ADVERTISEMENT

ಹಾಸ್ಟೆಲ್‌ ನಿರ್ಮಾಣಕ್ಕೆ ₹ 5 ಲಕ್ಷ ದೇಣಿಗೆ

ವೀರಶೈವ ಲಿಂಗಾಯತ ಬಾಲಕಿಯರ ವಸತಿ ನಿಲಯ ನಿರ್ಮಾಣಕ್ಕೆ ಬಸವೇಶ್ವರ ಬ್ಯಾಂಕ್‌ ನೆರವು

​ಪ್ರಜಾವಾಣಿ ವಾರ್ತೆ
Published 1 ಜೂನ್ 2021, 1:40 IST
Last Updated 1 ಜೂನ್ 2021, 1:40 IST
ಕಲಬುರ್ಗಿಯಲ್ಲಿ ಹಾಸ್ಟೆಲ್‌ ನಿರ್ಮಾಣಕ್ಕೆ ಬಸವೇಶ್ವರ ಬ್ಯಾಂಕಿನಿಂದ ನೀಡಿದ ₹ 5 ಲಕ್ಷದ ದೇಣಿಗೆ ಚೆಕ್‌ಅನ್ನು ಚಂದ್ರಶೇಖರ ತಳ್ಳಳ್ಳಿ ಅವರು ಶಾಸಕ ಶರಣಬಸಪ್ಪ ದರ್ಶನಾಪುರ ಅವರಿಗೆ ಹಸ್ತಾಂತರಿಸಿದರು
ಕಲಬುರ್ಗಿಯಲ್ಲಿ ಹಾಸ್ಟೆಲ್‌ ನಿರ್ಮಾಣಕ್ಕೆ ಬಸವೇಶ್ವರ ಬ್ಯಾಂಕಿನಿಂದ ನೀಡಿದ ₹ 5 ಲಕ್ಷದ ದೇಣಿಗೆ ಚೆಕ್‌ಅನ್ನು ಚಂದ್ರಶೇಖರ ತಳ್ಳಳ್ಳಿ ಅವರು ಶಾಸಕ ಶರಣಬಸಪ್ಪ ದರ್ಶನಾಪುರ ಅವರಿಗೆ ಹಸ್ತಾಂತರಿಸಿದರು   

ಕಲಬುರ್ಗಿ: ‘ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ನಗರದಲ್ಲಿ ವೀರಶೈವ ಲಿಂಗಾಯತ ಬಾಲಕಿಯರ ವಸತಿ ನಿಲಯ ನಿರ್ಮಾಣ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಇದಕ್ಕೆ ನಮ್ಮ ಸಂಪೂರ್ಣ ಸಹಕಾರವಿದೆ’ ಎಂದು ಬಸವೇಶ್ವರ ಬ್ಯಾಂಕ್‌ ಅಧ್ಯಕ್ಷ ಚಂದ್ರಶೇಖರ ತಳ್ಳಳ್ಳಿ ಹೇಳಿದರು.

ನಗರದಲ್ಲಿ ಸೋಮವಾರ ಹಾಸ್ಟೆಲ್‌ ಕಾಮಗಾರಿಗಾಗಿ ₹ 5 ಲಕ್ಷದ ದೇಣಿಗೆ ಚೆಕ್‌ ಅನ್ನು ಕಟ್ಟಡ ನಿರ್ಮಾಣ ಉಸ್ತುವಾರಿ ಅಧ್ಯಕ್ಷ, ಶಾಸಕ ಶರಣಬಸಪ್ಪ ದರ್ಶನಾಪುರ ಅವರಿಗೆ ನೀಡಿದ ವೇಳೆ ಮಾತನಾಡಿದರು.

‘ಹಿರಿಯರಾದ ಶಾಮನೂರು ಶಿವಶಂಕರಪ್ಪ, ಈಶ್ವರ ಖಂಡ್ರೆ ಅವರ ಮಾರ್ಗದರ್ಶನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಶರಣಕುಮಾರ ಮೋದಿ ಅವರು ಬಾಲಕಿಯರ ಉಚಿತ ವಸತಿ ನಿಲಯ ನಿರ್ಮಿಸುತ್ತಿರುವುದು ಹೆಮ್ಮಯ ಸಂಗತಿ. ಈ ಭಾಗದಲ್ಲಿ ಸಮಾಜದ ಮೊದಲ ಬಾಲಕಿಯರ ವಸತಿ ನಿಲಯ ಇದಾಗಿದೆ. ಸಮಾಜದ ಒಗ್ಗಟ್ಟಿನ ಶಕ್ತಿಗೆ ಸಾಕ್ಷಿಯಾಗಲಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ವೈಯಕ್ತಿಕ ಹಾಗೂ ಬ್ಯಾಂಕಿನಿಂದಲೂ ಹೆಚ್ಚಿನ ಸಹಾಯ ಮಾಡುತ್ತೇವೆ’ ಎಂದರು.

ADVERTISEMENT

ಚೆಕ್‌ ಸ್ವೀಕರಿಸಿದ ಶರಣಬಸಪ್ಪ ದರ್ಶನಾಪುರ ಮಾತನಾಡಿ, ‘ಇದು ಸಮಾಜದಿಂದ ನಡೆಸುವ ಶೈಕ್ಷಣಿಕ ದಾಸೋಹ. ನಮ್ಮ ಸಮಾಜದಲ್ಲಿ ಅನುಕೂಲ ಇದ್ದ ಎಲ್ಲರೂ ನೆರವು ನೀಡಿದರೆ ಕನಸು ಕೈಗೂಡುತ್ತದೆ. ಅಲ್ಲದೇ, ಬೇರೆಬೇರೆ ಭಾಗಗಳಲ್ಲಿ ಇರುವ ಸಮಾಜದ ಬ್ಯಾಂಕುಗಳು ಕೂಡ ಇದಕ್ಕೆ ಆರ್ಥಿಕ ಬಲ ನೀಡಲಿ’ ಎಂದೂ ಕೋರಿದರು.

ಸಮಾಜದ ಮುಖಂಡರಾದ ಆರ್.ಜಿ. ಶೆಟಗಾರ, ಸಿದ್ರಾಮಪ್ಪ ಪಾಟೀಲ, ಶಿವಲಿಂಗಪ್ಪ ಬಂಡಕ, ಬಸವೇಶ್ವರ ಬ್ಯಾಂಕನ ಉಪಾಧ್ಯಕ್ಷ ಎಂ.ಡಿ.ಪಾಟೀಲ, ಆಡಳಿತ ಮಂಡಳಿ ಸದಸ್ಯ ಧರ್ಮಪ್ರಕಾಶ ಪಾಟೀಲ, ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಮುಖಂಡರಾದ ಜ್ಯೋತಿ ಮರಗೋಳ ಹಾಗೂ ವಸತಿ ನಿಲಯದ ಉಸ್ತುವಾರಿ ಸದಸ್ಯ ಸೋಮಶೇಖರ ಹಿರೇಮಠ, ಭೀಮಾಶಂಕರ ಮೀಟೇಕಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.