ಕಲಬುರಗಿ: ‘ಅಂಗವಿಕಲ ಮಕ್ಕಳಿಗೂ ಸಮಾಜದಲ್ಲಿ ಸಮಾನ ಅವಕಾಶ ಸಿಗಬೇಕು. ಅವರು ಬಲಹೀನರಲ್ಲ, ಅವಕಾಶ ವಂಚಿತರು ಎಂಬುದರ ಬಗ್ಗೆ ಹಳ್ಳಿ ಹಳ್ಳಿಗಳಲ್ಲೂ ಜಾಗೃತಿ ಮೂಡಿಸಬೇಕು’ ಎಂದು ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು.
ಭಾಗ್ಯೋದಯ ವೆಲ್‌ಫೇರ್ ಸೊಸೈಟಿ ವತಿಯಿಂದ ಶನಿವಾರ ನಗರದ ಜಗತ್ ಸರ್ಕಲ್‌ನಿಂದ ಅನ್ನಪೂರ್ಣ ಕ್ರಾಸ್‌ವರೆಗೂ ಹಮ್ಮಿಕೊಂಡ ಅಂಗವಿಕಲ ಮಕ್ಕಳ ಮ್ಯಾರಾಥಾನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಅಂಗವಿಕಲರು ಅಬಲರಲ್ಲ, ವಿಶೇಷ ಚೇತನ ಉಳ್ಳವರು. ಅವರಿಗೆ ಎಲ್ಲ ಸರ್ಕಾರಿ ಸೌಲಭ್ಯ ಒದಗಿಸಿ, ಸಮಾಜದ ಮುಖ್ಯವಾಹಿನಿಗೆ ತರಬೇಕು’ ಎಂದು ಹೇಳಿದರು.
ಎಪಿಡಿ ಎನ್‌ಜಿಒ ಸದಸ್ಯ ಆನಂದ ನಾಗೂರ ಮಾತನಾಡಿ, ‘ಪ್ರಪಂಚದಲ್ಲಿ 21 ವಿಧದ ಅಂಗವಿಕಲರಿದ್ದಾರೆ. ಅವರಿಗೆ ಪ್ರೋತ್ಸಾಹ ಕಡಿಮೆ ಇದೆ. ಅಂಗವಿಕಲರಿಗೆ ಇನ್ನೂ ಹೆಚ್ಚಿನ ಅವಕಾಶಗಳು ಬೇಕು’ ಎಂದು ಹೇಳಿದರು.
ಕಲಬುರಗಿ ಉತ್ತರ ಮತಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ ಮ್ಯಾರಾಥಾನ್‌ಗೆ ಚಾಲನೆ ನೀಡಿದರು. ಮೇಯರ್ ಯಲ್ಲಪ್ಪ ನಾಯಕೊಡಿ, ಕಾಂಗ್ರೆಸ್ ಮುಖಂಡ ನೀಲಕಂಠರಾವ್ ಮೂಲಗೆ, ಶಾರದಾಬಾಯಿ, ಭಾಗ್ಯೋದಯ ವೆಲ್‌ಫೇರ್ ಸೊಸೈಟಿಯ ಶಿವರಾಣಿ, ಶಾಂತಕುಮಾರ ಗಾದ್ರೆ, ನರೇಶ್ ಕಟಕೆ, ಪ್ರಜ್ಞಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.