ಅಫಜಲಪುರ: ಅಫಜಲಪುರ ಮತಕ್ಷೇತ್ರದ ವ್ಯಾಪ್ತಿಯ ಫರಹತಾಬಾದ್ ಗ್ರಾಮಸ್ಥರು ವೇಗದೂತ ಬಸ್ಸುಗಳ ನಿಲುಗಡೆಗಾಗಿ ಹಾಗೂ ವಿವಿಧ ಬೇಡಿಕೆಗಳಿಗಾಗಿ ಶನಿವಾರ ಬೀದರ್ - ಬೆಂಗಳೂರು ಹೆದ್ದಾರಿಯ ರಸ್ತೆ ಮೇಲೆ ವಾಹನಗಳನ್ನು ತಡೆದು ಒಂದು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು.
ಹೋರಾಟದ ನೇತೃತ್ವ ವಹಿಸಿರುವ ಸಾಂಬಾ ಸೇನೆಯ ಅಧ್ಯಕ್ಷ ಎ.ಎಸ್. ಮಲ್ಲಿಕಾರ್ಜುನ ಸಾಮ್ರಾಟ್, ಶಿವಕುಮಾರ ಶರ್ಮಾ, ಸಾಗರ್ ಅಂಗಡಿ ಮಾತನಾಡಿ, ‘ಫರಹತಾಬಾದ್ ಹೋಬಳಿ ಕೇಂದ್ರ ಸ್ಥಾನವಾಗಿದ್ದು, ಇಲ್ಲಿ ಎರಡು ವಾಣಿಜ್ಯ ಬ್ಯಾಂಕ್, ತಹಶೀಲ್ದಾರ್ ಕಚೇರಿ, ರೈತ ಸಂಪರ್ಕ ಕೇಂದ್ರ, ಖಾಸಗಿ ಮತ್ತು ಸರ್ಕಾರಿ ನರ್ಸರಿ ಶಾಲೆಯಿಂದ ಪದವಿ ಕಾಲೇಜುಗಳವರೆಗೆ ಶಿಕ್ಷಣ ಸಂಸ್ಥೆಗಳು, ಪೊಲೀಸ್ ಠಾಣೆ, ಆಸ್ಪತ್ರೆಗಳು ಸೇರಿದಂತೆ ಬೇರೆ ಬೇರೆ ಕಚೇರಿಗಳಿದ್ದು, ಸುತ್ತಲಿನ ಇಪ್ಪತ್ತಕ್ಕೂ ಹೆಚ್ಚಿನ ಗ್ರಾಮಗಳಿಗೆ ಫರಹತಾಬಾದ್ ಗ್ರಾಮ ವ್ಯಾಪಾರ ಕೇಂದ್ರವೂ ಆಗಿದೆ. ದಿನ ನಿತ್ಯ ನೂರಾರು ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ಕಲಬುರಗಿ ಮತ್ತು ಜೇವರ್ಗಿ ನಗರಗಳಿಗೆ ಹೋಗಿ ಬರಬೇಕಿದೆ’ ಎಂದರು.
‘ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೂರಾರು ನೌಕರರು, ಬಡ ಕೂಲಿ ಕಾರ್ಮಿಕರು, ರೈತರು ದಿನ ನಿತ್ಯ ಸಂಚರಿಸುತ್ತಾರೆ. ಫರಹತಾಬಾದ್ ಮುಖಾಂತರ ಕಾರ್ಯಾಚರಣೆ ನಡೆಸುವ ಎಲ್ಲಾ ವಿಭಾಗಗಳ ಎಲ್ಲಾ ವೇಗಧೂತ ಬಸ್ಸುಗಳನ್ನು ಕಡ್ಡಾಯವಾಗಿ ಫರಹತಾಬಾದ್ ಗ್ರಾಮದಲ್ಲಿ ನಿಲುಗಡೆ ಮಾಡುವುದಕ್ಕಾಗಿ, ಟ್ರಾಫಿಕ್ ಕಂಟ್ರೋಲ್ ಪಾಯಿಂಟ್ ತೆರೆಯುವಂತೆ ಕೋರಿ ಈ ಹಿಂದೆ ವಿಭಾಗೀಯ ನಿಯತ್ರಣಾಧಿಕಾರಿಗೆ (ವಿಭಾಗ - 2) ಮನವಿಪತ್ರ ಸಲ್ಲಿಸಲಾಗಿತ್ತು. ಟ್ರಾಫಿಕ್ ಕಂಟ್ರೋಲ್ ಪಾಯಿಂಟ್ ತೆರೆಯಲು ಗ್ರಾಮ ಪಂಚಾಯಿತಿಯಿಂದ ಸೂಕ್ತ ಸ್ಥಳಾವಕಾಶವನ್ನು ಕಲ್ಪಿಸಲಾಗಿದ್ದರೂ ನಿರ್ಲಕ್ಷ್ಯ ತೋರಿದ್ದಾರೆ’ ಎಂದು ಆರೋಪಿಸಿದರು.
‘ಬಹುತೇಕ ವೇಗಧೂತ ವಾಹನಗಳು ನಿಲ್ಲುತ್ತಿಲ್ಲ. ಆದ್ದರಿಂದ ಬಸ್‌ಗಳು ನಿಲುಗಡೆಯಾಗಲು ನೋಡಿಕೊಳ್ಳಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಪ್ರತಿಭಟನಕಾರರು ಬೇಡಿಕೆಯ ಮನವಿ ಪತ್ರವನ್ನು ಕಲಬುರಗಿ ವಿಭಾಗ - 2 ರ ವಿಭಾಗೀಯ ಸಂಚಾರ ಅಧಿಕಾರಿ ರವೀಂದ್ರಕುಮಾರ ಅವರಿಗೆ ನೀಡಿದರು.
ಪ್ರತಿಭಟನೆಯಲ್ಲಿ ಬಸವಶಟ್ಟಿ ಸಿ. ಮಹಾಶಟ್ಟಿ, ಮಲ್ಲಿಕಾರ್ಜುನ ನಾಶಿ, ಮಾಳಪ್ಪ ಎಚ್. ಪೂಜಾರಿ, ಅಣ್ಣೆಪ್ಪ ಬಿ. ಗೋಲಪಗೋಳ(ಮೇಘಾ), ರವೀಂದ್ರ ಕೆ. ಹಾಳಕಾಯಿ, ಶಿವಶರಣಪ್ಪ ಪಾಟೀಲ್ ಅಟ್ಟೂರ, ವಿಜಯಕುಮಾರ ಸಾಹು ನಂದಿಕೂರ, ಮೈಲಾರಿ ನಡಗೇರಿ ಇಟಗಾ ಸೇರಿದಂತೆ ಕಲಬುರಗಿ, ಸಲಗರ, ಕಮಲಾನಗರ, ಕರಹರಿ, ಅಟ್ಟೂರ್, ಜೀವಣಗಿ, ನರೋಣ, ಬೆಳಮಗಿ, ಕೋಳಕೂರ ಮುಂತಾದ ಗ್ರಾಮಗಳ ಸಾಂಬಾ ಸೇನೆಯ ನೂರಾರು ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.