ADVERTISEMENT

ಶಹಾಪುರ: ಪಡಿತರ ಅಕ್ರಮ ಸಾಗಣೆ ಜಾಲ ಪತ್ತೆಗೆ ಆಗ್ರಹ

ಟಿ.ನಾಗೇಂದ್ರ
Published 28 ನವೆಂಬರ್ 2021, 14:47 IST
Last Updated 28 ನವೆಂಬರ್ 2021, 14:47 IST
ಶಹಾಪುರ ತಾಲ್ಲೂಕಿನ ಭೀಮರಾಯನಗುಡಿ ಠಾಣೆಯಲ್ಲಿ ಶುಕ್ರವಾರ ಪಡಿತರ ಚೀಟಿಯ ಮೂಲಕ ವಿತರಿಸುವ ಅಕ್ಕಿಯನ್ನು ಅಕ್ರಮವಾಗಿ ಸಾಗಣೆ ಮಾಡುವಾಗ ಮೂರು ಲಾರಿ ವಶಪಡಿಸಿಕೊಂಡಿರುವುದು
ಶಹಾಪುರ ತಾಲ್ಲೂಕಿನ ಭೀಮರಾಯನಗುಡಿ ಠಾಣೆಯಲ್ಲಿ ಶುಕ್ರವಾರ ಪಡಿತರ ಚೀಟಿಯ ಮೂಲಕ ವಿತರಿಸುವ ಅಕ್ಕಿಯನ್ನು ಅಕ್ರಮವಾಗಿ ಸಾಗಣೆ ಮಾಡುವಾಗ ಮೂರು ಲಾರಿ ವಶಪಡಿಸಿಕೊಂಡಿರುವುದು   

ಶಹಾಪುರ: ಪಡಿತರ ಅಕ್ಕಿಯನ್ನು ಸಂಗ್ರಹಿಸಿಕೊಂಡು ಅಕ್ರಮವಾಗಿ ನೆರೆ ರಾಜ್ಯಗಳಿಗೆ ಸಾಗಣೆ ಮಾಡುತ್ತಿದ್ದ ಮೂರು ಲಾರಿಗಳನ್ನು ವಶಪಡಿಸಿಕೊಂಡು ಲಾರಿ ಚಾಲಕರನ್ನು ಬಂಧಿಸಿದರೆ ಸಾಲದು ಆದರೆ ಅಕ್ರಮ ಸಾಗಣೆಯ ಮಾರಾಟ ಜಾಲವನ್ನು ಪೊಲೀಸಲು ಪತ್ತೆ ಹಚ್ಚಬೇಕು ಎಂದು ಜನತೆಯಿಂದ ಕೇಳಿ ಬರುತ್ತಲಿದೆ.

ಗ್ರಾಮೀಣ ಪ್ರದೇಶದಲ್ಲಿ ನ್ಯಾಯಬೆಲೆ ಅಂಗಡಿ ಮೂಲಕ ಪಡಿತರ ಚೀಟಿಯನ್ನು ಹೊಂದಿದ ಫಲಾನುಭವಿಗಳಿಗೆ ವಿತರಿಸುವ ಅಕ್ಕಿ, ಗೋಧಿಯನ್ನು ಕೆಲ ದಲ್ಲಾಳಿಗಳು ರಾತ್ರಿ ಸಮಯದಲ್ಲಿ ಮನೆ ಮನೆಗೆ ತೆರಳಿ ಒಂದು ಸೇರಿಗೆ ₹10ರಿಂದ 15ಗೆ ಖರೀದಿಸಿ ನಂತರ ಒಂದೆಡೆ ಸಂಗ್ರಹಿಸಿ ಗೌಪ್ಯವಾಗಿ ಸಾಗಣೆ ಮಾಡುವ ಜಾಲ ಪ್ರತಿ ಗ್ರಾಮದ ಒಬ್ಬರು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ರೈತ ಮುಖಂಡ ಸಿದ್ದಯ್ಯ ಹಿರೇಮಠ ಆರೋಪಿಸಿದರು.

ತಾಲ್ಲೂಕಿನ ಕೆಲ ಪ್ರದೇಶದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಂಗ್ರಹಿಸಿ ಪಾಲಿಷ್ ಮಾಡಿಸಿ ನಂತರ 25 ಕೆ.ಜಿಯಂತೆ ವಿವಿಧ ಬಣ್ಣದ ಪ್ಲಾಸ್ಟಿಕ್ ಚೀಲದ ಮೂಟೆಗಳನ್ನು ಮಾಡಿ ಬೇರೆಡೆ ಸಾಗಿಸುತ್ತಾರೆ, ಹಸಿದ ಒಡಲಿಗೆ ಅನ್ನ ಸಿಗಲಿ ಎಂದು ಸರ್ಕಾರ ನೀಡುತ್ತಿರುವಾಗ ಅದನ್ನು ದುರ್ಬಳಕೆ ಮಾಡಿಕೊಂಡು ಸಾಗಣೆ ಮಾಡುವ ಹಾಗೂ ಮಾರಾಟ ಮಾಡುವ ವ್ಯಕ್ತಿಗಳನ್ನು ಬಂಧಿಸಬೇಕು ಎಂದು ಅವರು ಆಗ್ರಹಿಸಿದರು.

ADVERTISEMENT

ಹಳ್ಳಿಯಲ್ಲಿ ಪಡಿತರ ಚೀಟಿ ಹೊಂದಿದ ಫಲಾನುಭವಿ ಮಾರಾಟ ಮಾಡಿದ್ದಾರೆ ಎಂದು ಪತ್ತೆ ಹಚ್ಚುವುದು ಕಷ್ಟಾಗುತ್ತದೆ. ಆದರೂ ಆಹಾರ ಇಲಾಖೆಯ ಮಾರ್ಗಸೂಚಿಯಂತೆ ಪಡಿತರ ಅಕ್ಕಿ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಮಾರಾಟ ಮಾಡುವುದು ಕಂಡು ಬಂದರೆ ಚೀಟಿಯನ್ನು ಅಮಾನತ್ತು ಮಾಡುವುದು ಹಾಗೂ ದಂಡ ವಸೂಲಿ ಮಾಡಲು ಅವಕಾಶವಿದೆ. ಕಠಿಣ ಕ್ರಮದ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಆಹಾರ ಇಲಾಖೆ ಅಧಿಕಾರಿ ಒಬ್ಬರು ತಿಳಿಸಿದರು.

ಕೋವಿಡ್ ಸಂಕಷ್ಟದ ಕಾಲದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹೆಚ್ಚಿನ ಪಡಿತರವನ್ನು ವಿತರಣೆ ಮಾಡಿದರು. ಆಗ ವಿತರಿಸುವ ಅಕ್ಕಿ ಕಳಪೆಮಟ್ಟದ್ದಾಗಿದ್ದು ತಿನ್ನಲು ಸಾಧ್ಯವಾಗದ ಆಹಾರ ಸಾಮಗ್ರಿ ವಿತರಿಸಿದ್ದಾರೆ. ಅನಿವಾರ್ಯವಾಗಿ ಪಡಿತರ ಅಕ್ಕಿಯನ್ನು ಮಾರಾಟ ಮಾಡಿ ಸಣ್ಣ ಅಕ್ಕಿಯನ್ನು ಊಟ ಮಾಡಲು ಖರೀದಿಸುತ್ತೇವೆ. ಅಲ್ಲದೆ ನಮ್ಮಲ್ಲಿ ನೀರಾವರಿ ಪ್ರದೇಶವಾಗಿದ್ದರಿಂದ ಗುಣಮಟ್ಟದ ಸೋನಾಮಸೂರಿ ಅಕ್ಕಿ ಕೈಗೆಟುಕುವ ಬೆಲೆ ಹಾಗೂ ಸ್ವತಃ ನಾವೆ ಬೆಳೆಯುತ್ತಿರುವುದರಿಂದ ಪಡಿತರ ತಿನ್ನುತ್ತಿಲ್ಲ. ಅಲ್ಲದೆ ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬದ ಸದಸ್ಯರ ಮೇಲೆ ಹೆಚ್ಚಿನ ಆಹಾರಧಾನ್ಯ ಬರುತ್ತದೆ. ಆಗ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದೇವೆ ಎಂದು ಪಡಿತರ ಚೀಟಿಯನ್ನು ಹೊಂದಿದೆ ವ್ಯಕ್ತಿಗಳು ಸಮರ್ಥಿಸಿಕೊಳ್ಳುತ್ತಾರೆ.

* ಪಡಿತರ ಅಕ್ಕಿ ಸಾಗಣೆ ಮಾಡುವಾಗ ಚಾಲಕರನ್ನು ಬಂಧಿಸಿ ಪ್ರಕರಣ ಮುಚ್ಚಿ ಹಾಕಬೇಡಿ. ಅದರ ಹಿಂದಿರುವ ಜಾಲದ ವ್ಯಕ್ತಿಯನ್ನು ಬಂಧಿಸಿ.
- ಸಿದ್ದಯ್ಯ ಹಿರೇಮಠ, ರೈತ ಮುಖಂಡ

* ಪಡಿತರ ಅಕ್ಕಿ ಸಾಗಣೆ ಮಾಡಿದ ಬಗ್ಗೆ ತನಿಖೆ ನಡೆದಿದೆ. ಲಾರಿಯ ಮಾಲೀಕರಾಗಲಿ ಇನ್ನಿತರರನ್ನು ಬಂಧಿಸಿಲ್ಲ. ತನಿಖೆ ಹಂತದಲ್ಲಿ ಹೆಚ್ಚಿನದನ್ನು ಹೇಳಲಾಗದು.
- ಚೆನ್ನಯ್ಯ ಹಿರೇಮಠ, ಸಿಪಿಐ, ಶಹಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.