
ಕಲಬುರಗಿ: ‘ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿದಂತೆ ಆಡಳಿತಾತ್ಮಕ ವೆಚ್ಚವನ್ನು ಯಾರು ಭರಿಸಬೇಕು ಎಂಬ ಕ್ಷುಲ್ಲಕ ಕಾರಣ ಇಟ್ಟುಕೊಂಡು ಭೂಸ್ವಾಧೀನ ಪ್ರಕ್ರಿಯೆಗೆ ಅಗತ್ಯ ಅನುಮೋದನೆ ನೀಡದಿದ್ದರೆ ಹೇಗೆ? ಜಿಲ್ಲೆಯ ಅಭಿವೃದ್ಧಿಗೆ ಅಡ್ಡಿಬರುವ ಅಧಿಕಾರಿಗಳನ್ನು ಸಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ...!’
ಎರಡು ವರ್ಷಗಳ ಬಳಿಕ ಇಲ್ಲಿನ ನೂತನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ‘ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಮೆಲುಸ್ತುವಾರಿ’ (ದಿಶಾ) ಸಭೆಯಲ್ಲಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ ಗುಡುಗಿದ ಪರಿ ಇದು.
ಸಂಸದ ರಾಧಾಕೃಷ್ಣ ದೊಡ್ಡಮನಿ ಅಧ್ಯಕ್ಷತೆಯಲ್ಲಿ ನಡೆದ ದಿಶಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಡಾ. ಶರಣಪ್ರಕಾಶ್ ಪಾಟೀಲ, ಬೀದರ್ ಸಂಸದ ಸಾಗರ್ ಖಂಡ್ರೆ ಅವರು ಜಿಲ್ಲೆಯ ಕೇಂದ್ರ ಪುರಸ್ಕೃತ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ಚಿಂಚೋಳಿ–ಮಿರಿಯಾಣ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸೇಡಂ ಉಪವಿಭಾಗಾಧಿಕಾರಿ ಪ್ರಭು ರೆಡ್ಡಿ ಅವರು ವಿಳಂಬ ಧೋರಣೆ ಅನುಸರಿಸಿದ್ದಾರೆ ಎಂಬ ಕಾರಣಕ್ಕೆ ಗರಂ ಆದ ಸಚಿವ ಶರಣಪ್ರಕಾಶ್ ಅವರು, ಸಣ್ಣ ವಿಷಯ ಮುಂದಿಟ್ಟುಕೊಂಡು ಭೂಸ್ವಾಧೀನ ಪ್ರಕ್ರಿಯೆ ತಡವಾಗುವಂತೆ ಮಾಡುವುದನ್ನು ಸಹಿಸುವುದಿಲ್ಲ ಎಂದರು. ಈ ಹಂತದಲ್ಲಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಪ್ರಭು ರೆಡ್ಡಿ ಮಧ್ಯಪ್ರವೇಶಿಸಲು ಬಂದರಾದರೂ ಸಚಿವರು, ‘ಇದರ ಸಂಪೂರ್ಣ ಮಾಹಿತಿ ನನಗೆ ಇದೆ. ಇಷ್ಟು ಸಣ್ಣ ಸಮಸ್ಯೆಯನ್ನು ಮುಂದಿಟ್ಟುಕೊಂಡು ಕೆಲಸ ಮಾಡದೇ ಇದ್ದರೆ ಹೇಗೆ?’ ಎಂದು ಹರಿಹಾಯ್ದರು.
ಪ್ರಭು ರೆಡ್ಡಿ ಮಾತನಾಡಿ, ‘ರೈತರಿಂದ ಸಾಕಷ್ಟು ಆಕ್ಷೇಪಣೆಗಳು ಬಂದಿದ್ದರಿಂದ ತಡವಾಯಿತು’ ಎಂದು ಸಮಜಾಯಿಷಿ ನೀಡಿದರು.
ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಬರುವ ವಾಡಿಯ ಬಲರಾಮ್ ಚೌಕ್ ಬಳಿ ಹಲವಾರು ವರ್ಷಗಳಿಂದ ರೈಲ್ವೆ ಮೇಲ್ಸೇತುವೆ ಕಾಮಗಾರಿ ನಡೆಯುತ್ತಲೇ ಇದೆ. ಇದು ಮುಗಿಯುವುದಾದರೂ ಯಾವಾಗ? ಕಾಲಮಿತಿಯಲ್ಲಿ ಕೆಲಸ ಪೂರ್ಣಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಿ ಎಂದು ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಇಬ್ರಾಹಿಂ ಅವರಿಗೆ ಸೂಚಿಸಿದರು.
ವರ್ಚುವಲ್ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ‘ಕಲಬುರಗಿಗೆ ಬೆಂಗಳೂರಿನಿಂದ ಸಂಚರಿಸುತ್ತಿದ್ದ ವಿಮಾನ ನಿಂತು ಹೋಗಿದೆ. ಇದನ್ನು ಪುನರಾರಂಭಿಸುವಂತೆ ಕಳೆದ ನವೆಂಬರ್‌ನಲ್ಲಿ ಸಂಸದ ರಾಧಾಕೃಷ್ಣ ದೊಡ್ಡಮನಿ ಹಾಗೂ ರಾಯಚೂರು ಸಂಸದ ಜಿ. ಕುಮಾರ ನಾಯಕ್ ಅವರು ವಿಮಾನಯಾನ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಆದರೂ ಇನ್ನೂ ಶುರುವಾಗಿಲ್ಲ’ ಎಂದರು.
‘ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಯು ಬೋಯಿಂಗ್ 737 ಮಾದರಿಯ ವಿಮಾನವನ್ನು ಓಡಿಸಲು ಡಿಜಿಸಿಎ ಅನುಮತಿಗಾಗಿ ಕಾಯುತ್ತಿದೆ. ಇದಕ್ಕೆ ಸಂಬಂಧಿಸಿದ ಕಡತ ಡಿಜಿಸಿಎ ಬಳಿ ಇದೆ’ ಎಂದು ವಿಮಾನ ನಿಲ್ದಾಣ ನಿರ್ದೇಶಕರ ಪರವಾಗಿ ಹಾಜರಾಗಿದ್ದ ಏರ್‌ಪೋರ್ಟ್ ಮ್ಯಾನೇಜರ್ ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ‘ಡಿಜಿಸಿಎಗೆ ಕಲಬುರಗಿಗೆ ವಿಮಾನ ಬರುವುದು ಬೇಕು ಎನಿಸಿದಂತಿಲ್ಲ’ ಎಂದು ಕುಟುಕಿದರು.
‘ಎಟಿಆರ್ ಮಾದರಿಯ ಸಣ್ಣ ವಿಮಾನಗಳ ಹಾರಾಟಕ್ಕೆ ವಿಮಾನಯಾನ ನಿರ್ದೇಶನಾಲಯ ಈಗಾಗಲೇ ಅನುಮತಿ ನೀಡಿದೆ. ಜಿಲ್ಲೆಯ ಪ್ರಯಾಣಿಕರ ಅಗತ್ಯಕ್ಕೆ ಇಷ್ಟು ಸಣ್ಣ ವಿಮಾನ ಸಾಕಾಗುತ್ತದೆ. ಹೀಗಾಗಿ, ಯಾವುದೇ ವಿಳಂಬ ಮಾಡದೇ ವಿಮಾನ ಶುರು ಮಾಡಲು ಕ್ರಮ ಕೈಗೊಳ್ಳಬೇಕು’ ಎಂದರು.
ಸೂರತ್–ಚೆನ್ನೈ ಕಾರಿಡಾರ್ 55 ಕಿ.ಮೀ. ಪೂರ್ಣ: ರಾಷ್ಟ್ರೀಯ ಹೆದ್ದಾರಿಗಳ ಕುರಿತು ಚರ್ಚೆಯಲ್ಲಿ ಎನ್ಎಚ್ಎಐ ಯೋಜನಾ ನಿರ್ದೇಶಕ ನವೀನ್ ಮಾತನಾಡಿ, ಜಿಲ್ಲೆಯಲ್ಲಿ ಸೂರತ್–ಚೆನ್ನೈ ಎಕಾನಮಿಕ್ ಕಾರಿಡಾರ್ ಹೈವೆ ಜಿಲ್ಲೆಯಲ್ಲಿ ಸಮಾರು 71 ಕಿ.ಮೀ. ಹಾದು ಹೋಗುತ್ತಿದೆ. ಇದರಲ್ಲಿ ಇದುವರೆಗೆ 51 ಕಿ.ಮೀ. ರಸ್ತೆ ಮಾಡಲಾಗಿದೆ ಎಂದು ಸಭೆಯ ಗಮನಕ್ಕೆ ತಂದರು. ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ಹೆದ್ದಾರಿ ಮಧ್ಯದಲ್ಲಿ ಭೀಮಾ ಮತ್ತು ಅಮರ್ಜಾ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಸೇತುವೆಗಳನ್ನು ಮಳೆಗಾಲ ಆರಂಭವಾಗುವುದರೊಳಗಾಗಿ ಪೂರ್ಣಗೊಳಿಸಿ ಎಂದು ಸೂಚನೆ ನೀಡಿದರು.
ಕಲಬುರಗಿ ನಗರದ ರಿಂಗ್ ರಸ್ತೆಯಲ್ಲಿನ ಸರ್ವಿಸ್ ರಸ್ತೆ ಬಹಳ ವಿಳಂಬವಾಗುತ್ತಿದ್ದು, ಯುಟಿಲಿಟಿಗಳನ್ನು ಬೇರೆಡೆ ಸ್ಥಳಾಂತರಿಸಿ ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದರು.
ಶಾಸಕರಾದ ಎಂ.ವೈ. ಪಾಟೀಲ, ಕನೀಜ್ ಫಾತಿಮಾ, ವಿಧಾನಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಬಿ.ಜಿ. ಪಾಟೀಲ, ಶಶೀಲ್ ಜಿ. ನಮೋಶಿ, ಮೇಯರ್ ವರ್ಷಾ ಜಾನೆ, ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿಯಾದ ಜಿ.ಪ. ಸಿಇಒ ಭಂವರ್ ಸಿಂಗ್ ಮೀನಾ, ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ, ಎಸ್ಪಿ ಅಡ್ಡೂರು ಶ್ರೀನಿವಾಸಲು, ಡಿಸಿಎಫ್ ಸುಮಿತ್ ಪಾಟೀಲ, ಉಪವಿಭಾಗಾಧಿಕಾರಿ ಸಾಹಿತ್ಯ ಆಲದಕಟ್ಟಿ ವೇದಿಕೆಯಲ್ಲಿದ್ದರು.
ಜಿಲ್ಲಾ ಮಟ್ಟದ ಅಧಿಕಾರಿಗಳು ದಿಶಾ ಸಭೆಯಲ್ಲಿ ಭಾಗವಹಿಸಿದ್ದರು.
- ‘ಗೈರಾದ ಡಿಆರ್‌ಎಂಗೆ ನೋಟಿಸ್ ಜಾರಿಗೊಳಿಸಿ’
ಸಂಸದರ ಅಧ್ಯಕ್ಷತೆಯಲ್ಲಿ ನಡೆದ ಮಹತ್ವದ ದಿಶಾ ಸಭೆಗೆ ಗೈರಾದ ಸೋಲಾಪುರ ವಿಭಾಗದ ರೈಲ್ವೆ ವಿಭಾಗೀಯ ವ್ಯವಸ್ಥಾಪಕರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಜಿ.ಪಂ. ಸಿಇಒಗೆ ಸೂಚಿಸಿದರು. ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗದಲ್ಲಿ ಕಲಬುರಗಿ ವಾಡಿ ಶಹಾಬಾದ್ ಗಾಣಗಾಪುರ ರೈಲು ನಿಲ್ದಾಣಗಳು ಬರುತ್ತವೆ. ಅವುಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಲು ಸೋಲಾಪುರ ವಿಭಾಗೀಯ ಅಧಿಕಾರಿಗಳು ಹಾಜರಿರಬೇಕು. ವಾರಕ್ಕೆ ಮುಂಚೆಯೇ ಈ ಬಗ್ಗೆ ಮಾಹಿತಿ ನೀಡಿದರೂ ಬಾರದಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸೋಲಾಪುರದ ರೈಲ್ವೆ ಅಧಿಕಾರಿಗಳಿಗೆ ಸಭೆಯ ಮಾಹಿತಿ ತಡವಾಗಿ ತಲುಪಿದೆ ಎಂದು ಅಧೀನ ಅಧಿಕಾರಿಗಳು ತಿಳಿಸಿದರು. ಇದಕ್ಕೆ ಗರಂ ಆದ ಪ್ರಿಯಾಂಕ್ ಅವರು ‘ಅವರಿಗೊಂದು ನಮಗೊಂದು ದಿನ ಸಭೆಯ ಮಾಹಿತಿ ಬರುತ್ತದೆಯೇ’ ಎಂದು ಪ್ರಶ್ನಿಸಿದರು. ಸಭೆಗೆ ವಿಮಾನ ನಿಲ್ದಾಣ ನಿರ್ದೇಶಕರು ಗೈರಾದ ಬಗ್ಗೆಯೂ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು. ವೈಯಕ್ತಿಕ ಕಾರಣಗಳಿಗಾಗಿ ಸಭೆಗೆ ಬಾರದಿರುವ ಬಗ್ಗೆ ನಿರ್ದೇಶಕರು ಅನುಮತಿ ಪಡೆದಿದ್ದಾರೆ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಸಚಿವರಿಗೆ ಮಾಹಿತಿ ನೀಡಿದರು.
‘ಯೋಜನೆಗಳು ಸಮರ್ಪಕ ಅನುಷ್ಠಾನವಾಗಲಿ
’ ಜಿಲ್ಲೆಯಲ್ಲಿ ವಿವಿಧ ಇಲಾಖೆಯಿಂದ ಅನುಷ್ಠಾನಗೊಳ್ಳುತ್ತಿರುವ ಕೇಂದ್ರ ಪುರಸ್ಕೃತ ಯೋಜನೆಗಳನ್ನು ಕಾಲಮಿತಿಯಲ್ಲಿಯೇ ಸಮಪರ್ಕವಾಗಿ ಅನುಷ್ಠಾನವಾಗುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಸಂಸದ ರಾದಾಕೃಷ್ಣ ದೊಡ್ಡಮನಿ ಹೇಳಿದರು. ದಿಶಾ ಸಭೆಯಲ್ಲಿ ವರ್ಚುವಲ್ ಮೂಲಕ ಭಾಗವಹಿಸಿ ಮಾತನಾಡಿದ ಅವರು ‘ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಅರ್ಥಿಕ ಮತ್ತು ಭೌತಿಕ ಪ್ರಗತಿ ಸಾಧಿಸಬೇಕು. ಜಿಲ್ಲೆಗೆ ಸಂಬಂಧಿಸಿದ ಏನೇ ಪ್ರಸ್ತಾವನೆಗಳು ಕೇಂದ್ರದಲ್ಲಿ ಬಾಕಿ ಇದ್ದಲ್ಲಿ ನನ್ನ ಗಮನಕ್ಕೆ ತಂದರೆ ಸಂಬಂಧಪಟ್ಟ ಸಚಿವರು ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ತ್ವರಿತಗೊಳಿಸಲು ಕ್ರಮ ವಹಿಸಲಾಗುವುದು’ ಎಂದರು. ಲೋಕಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ ಜಿಲ್ಲೆಯ ಶಾಲೆಗಳ ಸುಧಾರಣೆಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಈಗಾಗಲೇ ಸೂಚನೆ ನೀಡಿದ್ದು ಟೆಂಡರ್ ಪ್ರಕ್ರಿಯೆ ಮುಗಿಸಿ ಕಾಮಗಾರಿ ಆರಂಭಿಸಬೇಕು ಎಂದು ಅನುಷ್ಠಾನ ಏಜೆನ್ಸಿಗಳಿಗೆ ಸಂಸದರು ಸೂಚನೆ ನೀಡಿದರು.
ಕೈಕೊಟ್ಟ ನೆಟ್‌ವರ್ಕ್ ಗೊಂದಲ
ದಿಶಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸದ ರಾಧಾಕೃಷ್ಣ ದೊಡ್ಡಮನಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಸಂಸದ ಸಾಗರ್ ಖಂಡ್ರೆ ಶಾಸಕರಾದ ಡಾ. ಅವಿನಾಶ್ ಜಾಧವ್ ಬಸವರಾಜ ಮತ್ತಿಮಡು ಅವರು ವರ್ಚುವಲ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು. ಹೀಗಾಗಿ ಕೆಲವೊಮ್ಮೆ ಒಬ್ಬರು ಮಾತಾಡಿದ್ದು ಮತ್ತೊಬ್ಬರಿಗೆ ಕೇಳಿಸುತ್ತಿರಲಿಲ್ಲ. ದಿಶಾ ಸಭೆಯಲ್ಲಿ ಖುದ್ದು ಹಾಜರಿದ್ದ ಶರಣಪ್ರಕಾಶ್ ಪಾಟೀಲ ಅವರು ಮಾತನಾಡುವಾಗ ವರ್ಚುವಲ್ ಮೂಲಕ ಭಾಗವಹಿಸಿದ ಸದಸ್ಯರು ಮಾತನಾಡಲು ಶುರು ಮಾಡುತ್ತಿದ್ದರು. ಶಾಸಕ ಎಂ.ವೈ. ಪಾಟೀಲ ಅವರು ಅಫಜಲಪುರ ಪಟ್ಟಣದಲ್ಲಿ ಯುಜಿಡಿ ವ್ಯವಸ್ಥೆ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸುವಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಹೇಳಿದರು. ಆದರೆ ಅವರ ಮಾತು ಪ್ರಿಯಾಂಕ್ ಖರ್ಗೆ ಅವರಿಗೆ ಕೇಳಿಸಲಿಲ್ಲ.
ಕುಡಿಯುವ ನೀರು ಯೋಜನೆ ಪ್ರಸ್ತಾವಕ್ಕೆ ಒಪ್ಪಿಗೆ
ಕಲಬುರಗಿ ಮತ್ತು ಬೀದರ್ ಜಿಲ್ಲೆಯ ಗ್ರಾಮಗಳಿಗೆ ನಾರಾಯಣಪುರದ ಬಸವಸಾಗರ ಜಲಾಶಯದಿಂದ ನೀರು ತಂದು ಬಹುಗ್ರಾಮ ಯೋಜನೆಯಡಿ ಜಿಲ್ಲೆಯ ಜನವಸತಿ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ 50–50 ಅನುದಾನದಡಿ ಯೋಜನೆ ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ದಿಶಾ ಸಭೆ ಒಪ್ಪಿಗೆ ಸೂಚಿಸಿದೆ. ಕೆಲ ತಿಂಗಳ ಹಿಂದೆ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ₹7200 ಕೋಟಿ ವೆಚ್ಚದ ಈ ಯೋಜನೆಗೆ ಸಂಪುಟ ಸಭೆಯ ಅನುಮತಿ ದೊರೆತ ಬಗ್ಗೆ ತಿಳಿಸಿದ್ದರು. ಅದರಂತೆ ಬೀದರ್ ದಿಶಾ ಸಭೆಯಲ್ಲಿ ಈ ಯೋಜನೆಗೆ ಒಪ್ಪಿಗೆ ನೀಡಲಾಗಿತ್ತು. ಹಾಗಾಗಿ ಕಲಬುರಗಿ ದಿಶಾ ಸಭೆಯ ಅನುಮತಿ ನೀಡುವಂತೆ ಸಚಿವ ಪ್ರಿಯಾಂಕ್ ಖರ್ಗೆ ಕೋರಿದರು. ಇದಕ್ಕೆ ಸಭೆ ಒಪ್ಪಿಗೆ ಸೂಚಿಸಿತು. ಕಲಬುರಗಿ ಜಿಲ್ಲೆಯ 1235 ಮತ್ತು ಬೀದರ್ ಜಿಲ್ಲೆಯ 900 ಸೇರಿ ಒಟ್ಟು 2135 ಜನವಸತಿ ಪ್ರದೇಶಗಳಿಗೆ ನೀರು ಪೂರೈಸುವ ಯೋಜನೆ ಇದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.