ADVERTISEMENT

ಕಲಬುರಗಿ: ತಿಂಗಳಾಂತ್ಯಕ್ಕೆ ದೂರದರ್ಶನ ಕೇಂದ್ರ ಬಂದ್‌

ಗೊಂದಲಗಳಿಗೆ ‘ತೆರೆ’ ಎಳೆದ ದೂರದರ್ಶನ ಮಹಾನಿರ್ದೇಶನಾಲಯ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 6:50 IST
Last Updated 9 ಅಕ್ಟೋಬರ್ 2021, 6:50 IST

ಕಲಬುರಗಿ: ದೂರದರ್ಶನದ ಕಲಬುರಗಿಯ ಕೇಂದ್ರವನ್ನು ಇದೇ 31ರಿಂದ ಸಂಪೂರ್ಣವಾಗಿ ಮುಚ್ಚಲಾಗುತ್ತಿದೆ ಎಂದು ದೂರದರ್ಶನ ಮಹಾನಿರ್ದೇಶನಾಲಯ ತಿಳಿಸಿದೆ.

ಕೆಲ ತಿಂಗಳ ಹಿಂದೆಯೇ ಇದನ್ನು ಮುಚ್ಚುವ ಪ್ರಸ್ತಾವ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆಗ ಟ್ವೀಟ್‌ ಮೂಲಕ ಸ್ಪಷ್ಟನೆ ನೀಡಿದ್ದ ದೂರದರ್ಶನ ಹಾಗೂ ಆಲ್‌ ಇಂಡಿಯಾ ರೇಡಿಯೊದ ಪ್ರಾದೇಶಿಕ ಕಚೇರಿಯವರು, ‘ಇದು ಸುಳ್ಳು ಸುದ್ದಿ. ಕಲಬುರಗಿ ಕೇಂದ್ರ ಮುಚ್ಚುವುದಿಲ್ಲ’ ಎಂದಿದ್ದರು.

ದೇಶದ 152 ಆಕಾಶವಾಣಿ ಮತ್ತು ದೂರದರ್ಶನ ಕೆಂದ್ರಗಳನ್ನು ಅಕ್ಟೋಬರ್ 31ರೊಳಗೆ ಮುಚ್ಚುವಂತೆ ಪ್ರಸಾರ ಭಾರತಿಯ ಆರ್.ಎನ್.ಮೀನಾ ಆದೇಶಿಸಿದ್ದರು. ಇದರಲ್ಲಿ ಕಲಬುರಗಿ ಕೇಂದ್ರವೂ ಸೇರಿದ್ದರಿಂದ ಜಿಲ್ಲೆಯ ಜನ ಪ್ರತಿರೋಧ ತೋರಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಸಂಸದ ಡಾ.ಉಮೇಶ ಜಾಧವ, ‘ದೂರದರ್ಶನ ಕೇಂದ್ರವನ್ನು ಯಾವುದೇ ಕಾರಣಕ್ಕೂ ಮುಚ್ಚಲು ಬಿಡುವುದಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಅಂಥ ಯಾವುದೇ ಪ್ರಸ್ತಾವ ಕೇಂದ್ರ ಸರ್ಕಾರದ ಮುಂದೆ ಇಲ್ಲ. ವದಂತಿಗೆ ಕಿವಿಗೊಡಬೇಡಿ’ ಎಂದು ಹೇಳಿದ್ದರು.‌

ADVERTISEMENT

ಆದರೆ, ಈಗ ಸ್ವತಃ ದೂರದರ್ಶನ ಮಹಾನಿರ್ದೇಶನಾಲಯವೇ ನಿರ್ಧಾರ ಪ್ರಕಟಿಸಿ, ಎಲ್ಲ ವಿಚಾರಗಳಿಗೂ ತೆರೆ ಎಳೆದಿದೆ.

44 ವರ್ಷಗಳ ಸೇವೆ: 1977ರ ಸೆಪ್ಟೆಂಬರ್‌ 3ರಂದು ಕಲಬುರಗಿಯಲ್ಲಿ ಈ ದೂರದರ್ಶನ ಕೇಂದ್ರವನ್ನು ಆರಂಭಿಸಲಾಗಿತ್ತು. ರಾಜ್ಯದಲ್ಲಿ ತೆರೆದ ಮೊದಲ ಕೇಂದ್ರ ಎಂಬ ಹೆಗ್ಗಳಿಕೆಯೂ ಇದರದ್ದು. 44 ವರ್ಷಗಳ ಸುದೀರ್ಘ ಕಾರ್ಯನಿರ್ವಹಿಸಿದ ನಂತರ ಕೇಂದ್ರ ಸರ್ಕಾರ ಇದನ್ನು ಬಂದ್‌ ಮಾಡಿದೆ.

‘ಕಲ್ಯಾಣ ಕರ್ನಾಟಕ ಭಾಗದ ಸಾಹಿತ್ಯ, ಸಾಂಸ್ಕೃತಿಕ, ಕೃಷಿ ಹಾಗೂ ಪ್ರಾದೇಶಿಕ ಮಹತ್ವಗಳನ್ನು ಬಿಂಬಿಸುವಂಥ ಕೆಲಸ ಮಾಡಬೇಕಾದ ದೂರದರ್ಶನ ಕೇಂದ್ರವು ಹಲವು ವರ್ಗಳಿಂದಲೇ ನಿಷ್ಕ್ರಿಯವಾಗಿದೆ. ಇದನ್ನು ಪೂರ್ಣ ನಿಲ್ಲಿಸುವ ಬಗ್ಗೆ ಸಾಕಷ್ಟು ಗೊಂದಲಗಳು ಇದ್ದವು. ಈ ಭಾಗದ ಸಾಹಿತಿ, ಕಲಾವಿದರು ಮುಚ್ಚದಂತೆ ಸಾಕಷ್ಟು ಒತ್ತಾಯ ಮಾಡಿದ್ದೇವೆ. ಆದರೆ, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಅಥವಾ ನಮ್ಮ ಸಂಸದರಾಗಲಿ ಜನರ ಧ್ವನಿಗೆ ಬೆಲೆ ಕೊಡಲಿಲ್ಲ. ಸಾಂಸ್ಕೃತಿಕ ಸಿರಿವಂತಿಕೆ ಬೆಳಗಬೇಕಾದ ಕೇಂದ್ರವನ್ನು ಅಭಿವೃದ್ಧಿಪಡಿಸುವ ಬದಲು ಎತ್ತಂಗಡಿ ಮಾಡಿದ್ದು, ಈ ಭಾಗದ ಬಗ್ಗೆ ಸರ್ಕಾರ ತಳೆದ ಧೋರಣೆ ತೋರಿಸುತ್ತದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ವೀರಭದ್ರ ಸಿಂಪಿ ಆಕ್ರೋಶ ಹೊರಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.