
ಶಶೀಲ್ ನಮೋಶಿ
ಕಲಬುರಗಿ: ‘ಕಲ್ಯಾಣ ಕರ್ನಾಟಕ ಭಾಗದ 42 ಸಾವಿರ ಸೇರಿದಂತೆ ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2.85 ಲಕ್ಷ ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ ಆಗ್ರಹಿಸಿದರು.
‘2023ರಿಂದ ಈವರೆಗೆ 11,238 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗಿದೆ ಎಂದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹೇಳುತ್ತಿದೆ. ಆದರೆ, ವಾಸ್ತವದಲ್ಲಿ ಕೇವಲ 8,157 ಹುದ್ದೆಗಳ ನೇಮಕಾತಿಯನ್ನಷ್ಟೇ ಪೂರ್ಣಗೊಳಿಸಿದೆ. ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಸೇರಿ 94 ಸಾವಿರ ಹುದ್ದೆಗಳು ಖಾಲಿ ಇವೆ. ಹೀಗಿದ್ದಾಗ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದೊರೆಯಲು ಹೇಗೆ ಸಾಧ್ಯ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.
‘ಒಳಮೀಸಲಾತಿಗೆ ಬಿಜೆಪಿ ವಿರೋಧ ಇಲ್ಲ. ಆದರೆ, ಒಳಮೀಸಲಾತಿಯ ಕಾನೂನು ತೊಡಕು ನೆಪ ಹೇಳದೆ ನಿರುದ್ಯೋಗಿ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಹಿಂದಿನ ರೋಸ್ಟರ್ ಪದ್ಧತಿಯಂತೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಆಗ ಅನುದಾನದ ಕೊರತೆ ಮರೆಮಾಚಲು ಹೋಗಿ ವಿಳಂಬ ಮಾಡಿದ್ದ ಸರ್ಕಾರಕ್ಕೆ ಈಗ ಹೈಕೋರ್ಟ್ ಕೂಡ ಹಳೆಯ ರೋಸ್ಟರ್‌ನಂತೆ ಶೇ 50 ಮೀಸಲಾತಿ ಪ್ರಕಾರ ನೇಮಕಾತಿ ಪ್ರಕ್ರಿಯೆ ಮುಂದುವರಿಸುವಂತೆ ಹೇಳಿದ್ದರಿಂದ ಮುಜುಗರ ಉಂಟಾಗಿದೆ’ ಎಂದರು.
‘ಕಲ್ಯಾಣ ಕರ್ನಾಟಕದ ಸ್ಥಳೀಯ ವೃಂದದ ನೇಮಕಾತಿಗೆ ಆರ್ಥಿಕ ಇಲಾಖೆಯ ಪೂರ್ವ ಅನುಮತಿ ಬೇಕಾಗಿಲ್ಲ. ಆದರೂ ಸರ್ಕಾರ ಒಳಮೀಸಲಾತಿಯ ವಿಷಯ ಮುಂದಿಟ್ಟುಕೊಂಡು ಅನುದಾನದ ಕೊರತೆ ಮರೆಮಾಚಲು ಹೊರಟಿದೆ. 2.85 ಲಕ್ಷ ಖಾಲಿ ಹುದ್ದೆಗಳೇ ಸರ್ಕಾರದ ಸಾವಿರ ದಿನಗಳ ಸಾಧನೆ. ಸಾಧನಾ ಸಮಾರಂಭವು ಆಡಳಿತಾತ್ಮಕ ತೊಂದರೆ ಮುಚ್ಚಿಕೊಳ್ಳಲು ಸರ್ಕಾರ ಹೂಡಿರುವ ತಂತ್ರ’ ಎಂದು ಆರೋಪಿಸಿದರು.
ಜಿಡಿಎ ಮಾಜಿ ಅಧ್ಯಕ್ಷ ಅವಿನಾಶ ಕುಲಕರ್ಣಿ, ಪ್ರಮುಖರಾದ ಆನಂದ ಕಣಸೂರ, ಅಣವೀರ ಪಾಟೀಲ ಇದ್ದರು.
ಜೂನ್‌ನಲ್ಲಿ ನಡೆಯುವ ಮೇಲ್ಮನೆಯ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಲು ಹಾಲಿ ಶಾಸಕರಿಗೆ ಟಿಕೆಟ್ ಸಮಸ್ಯೆ ಇಲ್ಲ. ಹೀಗಾಗಿ ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ರಾಜ್ಯ ನಾಯಕರು ಕೂಡ ಭರವಸೆ ಕೊಟ್ಟಿದ್ದಾರೆ.ಶಶೀಲ್ ಜಿ.ನಮೋಶಿ, ಎಂಎಲ್‌ಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.