ಚಿಂಚೋಳಿ: ‘ಪ್ರತಿಯೊಬ್ಬರ ಜೀವನದಲ್ಲಿ ಭಕ್ತಿ ಬಹಳ ಮುಖ್ಯ ಆದರೆ ಅದು ಆಧ್ಯಾತ್ಮಿಕವಾಗಿರಬೇಕು. ಇದೇ ಭಕ್ತಿ ವ್ಯಕ್ತಿಯ ಮೇಲೆ ಬಂದರೆ ಆತ ಸರ್ವಾಧಿಕಾರಿಯಾಗುತ್ತಾನೆ. ಇಂತಹ ಸರ್ವಾಧಿಕಾರ ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತದೆ’ ಎಂದು ಡಾ.ಅಂಬೇಡ್ಕರ್ ಹೇಳಿದ್ದಾರೆ. ಸಂಸತ್ತಿನ ಕೊನೆಯ ಭಾಷಣದಲ್ಲಿ ಅವರು ಈ ಮಾತು ಹೇಳಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ತಾಲ್ಲೂಕಿನ ಸುಲೇಪೇಟ ಗ್ರಾಮದಲ್ಲಿ ನೂತನವಾಗಿ ಸ್ಥಾಪಿಸಿದ ಡಾ ಬಿ.ಆರ್.ಅಂಬೇಡ್ಕರ್ ಅವರ ಪಂಚಲೋಹದ ಪ್ರತಿಮೆ ಮಂಗಳವಾರ ಅನಾವರಣೆಗೊಳಿಸಿ ಅವರು ಮಾತನಾಡಿದರು. ‘ದೈವದಿಂದ ಸ್ವರ್ಗ ಸಿಗುತ್ತೊ ಇಲ್ಲೋ ಆದರೆ ಅಂಬೇಡ್ಕರ್ ಸಂವಿಧಾನದಿಂದ ದೇಶದ ಜನರಿಗೆ ಸ್ವಾಭಿಮಾನದ ಬದುಕು ಸಿಕ್ಕಿದೆ. ಅಂತೆಯೇ ಇದಕ್ಕೆ ಜೀವಂತ ದಾಖಲೆ ಎಂದು ಕರೆಯಲಾಗುತ್ತದೆ’ ಎಂದರು.
ಫ್ರಾನ್ಸ್ ಐದು ಬಾರಿ ತನ್ನ ಸಂವಿಧಾನ ಬದಲಿಸಿದೆ. ಆದರೆ ಜನರ ಆಶಯಗಳು ಬದಲಾಗುವುದು ಅರಿತ ಅಂಬೇಡ್ಕರ್ ದೂರದೃಷ್ಟಿಯಿಂದ ನಮ್ಮ ಸಂವಿಧಾನದಲ್ಲಿ ತಿದ್ದುಪಡಿಗೆ ಅವಕಾಶ ನೀಡಿದ್ದಾರೆ ಆದರೆ ಈ ತಿದ್ದುಪಡಿ ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆಯಾಗದಂತೆ ಮಾಡಲಾಗಿದೆ. ಕೆಲ ದುಷ್ಟಶಕ್ತಿಗಳ ಸಿದ್ಧಾಂತಗಳು ಬಸವ ಹಾಗೂ ಅಂಬೇಡ್ಕರ್ ಅವರ ಆಶಯಗಳನ್ನು ವಿರೋಧಿಸುತ್ತಿವೆ. ಇಂತಹ ಶಕ್ತಿಗಳ ಬಗೆಗೆ ಜನರು ಸದಾ ಜಾಗೃತರಾಗಿರಬೇಕು ಎಂದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ‘ದೇಶಕಂಡ ಶ್ರೇಷ್ಠ ಮೇಧಾವಿ ಡಾ.ಅಂಬೇಡ್ಕರ್. ಅವರು ಮನಸ್ಸು ಮಾಡಿದರೆ ಉನ್ನತ ಹುದ್ದೆ ಪಡೆದು ಸುಖದ ಸುಪತ್ತಿಗೆ ಜೀವನ ನಡೆಸಬಹುದಿತ್ತು. ಆದರೆ ಅವರು ತಮ್ಮ ಸರ್ವಸ್ವವನ್ನು ದೇಶದ ತಳ ಸಮುದಾಯದವರಿಗಾಗಿ, ಶೋಷಿತ ಜನರಿಗಾಗಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ತ್ಯಾಗ ಮಾಡಿದರು. ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಲು ಅಂಬೇಡ್ಕರ್ ರಚಿಸಿದ ಸಂವಿಧಾನವೇ ಕಾರಣ’ ಎಂದರು.
ಮೈಸೂರಿನ ಉರಿಲಿಂಗಿ ಪೆದ್ದಿ ಸಂಸ್ಥಾನ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ‘ನಾನು ಪ್ರತಿಮೆಯಲ್ಲಿ ಇಲ್ಲ, ಪುಸ್ತಕದಲ್ಲಿ ಜೀವಂತವಿರುವುದಾಗಿ ಡಾ.ಅಂಬೇಡ್ಕರ್ ಹೇಳಿದ್ದಾರೆ. ಕೇವಲ ಪ್ರತಿಮೆ ಮಾಡುವುದರ ಬದಲು ಅಂಬೇಡ್ಕರ್ ಅವರ ವಿಚಾರಗಳನ್ನು ಜನರಿಗೆ ತಲುಪಿಸಿ’ ಎಂದರು.
ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರು ಮಾತನಾಡಿದರು. ಪ್ರತಿಮೆ ಅನಾವರಣ ಸಮಿತಿ ಅಧ್ಯಕ್ಷ ವಕೀಲ ಮಾಣಿಕರಾವ್ ಗುಲಗುಂಜಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ, ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ, ಮುಖಂಡರಾದ ಭೀಮರಾವ್ ಟಿಟಿ, ದೀಪಕನಾಗ ಪುಣ್ಯಶೆಟ್ಟಿ, ಶಿವಾನಂದ ಪಾಟೀಲ, ಬಸಯ್ಯ ಗುತ್ತೇದಾರ, ರಾಜು ಕಪನೂರ, ಸಂಜೀವನ ಯಾಕಾಪುರ, ಗೋಪಾಲರಾವ್ ಕಟ್ಟಿಮನಿ, ಗ್ರಾ.ಪಂ.ಅಧ್ಯಕ್ಷ ಸಂತೋಷ ರಾಠೋಡ, ಪುರಸಭೆ ಅಧ್ಯಕ್ಷ ಆನಂದ ಟೈಗರ್, ಮಾಜಿ ಸೈನಿಕ ರೇವಣಸಿದ್ದಪ್ಪ ಸುಬೇದಾರ, ಗ್ರಾ.ಪಂ.ಮಾಜಿ ಅಧ್ಯಕ್ಷೆ ಸರಸ್ವತಿ ಗಿರಿ ಮೊದಲಾದವರು ಹಾಜರಿದ್ದರು. ಮಲ್ಲಿಕಾರ್ಜುನ ಗುಲಗುಂಜಿ ಸ್ವಾಗತಿಸಿದರು. ಅಶೋಕ ಹೂವಿನಭಾವಿ ನಿರೂಪಿಸಿದರು. ಮಲ್ಲಿಕಾರ್ಜುನ ಪಾಳ್ಯದ್ ವಂದಿಸಿದರು.
ಮಳೆ ಸಚಿವರ ಭಾಷಣ ಮೊಟಕು
ಸಚಿವ ಪ್ರಿಯಾಂಕ ಖರ್ಗೆ ಮಾತನಾಡುತ್ತಿರುವಾಗ ಜಿಟಿಜಿಟಿ ಮಳೆ ಸುರಿಯಲಾರಂಭಿಸಿತು. ಪ್ರಕೃತಿ ಸಹಕರಿಸಿದರೆ ಮಾತನಾಡುತ್ತೇನೆ ಎಂದು ಮಾತು ಆರಂಭಿಸಿದ ಅವರು 10 ನಿಮಿಷಗಳಲ್ಲಿಯೇ ಮಳೆ ಜಾಸ್ತಿಯಾಯಿತು. ಆಗ ಸಭಿಕರು ಕುರ್ಚಿಯಿಂದ ಏಳಲು ಆರಂಭಿಸಿದರು. ಸಚಿವರು ತಮ್ಮ ಭಾಷಣ ಮೊಟಕುಗೊಳಿಸಿದರು. ಇದರೊಂದಿಗೆ ಕಾರ್ಯಕ್ರಮವೂ ಮುಕ್ತಾಯವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.