
ಕಲಬುರಗಿ: ‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ 2025-26ನೇ ಸಾಲಿನ ₹5 ಸಾವಿರ ಕೋಟಿ ಅನುದಾನದ ಪೈಕಿ ಸರ್ಕಾರಕ್ಕೆ ₹862.32 ಕೋಟಿ ಕ್ರಿಯಾಯೋಜನೆ ಮಾತ್ರ ಸಲ್ಲಿಸಿ ಅನುಮೋದನೆ ಪಡೆದುಕೊಳ್ಳಲಾಗಿದೆ. ಉಳಿದ ₹4,137 ಕೋಟಿ ಕ್ರಿಯಾಯೋಜನೆ ಸಲ್ಲಿಸದೆ ಈ ಭಾಗದ ಅಭಿವೃದ್ಧಿಗೆ ಮಾರಕವಾಗಿರುವ ಮಂಡಳಿಯ ಕಾರ್ಯದರ್ಶಿಯನ್ನು ಕೂಡಲೇ ಅಮಾನತು ಮಾಡಿ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಅಹಿಂದ ಚಿಂತಕರ ವೇದಿಕೆ ಅಧ್ಯಕ್ಷ ಸೈಬಣ್ಣಾ ಜಮಾದಾರ ಆಗ್ರಹಿಸಿದರು.
‘ಕೆಕೆಆರ್‌ಡಿಬಿಯಲ್ಲಿ ಕೆಟಿಪಿಪಿ ಕಾಯ್ದೆ (ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆ 1999) ಉಲ್ಲಂಘಿಸಿ ಸುಮಾರು ₹5,300 ಕೋಟಿ ಬಿಲ್‌ಗಳನ್ನು ಮಾಡಲಾಗಿದೆ. 2023ರಿಂದ ಈವರೆಗಿನ ಎಲ್ಲಾ ಕಾಮಗಾರಿಗಳ ಮೇಲೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖಾ ತಂಡ ರಚಿಸಬೇಕು’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
‘ಮಂಡಳಿಯ ಅಧ್ಯಕ್ಷರ ಕ್ಷೇತ್ರದಲ್ಲಿ ಅತ್ಯಂತ ಕಳಪೆ ಕಾಮಗಾರಿಗಳು ಮತ್ತು ಭ್ರಷ್ಟಾಚಾರದಿಂದ ಕೂಡಿರುವ ಬಗ್ಗೆ ಸರ್ಕಾರದ ವರದಿಯಲ್ಲಿ ಬಹಿರಂಗವಾಗಿದ್ದು, ಕೂಡಲೇ ಅಧ್ಯಕ್ಷರನ್ನು ಮಂಡಳಿಯಿಂದ ಕೈಬಿಟ್ಟು ಅವರನ್ನು ಕಾನೂನು ತನಿಖೆಗೆ ಒಳಪಡಿಸಬೇಕು. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಒಂದು ವಾರದಲ್ಲಿ ಕ್ರಮ ಕೈಗೊಳ್ಳದಿದ್ದರೆ ಕೆಕೆಆರ್‌ಡಿಬಿ ಕಚೇರಿಗೆ ಮುತ್ತಿಗೆ ಹಾಕಿ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ವಿಜಯ ಜಾಧವ, ಎಂ.ಡಿ.ಅಮನ, ಪ್ರಕಾಶ, ವಿಜಯಕುಮಾರ ಮಠಪತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.