ಯಲಬುರ್ಗಾ: ತಾಲ್ಲೂಕಿನ ಜಿ.ವೀರಾಪೂರ ಗ್ರಾಮದಲ್ಲಿ 32ನೇ ವರ್ಷದ ದೇವಿಮಹಾತ್ಮೆ ಪುರಾಣ ಮಹಾಮಂಗಲೋತ್ಸವ ಅದ್ದೂರಿಯಾಗಿ ಜರುಗಿತು. ಪ್ರಯುಕ್ತ ಭಾವಚಿತ್ರದ ಮೆರವಣಿಗೆ, ಲಘು ರಥೋತ್ಸವ ಆಯೋಜಿಸಲಾಗಿತ್ತು.
ಸಾನ್ನಿಧ್ಯ ವಹಿಸಿದ್ದ ಕುದ್ರಿಮೋತಿಯ ಮೈಸೂರುಮಠದ ವಿಜಯಮಹಾಂತ ಸ್ವಾಮೀಜಿ ಮಾತನಾಡಿ, ‘ಶರನ್ನವರಾತ್ರಿ ಪ್ರಯುಕ್ತ ಆಯೋಜಿಸಿದ್ದ 9 ದಿನ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಭಕ್ತರು ದೇವಿಯ ಕೃಪೆಗೆ ಪಾತ್ರರಾಗಿದ್ದಾರೆ. ಕಳೆದ 32 ವರ್ಷಗಳಿಂದ ನಡೆದು ಬಂದ ಪುರಾಣ ಕಾರ್ಯಕ್ರಮವು ವರ್ಷದಿಂದ ವರ್ಷಕ್ಕೆ ತನ್ನ ವೈಭವ ಹೆಚ್ಚಿಸಿಕೊಂಡಿದೆ. ಭಕ್ತರ ಸಂಖ್ಯೆ ಹೆಚ್ಚಿದೆ. ಆಚರಣೆಯಲ್ಲಿಯೂ ಅದ್ದೂರಿತನ ಕಂಡು ಬರುತ್ತಿದೆ. ಈ ಎಲ್ಲ ಬೆಳವಣಿಗೆಯು ಗ್ರಾಮಸ್ಥರಲ್ಲಿ ಆಧ್ಯಾತ್ಮಿಕ ಮನೋಭಾವನೆ ಬೆಳವಣಿಗೆಯಾಗಿದ್ದು ಹಾಗೂ ದೇವಿಯ ಕೃಪಾರ್ಶಿವಾದ ಗ್ರಾಮಸ್ಥರ ಮೇಲೆ ಇರುವುದೇ ಮುಖ್ಯ ಕಾರಣ’ ಎಂದರು.
ಗುಳೆದಗುಡ್ಡದ ಒಪ್ಪತ್ತೇಶ್ವರ ಸ್ವಾಮೀಜಿ ಮಾತನಾಡಿ, ‘ಗ್ರಾಮೀಣ ಪ್ರದೇಶದಲ್ಲಿಯೂ ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಶ್ರದ್ಧಾಭಕ್ತಿಯಿಂದ ಪಾಲ್ಗೊಳ್ಳುವ ಮೂಲಕ ಅಚ್ಚುಕಟ್ಟಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದನ್ನು ಗಮನಿಸಿದರೆ ಸಾಂಸ್ಕೃತಿಕ ಮನೋಭಾವನೆಯು ಹೆಚ್ಚು ಜಾಗೃತಿಗೊಂಡಿದ್ದು ಎದ್ದುಕಾಣುತ್ತಿದೆ’ ಎಂದರು.
ಶ್ರೀಧರ ಮುರಡಿ ಹಿರೇಮಠದ ಪೀಠಾಧಿಕಾರಿ ಬಸವಲಿಂಗೇಶ್ವರ ಸ್ವಾಮೀಜಿ ಮಾತನಾಡಿದರು. ಗೆದಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶರಣಪ್ಪ ಕೊಪ್ಪದ, ಈಶ್ವರ ಅಟಮಾಳಗಿ, ಚಂದ್ರಶೇಖರ ಹಿರೇಮನಿ ಬಾಳಪ್ಪ ಬಂಡ್ಲಿ, ವೀರಭದ್ರಪ್ಪ ಮ್ಯಾಗೇರಿ, ಹನಮಂತಪ್ಪ ಕುರಿ, ರುದ್ರಪ್ಪ ಗೆದಗೇರಿ, ಸೀನಪ್ಪ ರಾಠೋಡ, ಹನಮಂತಪ್ಪ ಹನಮಾಪೂರ, ಶಂಭುಲಿಂಗಪ್ಪ ಹಿರೇಮಠ, ಸುಭಾಷಚಂದ್ರ, ಮಹೇಶ ಹರಿಜನ, ಶಂಕರಗೌಡ ಪೊಲೀಸ್‍ಪಾಟೀಲ ಸೇರಿ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.