ್ಲಿ ವಾಸ ಮಾಡುವ ದುಸ್ಥಿತಿಯಿದೆ. ಅಧಿಕಾರಿಗಳು ಖುದ್ದು ಭೇಟಿ ನೀಡಿ ಸಮಸ್ಯೆ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಬಾಬುರಾವ್
ಬುಳ್ಳಾ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.