ADVERTISEMENT

‘ಕ್ರೀಡಾ ಮನೋಭಾವ ಬೆಳೆಸಿಕೊಳ್ಳಿ’

ಕಲಬುರಗಿ ಜಿಲ್ಲಾ ಪೊಲೀಸ್‌ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 2:45 IST
Last Updated 4 ಡಿಸೆಂಬರ್ 2021, 2:45 IST
ಕಲಬುರಗಿಯ ಪೊಲೀಸ್‌ ಕವಾಯತು ಮೈದಾನದಲ್ಲಿ ಶುಕ್ರವಾರ ನಡೆದ ಪೊಲೀಸ್‌ ವಾರ್ಷಿಕ ಕ್ರೀಡಾಕೂಟದ ಶಾಟ್‌ಪಟ್‌ನಲ್ಲಿ ದೇವಕಿ ಪಾಟೀಲ ಅವರು ಗುಂಡು ಎಸೆದ ಬಗೆ
ಕಲಬುರಗಿಯ ಪೊಲೀಸ್‌ ಕವಾಯತು ಮೈದಾನದಲ್ಲಿ ಶುಕ್ರವಾರ ನಡೆದ ಪೊಲೀಸ್‌ ವಾರ್ಷಿಕ ಕ್ರೀಡಾಕೂಟದ ಶಾಟ್‌ಪಟ್‌ನಲ್ಲಿ ದೇವಕಿ ಪಾಟೀಲ ಅವರು ಗುಂಡು ಎಸೆದ ಬಗೆ   

ಕಲಬುರಗಿ: ಪ್ರತಿನಿತ್ಯ ಒತ್ತಡದಲ್ಲಿ ಕೆಲಸ ನಿರ್ವಹಿಸುವ ಪೊಲೀಸ್ ಸಿಬ್ಬಂದಿ ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ಖುಷಿ, ನೆಮ್ಮದಿ ಸಿಗುತ್ತದೆ ಎಂದು ಪ್ರಾದೇಶಿಕ ಆಯುಕ್ತ ಡಾ.ಎನ್.ವಿ.ಪ್ರಸಾದ್ ಹೇಳಿದರು.

ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ಮೂರು ದಿನಗಳ ಪೊಲೀಸ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಎಲ್ಲರೂ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು. ಇದರಿಂದ ಯಾವುದೇ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತದೆ ಎಂದರು.

ADVERTISEMENT

ಕೋವಿಡ್‌ನಿಂದಾಗಿ ಎರಡು ವರ್ಷಗಳಿಂದ ಕ್ರೀಡಾಕೂಟವನ್ನು ಸರಿಯಾಗಿ ಆಯೋಜಿಸಲು ಸಾಧ್ಯವಾಗಿರಲಿಲ್ಲ. ಈ ವರ್ಷ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಎಲ್ಲ ಭಾಗವಹಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.

ಗಡಿಯಲ್ಲಿ ಸೈನಿಕರು ತಮ್ಮ ಪ್ರಾಣ ಒತ್ತೆ ಇಟ್ಟು ಸೇವೆ ಮಾಡುತ್ತಾರೆ. ದೇಶದೊಳಗೆ ಪೊಲೀಸರು ಅದೇ ರೀತಿಯ ಕೆಲಸ ಮಾಡುತ್ತಿದ್ದಾರೆ. ಅವರ ಸೇವೆ ಶ್ಲಾಘನೀಯ ಎಂದರು.

ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಅವರು ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಆರು ತಂಡಳಿಗೆ ಶುಭ ಕೋರಿದರು. ಡಿಎಆರ್, ಶಹಾಬಾದ್, ಚಿಂಚೋಳಿ, ಆಳಂದ, ಕಲಬುರಗಿ ಗ್ರಾಮೀಣ ಹಾಗೂ ಮಹಿಳಾ ಪೊಲೀಸ್‌ ತಂಡಗಳು ಭಾಗವಹಿಸಿವೆ. ಕಮಾಂಡರ್ ಆರ್‌ಪಿಐ ಹಣುಮಂತ ನಾಯ್ಕ ಅವರು ಪರೇಡ್ ಮುನ್ನಡೆಸಿದರು.

ಮೂರು ದಿನಗಳ ಕ್ರೀಡಾಕೂಟದಲ್ಲಿ ವಾಲಿಬಾಲ್, ಕಬಡ್ಡಿ, ಕ್ರಿಕೆಟ್, ಫೈರಿಂಗ್, ಶಾಟ್‌ಪಟ್, ಡಿಸ್ಕಸ್ ಥ್ರೋ, ಲಾಂಗ್ ಜಂಪ್, ಹೈಜಂಪ್, 4X100 ಮೀ. ರಿಲೇ, ವೈಯುಕ್ತಿಕ ಹಾಗೂ ಗುಂಪು ಸ್ಪರ್ಧೆಗಳು ಜರುಗಲಿವೆ.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ದಿಲೀಷ್‌ ಶಶಿ, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಎಸ್.ಪಿ ಮಹೇಶ್ ಮೇಘಣ್ಣನವರ್, ಲೋಕಾಯುಕ್ತ ಎಸ್.ಪಿ. ಸತೀಶ್ ಚಿಟಗುಪ್ಪಿ, ನಿವೃತ್ತ ಪೊಲೀಸ್‌ ಅಧಿಕಾರಿಗಳ ಸಂಘದ ಅಧ್ಯಕ್ಷ ಬಸವರಾಜ್ ಇಂಗಿನ್ ಮತ್ತು ಸಿಬ್ಬಂದಿ ಇದ್ದರು.

ಸುರೇಶ ಪಾಟೀಲ ನಿರೂಪಿಸಿದರು. ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.