ಕಲಬುರ್ಗಿ: ಕೊರೊನಾ ಲಾಕ್‌ಡೌನ್ ದೈನಂದಿನ ಜೀವನಶೈಲಿಯಷ್ಟೇ ಬದಲಿಸಿಲ್ಲ, ಸುಲಭವಾಗಿ ಪಾರಾಗಲು ಆಗದ ಸಂಕಷ್ಟಗಳ ಸರಣಿಯಲ್ಲಿ ಸಿಲುಕಿಸಿದೆ. ಬಹುತೇಕ ಜನರ ಆರ್ಥಿಕ ಸ್ಥಿತಿ ದುರ್ಬಲಗೊಳಿಸಿದೆ. ಸ್ಥಿತಿವಂತರು ಅಲ್ಲದವರು ಅಧೀರರಾಗದಿರಲಿ ಎಂದು ರಾಜ್ಯ ಸರ್ಕಾರ ಆರ್ಥಿಕ ಪ್ಯಾಕೇಜ್ ಘೋಷಿಸಿದೆ.
ಕಟ್ಟಡ ಮತ್ತು ನಿರ್ಮಾಣದ ಕಾರ್ಮಿಕರಿಗೆ ₹ 3 ಸಾವಿರ ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ₹ 2 ಸಾವಿರ ನೆರವು ಸಿಗಲಿದೆ. ಇದಕ್ಕೆ ಪೂರಕವಾಗಿ ಕೆಲವಷ್ಟು ಷರತ್ತುಗಳಿವೆ. ಮುಖ್ಯವಾಗಿ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಹೊಂದಿರಬೇಕು ಮತ್ತು ಅವರೆಡೂ ಲಿಂಕ್ ಆಗಿರಬೇಕು. ಕಾರ್ಮಿಕ ಇಲಾಖೆಯಲ್ಲಿ ಫಲಾನುಭವಿಗಳ ಹೆಸರು ನೋಂದಣಿಯೂಆಗಿರಬೇಕು.
ಕಲಬುರ್ಗಿ ಜಿಲ್ಲೆಯಲ್ಲಿ 1.60 ಲಕ್ಷಕ್ಕೂ ಹೆಚ್ಚು ಕಟ್ಟಡ ಕಾರ್ಮಿಕರು ಇದ್ದಾರೆ. ಶೇ 80ರಷ್ಟು ಮಂದಿ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದರೆ, ಇನ್ನಷ್ಟು ಮಂದಿ ಸಂಪೂರ್ಣ ನೋಂದಣಿ ಪ್ರಕ್ರಿಯೆಯಿಂದ ದೂರ ಉಳಿದಿದ್ದಾರೆ. ಅವರಲ್ಲಿ ಕೆಲವರು ಅನಕ್ಷರರಾಗಿದ್ದರೆ, ಇನ್ನೂ ಕೆಲವರಿಗೆ ಮಾಹಿತಿ, ಮಾರ್ಗದರ್ಶನದ ಕೊರತೆ ಇದೆ.
ನೋಂದಣಿ ಪ್ರಕ್ರಿಯೆ ಸಂಪೂರ್ಣವಾಗಿ ಆಗದ ಮತ್ತು ಅಗತ್ಯ ದಾಖಲೆಪತ್ರಗಳು ನೀಡದ ಕಾರಣ ಕೆಲ ಕಾರ್ಮಿಕರಿಗೆ ಆರ್ಥಿಕ ಪ್ಯಾಕೇಜ್‌ನಡಿ ನೆರವು ಸಿಗುವುದಿಲ್ಲ. ಸಂಘಟಿತ ವಲಯದ ಕಟ್ಟಡ ಮತ್ತು ಇತರ ಕ್ಷೇತ್ರಗಳ ಕಾರ್ಮಿಕರ ಪರ ಧ್ವನಿಯೆತ್ತಲು ರಾಷ್ಟ್ರ ಮತ್ತು ರಾಜ್ಯಮಟ್ಟದ ಸಂಘಟನೆಗಳಿವೆ. ಆದರೆ, ಅಸಂಘಟಿತ ವಲಯದವರಿಗೆ ಸಂಘಟನೆಗಳೇ ಇಲ್ಲ.
ಅಸಂಘಟಿತ ವಲಯದ ವ್ಯಾಪ್ತಿಗೆ ಬರುವ ಅಗಸರು, ಕುಂಬಾರರು, ದರ್ಜಿಗಳು ಮುಂತಾದವರಿಗೆ ಬಹುತೇಕ ಸಲ ಸರ್ಕಾರದಿಂದ ಆರ್ಥಿಕ ನೆರವು ಮತ್ತು ಸೌಲಭ್ಯ ಸಿಗುವುದಿಲ್ಲ. ಅಂಥವರ ಸಂಖ್ಯೆಯು ಕಟ್ಟಡ ಕಾರ್ಮಿಕರಿಗಿಂತ ಹೆಚ್ಚಿದೆ. ಅವರ ನೋವು, ಸಂಕಟ ಮತ್ತು ಸಮಸ್ಯೆಗಳು ಕಡಿಮೆಯೇನಿಲ್ಲ. ಅವರ ಬೇಡಿಕೆಗೆ ಸಕಾಲಕ್ಕೆ ಸ್ಪಂದನೆ ಸಿಗುವುದಿಲ್ಲ.
ಆರ್ಥಿಕ ನೆರವು ಸುಲಭವಾಗಿ ಸಿಗದು:
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಡಿ ನೋಂದಾಯಿಸಿದ ಕಾರ್ಮಿಕರು ಮತ್ತು ಅಸಂಘಟಿತ ಕಾರ್ಮಿಕ ವರ್ಗದವರು ಕೋವಿಡ್ ಆರ್ಥಿಕ ಪ್ಯಾಕೇಜ್‌ಗಾಗಿ ಯಾವುದೇ ದಾಖಲೆಗಳನ್ನು ಸಲ್ಲಿಸಬೇಕಿಲ್ಲ. ಮಧ್ಯವರ್ತಿಗಳ ಮೊರೆಯೂ ಹೋಗಬೇಕಿಲ್ಲ ಎಂದು ಕಾರ್ಮಿಕ ಇಲಾಖೆ ಸ್ಪಷ್ಟವಾಗಿ ತಿಳಿಸಿದೆ.
ಆದರೆ, ಪರಿಹಾರ ಪ್ಯಾಕೇಜ್‌ನಡಿ ಹಣ ಪಡೆಯುವುದು ಅಷ್ಟು ಸುಲಭವಲ್ಲ. ನೋಂದಣಿಯಾಗದ ಮತ್ತು ಅಸಂಘಟಿತ ವಲಯದ ಕಾರ್ಮಿಕರು ಪರಿಹಾರ ಧನ ಪಡೆಯಲು ಅದರ ಅರ್ಧದಷ್ಟು ಹಣ ಬೇರೆ ಬೇರೆ ಕಾರಣಕ್ಕೆ ಖರ್ಚು ಮಾಡಬೇಕಾಗುತ್ತದೆ. ಹಲವು ದಿನಗಳ ಬಳಿಕ ಪರಿಹಾರ ಧನ ಬಂದರೂ ಅದರಿಂದ ಯಾವುದೇ ರೀತಿ ಪ್ರಯೋಜನ ಆಗುವುದಿಲ್ಲ ಎಂದು ಕಾರ್ಮಿಕ ಮುಖಂಡರು ಹೇಳುತ್ತಾರೆ.
ನೋಂದಣಿ ಮಾಡಿಕೊಳ್ಳಲು ಕಾರ್ಮಿಕರು ಕಚೇರಿಗಳಿಗೆ ಅಲೆದಾಡಬೇಕು, ಆನ್‌ಲೈನ್ ಬಗ್ಗೆ ಮಾಹಿತಿ ಹೊಂದಿರಬೇಕು, ಉದ್ಯೋಗ ಪ್ರಮಾಣಪತ್ರ ಸೇರಿದಂತೆ ಇನ್ನಿತರ ದಾಖಲೆಪತ್ರಗಳನ್ನು ಸಂಗ್ರಹಿಸಲು ಹಣ ಖರ್ಚು ಮಾಡಬೇಕು. ಇವೆಲ್ಲ ಹೊಂದಿದ್ದರೂ ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ ಲಿಂಕ್ ಇಲ್ಲದಿದ್ದರೆ ಎಲ್ಲವೂ ವ್ಯರ್ಥ ಎಂದು ಅವರು ಸಮಸ್ಯೆಗಳನ್ನು ಬಿಚ್ಚಿಡುತ್ತಾರೆ.
ಮಾಹಿತಿ ನೀಡಿಲ್ಲ, ಜಾಗೃತಿ ಮೂಡಿಸಿಲ್ಲ:
‘ಕಾರ್ಮಿಕ ಇಲಾಖೆ ಮುಖಾಂತರ ಆರ್ಥಿಕ ನೆರವು ದೊರೆಯಲಿದೆ ಎಂದು ಸರ್ಕಾರ ಘೋಷಿಸಿದೆ. ಆದರೆ, ಅದರ ಬಗ್ಗೆ ಕಾರ್ಮಿಕರಿಗೆ ಮಾಹಿತಿ ನೀಡುವ ಅಥವಾ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳು ನಡೆದಿಲ್ಲ. ಕಾರ್ಮಿಕ ಸಂಘಟನೆಗಳ ಸಭೆಯನ್ನೂ ಕರೆದಿಲ್ಲ’ ಎಂದು ಎಐಯುಟಿಯುಸಿ ಜಿಲ್ಲಾ ಘಟಕದ ಕಾರ್ಯದರ್ಶಿ ಎಸ್.ಎಂ.ಶರ್ಮಾ ತಿಳಿಸಿದರು.
‘ಕಾರ್ಮಿಕ ಇಲಾಖೆಯಿಂದ ಸಮರ್ಪಕ ಮಾಹಿತಿ ದೊರೆಯದ ಕಾರಣ ಫಲಾನುಭವಿಗಳಿಗೆ ಯಾವುದೇ ನೆರವು ಸಿಗುವುದಿಲ್ಲ. ಬ್ಯಾಂಕ್ ಖಾತೆಗೆ ಹಣ ಬರುವುದೆಂದು ಭರವಸೆ ನೀಡಲಾಗುತ್ತದೆ ಹೊರತು ಯಾವಾಗ ಬರುವುದು ಎಂಬುದನ್ನು ಅಧಿಕಾರಿಗಳು ನಿಖರವಾಗಿ ಹೇಳುವುದಿಲ್ಲ. ಹೀಗಾಗಿ ಕಾರ್ಮಿಕರು ನಿರೀಕ್ಷೆಯಲ್ಲೇ ಜೀವನ ಸಾಗಿಸಬೇಕಾಗುತ್ತದೆ’ ಎಂದು ಸಿಐಟಿಯು ಮುಖಂಡ ಶರಣಬಸಪ್ಪ ಮಮಶೆಟ್ಟಿ ವಿವರಿಸಿದರು.
‘ಹಂತಹಂತವಾಗಿ ಆರ್ಥಿಕ ನೆರವು’
‘ಜಿಲ್ಲೆಯಲ್ಲಿ 1.60 ಲಕ್ಷ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಹಾಗೂ ಅಸಂಘಟಿತ ವಲಯದ 7 ಸಾವಿರ ಮಂದಿ ಕಾರ್ಮಿಕ ಇಲಾಖೆಯಲ್ಲಿ ಹೆಸರು ನೋಂದಣಿ ಮಾಡಿಕೊಂಡಿದ್ದು, ಅವರಿಗೆ ಆರ್ಥಿಕ ನೆರವು ದೊರೆಯಲಿದೆ. ಅವರು ಯಾವುದೇ ದಾಖಲೆಪತ್ರ ನೀಡಬೇಕಿಲ್ಲ’ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಹರಿ ದೇಶಪಾಂಡೆ ತಿಳಿಸಿದರು.
‘ಎಲ್ಲಾ ಕಾರ್ಮಿಕರಿಗೆ ಏಕಕಾಲಕ್ಕೆ ಆರ್ಥಿಕ ನೆರವು ದೊರೆಯುವುದಿಲ್ಲ. ಕಾರ್ಮಿಕರ ಕಲ್ಯಾಣ ಮಂಡಳಿಯು ಕೈಗೊಳ್ಳುವ ಕ್ರಮದ ಅನುಸಾರ ಕಾರ್ಮಿಕರಿಗೆ ಆರ್ಥಿಕ ನೆರವು ಲಭ್ಯವಾಗಲಿದೆ’ ಎಂದು ಮಾಹಿತಿ ನೀಡಿದರು. ‘ನೋಂದಣಿ ಮಾಡಿಕೊಳ್ಳದೇ ಇರುವವರು ಆರ್ಥಿಕ ನೆರವಿಗಾಗಿ ಸೇವಾ ಸಿಂಧು ವೆಬ್‌ಸೈಟ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬೇಕು. ಅದಕ್ಕೆ ಪೂರಕವಾಗಿ ಸರ್ಕಾರಿ ಅಧಿಕಾರಿಗಳ ಅಥವಾ ಸ್ಥಳೀಯ ಸಂಸ್ಥೆ ಮುಖ್ಯಸ್ಥರ ಸಹಿಯುಳ್ಳ ಉದ್ಯೋಗ ಪ್ರಮಾಣಪತ್ರ ಸಹ ನೀಡಬೇಕು. ಅದನ್ನು ಕಾರ್ಮಿಕ ನಿರೀಕ್ಷಕರು ಪರಿಶೀಲಿಸಿ, ದೃಢಪಡಿಸಿಕೊಳ್ಳುತ್ತಾರೆ. ನಂತರ ಆ ಅರ್ಜಿಯನ್ನು ಕಾರ್ಮಿಕರ ಕಲ್ಯಾಣ ಮಂಡಳಿಗೆ ಕಳುಹಿಸಲಾಗುತ್ತದೆ’ ಎಂದು ಅವರು ವಿವರಿಸಿದರು. ‘ಕಟ್ಟಡ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರು ತಮ್ಮ ಹೆಸರನ್ನು ನೋಂದಾಯಿಸಲು ಬಯಸಿದ್ದಲ್ಲಿ, ಕಾರ್ಮಿಕ ಇಲಾಖೆಯ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು. ಎಲ್ಲಾ ದಾಖಲೆಪತ್ರಗಳನ್ನು ಪರಿಶೀಲಿಸಿ, ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು’ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.