ADVERTISEMENT

ಗೋಲಾ, ಲಸ್ಸಿಗೆ ಹೆಚ್ಚು ಬೇಡಿಕೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2019, 8:58 IST
Last Updated 21 ಏಪ್ರಿಲ್ 2019, 8:58 IST

ಕಲ್ಬುರ್ಗಿ: ಬೇಸಿಗೆಯಲ್ಲಿ ತಂಪು ಪಾನೀಯ ಮಾರಾಟಗಾರರಿಗೆ ಭರ್ಜರಿ ವ್ಯಾಪಾರ. ಜೂನ್‌ನಿಂದ ಡಿಸೆಂಬರ್‌ವರೆಗಿನ ಅವಧಿಯಲ್ಲಿ ವ್ಯಾಪಾರದಲ್ಲಿ ಕೊಂಚ ಹಿನ್ನಡೆಯಾದರೆ, ಫೆಬ್ರುವರಿಯಿಂದ ಮೇ ತಿಂಗಳವರೆಗಿನ ಅವಧಿಯಲ್ಲಿ ದುಪ್ಪಟ್ಟು ವ್ಯಾಪಾರ ಆಗುತ್ತದೆ.

ಬೇಸಿಗೆಯಲ್ಲಿ ಎಲ್ಲಿ ಬೇಕೆಂದಲ್ಲಿ ಕಬ್ಬಿನಹಾಲು, ಲಿಂಬು ಜ್ಯೂಸ್, ಹಣ್ಣಿನ ಜ್ಯೂಸ್, ಲಸ್ಸಿ ಮಾರುವವರು ಕಾಣಸಿಗುತ್ತಾರೆ. ಪೆಪ್ಸಿ, ಕೊಕೊಕೋಲಾ, ಥಮ್ಸ್ಅಪ್ ಮುಂತಾದವು ಮಾರುವ ಬೇಕರಿ ವ್ಯಾಪಾರಸ್ಥರಿಗೂ ಉತ್ತಮ ವ್ಯಾಪಾರ ಆಗುತ್ತದೆ.

‘ಚಳಿಗಾಲದ ಅವಧಿಯಲ್ಲಿ ಕಬ್ಬಿನ ಹಾಲು ಮಾರಾಟದಿಂದ ದಿನಕ್ಕೆ ₹ 2 ಸಾವಿರ ಆದಾಯ ಬಂದರೆ, ಬೇಸಿಗೆಯಲ್ಲಿ ದಿನಕ್ಕೆ ₹ 5 ಸಾವಿರಕ್ಕೂ ಹೆಚ್ಚಿನ ಆದಾಯ ಬರುತ್ತದೆ. ಬಹುತೇಕ ಮಂದಿ ಐಸ್ ಮಿಶ್ರಿತ ಕಬ್ಬಿನ ಹಾಲನ್ನೇ ಕುಡಿಯಲು ಇಷ್ಟಪಡುತ್ತಾರೆ’ ಎಂದು ಕಬ್ಬಿನಹಾಲು ವ್ಯಾಪಾರಸ್ಥ ಮಹಮ್ಮದ್ ಇಲಿಯಾಸ್ ತಿಳಿಸಿದರು.

ADVERTISEMENT

ಜಿಲ್ಲಾ ನ್ಯಾಯಾಲಯದ ಬಳಿ 15 ವರ್ಷಗಳಿಂದ ಕಬ್ಬಿನಹಾಲು ಮಾರುತ್ತಿರುವ ಅವರು, ‘ಐಸ್ ಬಳಕೆ ಬಗ್ಗೆ ಒಬ್ಬರಿಂದಲೂ ದೂರು ಬಂದಿಲ್ಲ. ಆದರೆ, ಅದರ ಉಸಾಬರಿಯೇ ಬೇಡವೆಂದು ಕೆಲವರು ಐಸ್ ಹಾಕಿಸಿಕೊಳ್ಳುವುದಿಲ್ಲ. 2 ವರ್ಷದ ಹಿಂದೆ ₹ 10ರಂತೆ ಒಂದು ಗ್ಲಾಸ್ ಕಬ್ಬಿನ ಹಾಲು ಮಾರುತ್ತಿದ್ದೆ. ಈಗ ₹ 15ರಂತೆ ಕಬ್ಬಿನ ಹಾಲು ಮಾರುತ್ತಿದ್ದೇನೆ' ಎಂದರು.

‘ಚಳಿಗಾಲದಲ್ಲಿ ಪೆಪ್ಸಿ, ಕೊಕೊಕೋಲಾ, ಥಮ್ಸ್ ಅಪ್‌ಗಳಿಗೆ ಹೆಚ್ಚು ಬೇಡಿಕೆ ಇರುವುದಿಲ್ಲ. ಆದರೆ ಬೇಸಿಗೆಯಲ್ಲಿ ದಿನಕ್ಕೆ 10ಕ್ಕೂ ಹೆಚ್ಚು ₹ 20 ದರದ ಪೆಟ್ ಬಾಟ್ಲಿಗಳು ಖಾಲಿಯಾಗುತ್ತವೆ. ಪಾನೀಯವುಳ್ಳ ಟೆಟ್ರಾ ಪ್ಯಾಕ್‌ಗಳು ಬೇಗನೇ ಖಾಲಿಯಾಗುತ್ತವೆ. ಅವುಗಳನ್ನು ಸೇವಿಸಲು ಮಕ್ಕಳು ಹೆಚ್ಚು ಇಷ್ಟಪಡುತ್ತಾರೆ’ ಎಂದು ವ್ಯಾಪಾರಸ್ಥ ಗಿರೀಶ್ ತಿಳಿಸಿದರು.

ಕೋರ್ಟ್‌-ಟೆಂಪಲ್ ರಸ್ತೆ ಬದಿಯಿರುವ ಲಸ್ಸಿ ಅಂಗಡಿಯಲ್ಲಿ ಹೆಚ್ಚು ಜನ ಕಂಡು ಬಂದರೆ, ಬಿಗ್ ಬಜಾರ್ ಬಳಿ ಬಗೆಬಗೆಯ ಹಣ್ಣಿನ ರಸಗಳ ಗೋಲಾ ಸವಿಯಲು ಯುವಜನರು ಹೆಚ್ಚು ಇಷ್ಟಪಡುತ್ತಾರೆ. ಬಿಗ್ ಬಜಾರ್‌ಗೆ ಬಂದಾಗಲೆಲ್ಲ ಅಥವಾ ಮಿರಾಜ್‌ನಲ್ಲಿ ಚಲನಚಿತ್ರವನ್ನು ವೀಕ್ಷಿಸಿ ಮನೆಗೆ ಮರಳುವಾಗಲೆಲ್ಲ, ಗೋಲಾ ಸವಿಯಲು ಇಷ್ಟಪಡುತ್ತಾರೆ.

‘ಕಲಬುರ್ಗಿಯಲ್ಲಿ ಗೋಲಾ ಸಿಗುವುದು ತುಂಬಾನೇ ಅಪರೂಪ. ಈ ಕಾರಣಕ್ಕೆ ಇಲ್ಲಿ ಬಂದಾಗಲೆಲ್ಲ, ಅದನ್ನು ಸವಿಯುತ್ತೇನೆ. ನನಗೆ ಮಾವಿನ ಹಣ್ಣಿನ ರಸದ ಗೋಲಾ ತುಂಬಾ ಇಷ್ಟ’ ಎಂದು ಪಶ್ಚಿಮ ಬಂಗಾಳದ ಬಿಪ್ಲಬ್ ಚಕ್ರವರ್ತಿ ತಿಳಿಸಿದರು.

ಐಸ್ ಮೇಲೆ ಬಗೆಬಗೆಯ ಹಣ್ಣಿನ ರಸಗಳನ್ನು ಸುರಿದುಕೊಂಡು ಸವಿಯೋದೆ ಖುಷಿ. ಗೋಲಾ ಇನ್ನಷ್ಟು ವರ್ಣಮಯ ಆಗುವುದಲ್ಲದೇ ನೋಡಲು-ಸವಿಯಲು ಮನಸ್ಸು ಹಾತೊರೆಯುತ್ತದೆ’ ಎಂದು ಜಾರ್ಖಂಡ್‌ನ ಶಿವಂ ಜೆಸ್ವಾಕ್ ತಿಳಿಸಿದರು.

ಬೇಸಿಗೆ ಸಂದರ್ಭದಲ್ಲಿ ಐಸ್‌ ಎಂಥದ್ದು ಎಂಬುದನ್ನು ಪರಿಶೀಲಿಸುವಷ್ಟು ತಾಳ್ಮೆ ಯಾರಿಗೂ ಇಳಿಯುವುದಿಲ್ಲ. ಆಯಾಸ, ಬಾಯಾರಿಕೆ ನಿವಾರಣೆಗೆ ತಂಪು ಪಾನೀಯ ಸಿಕ್ಕರೆ ಸಾಕು.

–ಭೀಮಾಶಂಕರ ಪಾಣೇಗಾಂವ್, ಸ್ಥಳೀಯರು

ಶುದ್ಧ ನೀರಿನಿಂದ ತಯಾರಾದ ಐಸ್‌ ಪೂರೈಸಿದರೆ, ಜನರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಐಸ್‌ ಪೂರೈಕೆದಾರರು ಇದರ ಬಗ್ಗೆ ಎಚ್ಚರ ವಹಿಸಬೇಕು.

–ಅಜಯ್ ಮಡಪೆ, ಸ್ಥಳೀಯರು

15 ವರ್ಷಗಳಿಂದ ಶುದ್ಧವಾದ ಕಬ್ಬಿನ ಹಾಲನ್ನು ನೀಡುತ್ತಿರುವೆ. ಐಸ್ ಸಂಬಂಧಿಸಿದಂತೆ ಈವರೆಗೆ ಯಾರಿಂದಲೂ ಯಾವುದೇ ದೂರು ಬಂದಿಲ್ಲ.

–ಮಹಮ್ಮದ್ ಇಸ್ಮಾಯಿಲ್, ಕಬ್ಬಿನ ಹಾಲು ಮಾರಾಟಗಾರ

ಐಸ್‌ ಮಿಶ್ರಿತ ಕಬ್ಬಿನ ಹಾಲನ್ನು ಸೇವಿಸಿ ಕೆಲವರು ಶೀತ ಮತ್ತು ‌ಜ್ವರದಿಂದ ಬಳಲಿದ ಉದಾಹರಣೆಗಳಿವೆ. ತಂಪು ಪಾನೀಯ ಸೇವನೆ ಮುನ್ನ ಎಚ್ಚರವಿರಲಿ.

–ಆಶಾ, ಸ್ಥಳೀಯರು

ಐಸ್‌ ಫ್ಯಾಕ್ಟರಿಗಳಿಂದ ಶುದ್ಧ ನೀರು ಪೂರೈಕೆಯಾಗುತ್ತಿದೆ ಅಥವಾ ಇಲ್ಲವೇ ಎಂಬುದರ ಬಗ್ಗೆ ಆಹಾರ ಸುರಕ್ಷತಾ ಅಧಿಕಾರಿಗಳು ಪರಿಶೀಲಿಸಿ, ಕ್ರಮ ಕೈಗೊಳ್ಳಬೇಕು.

–ಪೂಜಾ ಸಿಂಗೆ, ಸ್ಥಳೀಯರು

ವಿವಿಧೆಡೆ ಮಾರಲಾಗುವ ಆಹಾರ ಮತ್ತು ಪಾನೀಯ ಬಗ್ಗೆ ನಿಗಾ ವಹಿಸಿದ್ದೇವೆ. ನಿಯಮಬಾಹಿರ ಮಾರಾಟಗಾರರ ವಿರುದ್ಧ ಕ್ರಮ ಜರುಗಿಸುತ್ತೇವೆ.

–ಡಾ. ದೀಪಕ್, ಆಹಾರ ಸುರಕ್ಷತಾ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.