ADVERTISEMENT

ಕಲಬುರಗಿ: ಮನ ಸೆಳೆದ ಅಂಧ, ಶ್ರವಣದೋಷವುಳ್ಳ ಮಕ್ಕಳ ನೃತ್ಯ

ವಿಶ್ವ ವಿಕಲಚೇತನ ದಿನಾಚರಣೆ ಕಾರ್ಯಕ್ರಮದಲ್ಲಿ ಹಬ್ಬದ ವಾತಾವರಣ ಸೃಷ್ಟಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 5:32 IST
Last Updated 4 ಡಿಸೆಂಬರ್ 2025, 5:32 IST
ಕಲಬುರಗಿಯ ಡಾ. ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ವಿಕಲಚೇತನ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್‌ ಅವರು ಮಕ್ಕಳಿಂದ ಉದ್ಘಾಟಿಸಿದರು
ಕಲಬುರಗಿಯ ಡಾ. ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ವಿಕಲಚೇತನ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್‌ ಅವರು ಮಕ್ಕಳಿಂದ ಉದ್ಘಾಟಿಸಿದರು   

ಕಲಬುರಗಿ: ಒಂದೆಡೆ ದೇಶಭಕ್ತಿ ಗೀತೆಗಳ ಗಾಯನ, ಇನ್ನೊಂದೆಡೆ ಕಾಂತಾರ ಸಿನಿಮಾದ ದೃಶ್ಯರೂಪಕ, ಜಾನಪದ ಗೀತೆಗಳ ಝೇಂಕಾರ, ಡೊಳ್ಳು ಕುಣಿತ, ಮಿಮಿಕ್ರಿ, ಭರತನಾಟ್ಯ, ಗೀತಗಾಯನ, ಹಲವು ವೇಷಭೂಷಣಗಳ ಮೂಲಕ ಅಂಗವಿಕಲ ಮಕ್ಕಳು ರಂಜಿಸಿದರು.

ನಗರದ ಡಾ.ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅಂಗವಿಕಲರ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಎಲ್ಲ ಸ್ವಯಂ ಸೇವಾ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ವಿಶ್ವ ವಿಕಲಚೇತನ ದಿನಾಚರಣೆ ಕಾರ್ಯಕ್ರಮದಲ್ಲಿ ಕನ್ನಡ ನಾಡಿನ ಹೆಮ್ಮೆ, ಪ್ರೀತಿ ಸಾರುವ, ದೇಶ ಭಕ್ತಿ ಜಪಿಸುವ ಹಾಡುಗಳನ್ನು ಹಾಡುತ್ತ ವಿವಿಧ ಅಂಧ, ಮೂಕ ಹಾಗೂ ಕಿವುಡ ಶಾಲೆಗಳ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದರು.

‘ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು’, ‘ರಂಗ ದೇ ಬಸಂತಿ ಚೋಲಾ’ ಸೇರಿದಂತೆ ವಿವಿಧ ಗೀತೆಗಳನ್ನು ಹಾಡಿ ಸಂಭ್ರಮಿಸಿದರು. ಪರಿಸರ ಜಾಗೃತಿ ಗೀತೆಗೆ ಹೆಜ್ಜೆ ಹಾಕಿದ ಚಿಣ್ಣರು, ಹಸಿರು ಬಣ್ಣದ ಉಡುಗೆಗಳನ್ನು ತೊಟ್ಟು ಪರಿಸರದ ಬಗ್ಗೆ ಜಾಗೃತಿ ಮೂಡಿಸಿದರು.

ADVERTISEMENT

ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್‌ ಕಾರ್ಯಕ್ರಮ ಉದ್ಘಾಟಿಸಿ, ‘ಅಂಗವಿಕಲತೆ ಶಾಪ ಎನ್ನುವುದು ಸರಿಯಲ್ಲ. ಅವರಲ್ಲಿಯೂ ಎಲ್ಲರಿಗಿಂತ ಭಿನ್ನವಾದ ಆಲೋಚನೆ ಶಕ್ತಿ ಇರುತ್ತದೆ. ಅವಕಾಶ ನೀಡಿದರೆ ದೇಶದ ಉನ್ನತ ಸ್ಥಾನಕ್ಕೆ ಹೋಗಲು ಸಾಧ್ಯವಿದೆ. ಸರ್ಕಾರದ ಯೋಜನೆಗಳಲ್ಲಿ ಎಲ್ಲ ಇಲಾಖೆಗಳಲ್ಲಿಯೂ ಶೇ 5ರಷ್ಟು ಅನುದಾನ ಮೀಸಲಿಡಲಾಗಿದೆ. ಅದನ್ನು ಸದುಪಯೋಗ ಪಡೆದುಕೊಂಡು ಅಂಗವಿಕಲರು ಮುಂದೆ ಬರಬೇಕು’ ಎಂದು ಹೇಳಿದರು.

‘ಜಿಲ್ಲೆಯಾದ್ಯಂತ ಸುಮಾರು 53 ಸಾವಿರ ಜನ ಅಂಗವಿಕಲರಿಗೆ ಮಾಸಾಶನ ನೀಡಲಾಗುತ್ತಿದೆ. ಇನ್ನೂ ಉಳಿದವರ ಬಗ್ಗೆ ಮಾಹಿತಿ ನೀಡಿದರೆ ಅಧಿಕಾರಿಗಳೇ ಮನೆಗೆ ಭೇಟಿ ನೀಡಿ ನಿಮಗೆ ಮಾಸಾಶನ ಸಿಗುವಂತೆ ಮಾಡಲಾಗುವುದು. ಬರುವ ಹಣದಿಂದ ವಿದ್ಯಾರ್ಥಿಗಳು ಶಿಕ್ಷಣವಂತರಾಗಿ ಸಾಧನೆ ಮಾಡಬೇಕು’ ಎಂದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ್‌ ಮಾತನಾಡಿದರು. ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ಸಾದಿಕ್‌ ಹುಸೇನ್‌ಖಾನ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮೇಯರ್ ವರ್ಷಾ ರಾಜೀವ ಜಾನೆ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸಂಗಮೇಶ, ಸಂಸ್ಥೆಗಳ ಮುಖಂಡರಾದ ದತ್ತು ಅಗರವಾಲ್, ಲಕ್ಷ್ಮಿಕಾಂತ ಕುಲಕರ್ಣಿ, ಶ್ರೀಮಂತ ರೇವೂರ, ಅಂಬಾಜಿ ಮೇಟಿ, ಖಾಸಿಂಸಾಬ್‌ ಡೊಂಗರಗಾಂವ್‌, ಅಬ್ದುಲ್‌ ಮುನೀರ್‌, ಮಸ್ತಾನ್ ಬಿರಾದಾರ ಸೇರಿದಂತೆ ವಿವಿಧ ಅಂಗವಿಕರ ಟ್ರಸ್ಟ್‌ನ ಪ್ರಮುಖರು ಹಾಜರಿದ್ದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಕುಮಾರ್‌ ರಾಠೋಡ ಸ್ವಾಗತಿಸಿದರು. ಆರ್‌.ಜೆ. ಮಂಜು ನಿರೂಪಿಸಿದರು. ಇದೇ ಸಂದರ್ಭದಲ್ಲಿ ಆಲಿಂಕೋ ಮತ್ತು ಡಿಡಿಆರ್‌ಸಿ ವತಿಯಿಂದ ಅಂಗವಿಕಲರಿಗೆ ಬ್ಯಾಟರಿ ಚಾಲಿತ ಸೈಕಲ್‌ ಹಾಗೂ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ನೃತ್ಯ, ಗಾಯನ ಮಾಡಿದ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ಅಂಧ ಹಾಗೂ ಕಿವುಡ ಮಕ್ಕಳು ಕಾಂತಾರಾ ಸಿನಿಮಾ ದೃಶ್ಯವನ್ನು ಪ್ರಸ್ತುತಪಡಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.