ADVERTISEMENT

ಗೋಧಿ, ಸಕ್ಕರೆ ವಿತರಿಸಿ; ಮಾಸಾಶನ ಮೊತ್ತ ಹೆಚ್ಚಿಸಲು ಆಗ್ರಹಿಸಿ ಪ್ರತಿಭಟನೆ

ವಿವಿಧ ಬೇಡಿಕೆ ಈಡೇರಿಕೆಗೆ ‘ಹೊಂಗಿರಣ’ ಸಂಘದಿಂದ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2019, 12:24 IST
Last Updated 16 ಡಿಸೆಂಬರ್ 2019, 12:24 IST
ಚಿತ್ತಾಪುರ ಪಟ್ಟಣದಲ್ಲಿ ‘ಹೊಂಗಿರಣ’ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಜನರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸೋಮವಾರ ಮೆರವಣಿಗೆ ನಡೆಸಿದರು.
ಚಿತ್ತಾಪುರ ಪಟ್ಟಣದಲ್ಲಿ ‘ಹೊಂಗಿರಣ’ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಜನರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸೋಮವಾರ ಮೆರವಣಿಗೆ ನಡೆಸಿದರು.   

ಚಿತ್ತಾಪುರ: ಕಡು ಬಡವರಿಗೆ, ವೃದ್ಧರಿಗೆ, ಅಂಗವಿಕಲರಿಗೆ, ಕಲಾವಿದರಿಗೆ, ರೋಗಿಗಳಿಗೆ ಅನುಕೂಲವಾಗುವ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ‘ಹೊಂಗಿರಣ’ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಸೋಮವಾರ ಇಲ್ಲಿ ಸಾರ್ವಜನಿಕರು ಮೆರವಣಿಗೆ ನಡೆಸಿದರು.

‘ನ್ಯಾಯಬೆಲೆ ಅಂಗಡಿಗಳಲ್ಲಿ ಈಗ ಕೊಡುತ್ತಿರುವ ಅಕ್ಕಿಯೊಂದಿಗೆ ಗೋಧಿ, ಸಕ್ಕರೆ, ತೊಗರಿ ಬೇಳೆ, ಎಣ್ಣೆ ಮತ್ತು ಉಪ್ಪು ವಿತರಿಸಬೇಕು. ವಿಧವಾ ವೇತನ, ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ವೇತನ, ಅಂಗವಿಕಲ ವೇತನವನ್ನು ₹3 ಸಾವಿರಕ್ಕೆ ಹೆಚ್ಚಿಸಬೇಕು. ಜಾನಪದ ಕಲಾವಿದರ ಮಾಸಾಶನವನ್ನು ₹5 ಸಾವಿರಕ್ಕೆ ಹೆಚ್ಚಿಸಬೇಕು’ ಎಂದು ಸಂಘದ ಅಧ್ಯಕ್ಷ ಮಹ್ಮದ್ ಇಬ್ರಾಹೀಂ ಆಗ್ರಹಿಸಿದರು.

ಬಿ.ಪಿ.ಎಲ್ ಕುಟುಂಬದ ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಸ್ವಯಂ ಉದ್ಯೋಗ ಮಾಡಲು ₹1 ಲಕ್ಷ ಸಹಾಯಧನ ನೀಡಬೇಕು, ಹಿರಿಯ ನಾಗರಿಕರಿಗೆ ಮತ್ತು ಜಾನಪದ ಕಲಾವಿದರಿಗೆ ಅವರ ವಾಸಸ್ಥಳದಿಂದ 100 ಕಿ.ಮೀ ವ್ಯಾಪ್ತಿಯೊಳಗೆ ಸಂಚಾರ ಮಾಡಲು ಉಚಿತ ಬಸ್ ಪಾಸ್ ಸೌಲಭ್ಯ ನೀಡಬೇಕು. ಪುರಸಭೆ ವ್ಯಾಪ್ತಿಯಲ್ಲಿ ಮನೆ ಕಟ್ಟಿಕೊಳ್ಳಲು ಬಡವರಿಗೆ 4ಬಿ ಯೋಜನೆಯಡಿ ಸಾಲ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

‘ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರಿಗೆ ಉಚಿತ ನಿವೇಶನ, ಬಸ್ ಪಾಸ್ ವಿತರಿಸಬೇಕು. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಅಪೆಂಡಿಕ್ಸ್ ಹಾಗೂ ಇತರ ಸಣ್ಣಪುಟ್ಟ ಶಸ್ತ್ರಚಿಕಿತ್ಸೆ ಸೌಲಭ್ಯ ಮತ್ತು ಗರ್ಭಿಣಿಯರ ತಪಾಸಣೆಗೆ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ವ್ಯವಸ್ಥೆ ಮಾಡಬೇಕು. ಪುರಸಭೆ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿ.ಪಿ.ಎಲ್ ಕಟುಂಬದವರಿಗೆ ಆಸ್ತಿ ತೆರಿಗೆಯಲ್ಲಿ ಶೇ50 ರಷ್ಟು ರಿಯಾಯ್ತಿ ನೀಡಬೇಕು’ ಎಂದು ಆಗ್ರಹಿಸಿದರು.

ಪಟ್ಟಣದ ಚಿತಾವಲಿ ಚೌಕದಿಂದ ಪ್ರಮುಖ ಬೀದಿಗಳ ಮೂಲಕ ತಹಶೀಲ್ದಾರ್ ಕಚೇರಿವರೆಗೆ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದರು. ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಗ್ರೇಡ್-2 ತಹಶೀಲ್ದಾರ್ ರವೀಂದ್ರ ದಾಮಾ ಅವರಿಗೆ ಸಲ್ಲಿಸಿದರು.

ಮಲ್ಲಿಕಾರ್ಜುನ ಪಾಟೀಲ್, ಸಂತೋಷಕುಮಾರ ನಾಡಗೌಡ, ಅಂಬಾರಾಯ ಗೊಬ್ಬೂರವಾಡಿ, ಬಸವರಾಜ ದಿಕ್ಸಂಗಾ, ಯಲ್ಲಮ್ಮ, ಮೌಲಾ, ಮರೆಪ್ಪ, ನಾಗಪ್ಪ ಬಸವನಗರ, ಮಲ್ಲೇಶಿ, ಈರಮ್ಮ, ಶರಣಪ್ಪ, ರಾಮು ಚೌಕಿತಾಂಡಾ, ಮಕ್ಬೂಲ ಹಂದರಕಿ, ಗುರು, ಗಂಗುಬಾಯಿ, ಮರಗಮ್ಮ, ಗಪೂರ, ಫೇರೋಜ್, ವಾಹೇದಾಬಿ, ಹುಸೇನಬಿ, ಮಲ್ಲಮ್ಮ, ಮಹೆಬೂಬ ಅಲಿ, ನಬಿಸಾಬ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.