ADVERTISEMENT

ಜೋಡಿ ಕೊಲೆ: ಪ್ರಮುಖ ಆರೋಪಿಗಳ ಬಂಧನಕ್ಕೆ ಆಗ್ರಹ

ಅನಾಥವಾದ ಏಳು ಮಕ್ಕಳಿಗೆ ರಾಜ್ಯ ಸರ್ಕಾರದ ನೆರವು ಅಗತ್ಯ: ಸಂದೀಪ ಪಾಟೀಲ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 14:37 IST
Last Updated 22 ಅಕ್ಟೋಬರ್ 2020, 14:37 IST

ಕಲಬುರ್ಗಿ: ‘ಕಮಲಾಪುರ ತಾಲ್ಲೂಕಿನ ತಾಂಡಾವೊಂದರಲ್ಲಿ ಈಚೆಗೆ ನಡೆದ ಜೋಡಿ ಕೊಲೆ ಪ್ರಕರಣದ ಉಳಿದ ಆರೋಪಿಗಳನ್ನೂ ಬಂಧಿಸಬೇಕು. ತಂದೆ– ತಾಯಿ ಕಳೆದುಕೊಂಡು ಏಳು ಮಕ್ಕಳಿಗೆ ಸರ್ಕಾರದಿಂದ ಪರಿಹಾರ ಕೊಡಬೇಕು’ ಎಂದುಸೋಷಿಯಲ್ ಎವಿಲ್ ಎರಾಡಿಯೇಶನ್ ಫೋರಂನ ಅಧ್ಯಕ್ಷ ಸಂದೀಪ ಪಾಟೀಲ ಆಗ್ರಹಿಸಿದರು.

‘ಪೋಕ್ಸೊ ಪ್ರಕರಣದ ಪ್ರತೀಕಾರಕ್ಕಾಗಿ ಈ ದಂಪತಿ ಕೊಲೆ ನಡೆದಿದೆ. ಸ್ವತಃ ಕೊಲೆ ಆರೋಪಿಯ ತಂದೆ ಹಾಗೂ ಒಬ್ಬ ಪೊಲೀಸ್‌ ಕಾನ್‌ಸ್ಟೆಬಲ್‌ ಕೂಡ ಈ ಕೊಲೆ ಮಾಡಿಸುವಲ್ಲಿ ಭಾಗಿಯಾಗಿದ್ದಾರೆ’ ಎಂದು ಅವರು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘14 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಸಂಬಂಧ ಆಕೆಯ ಪೋಷಕರು ಟೋಗು ಅಲಿಯಾಸ್ ಸದಾಶಿವ ಮತ್ತು ಮಹೇಶ ರಾಠೋಡ ಎಂಬುವವರ ವಿರುದ್ಧ ಆಗಸ್ಟ್‌ 20ರಂದು ಪೋಕ್ಸೊ ಅಡಿ ಪ್ರಕರಣ ದಾಖಲಿಸಿದ್ದರು. ಇದರಲ್ಲಿ ಮೊದಲ ಆರೋಪಿಯಾಗಿ ಟೋಗುನನ್ನು ಪೊಲೀಸರು ಬಂಧಿಸಿದ್ದರು. ಈ ನಡುವೆ ಮುಖಂಡರ ಸಮ್ಮುಖದಲ್ಲಿ ಆರೋಪಿಯ ತಂದೆ ಮತ್ತು ಸಂತ್ರಸ್ತೆಯ ತಂದೆ ಮಧ್ಯೆ ರಾಜಿ ಸಂಧಾನ ಮಾಡಲಾಗಿತ್ತು. ಆರೋಪಿ ಟೋಗು ಜೈಲಿನಿಂದ ಹೊರಬಂದ ನಂತರ ಮದುವೆ ಮಾಡಿಸುವ ಬಗ್ಗೆ ಸೆಪ್ಟೆಂಬರ್‌ 18ರಂದು ಕರಾರು ಆಗಿತ್ತು.ಒಂದೇ ವೇಳೆ ಮದುವೆ ಆಗದೆ ಇದ್ದರೆ ಸಂತ್ರಸ್ತೆಗೆ ₹ 5 ಲಕ್ಷ ನೀಡುವುದಾಗಿ ಆರೋಪಿಯ ತಂದೆ ಟೋಪು ರಾಠೋಡ ಕರಾರು ಪತ್ರ ಬರೆದುಕೊಟ್ಟಿದ್ದರು. ಆದರೆ, ಇದಾದ 15 ದಿನದೊಳಗೆ ಹಣ ಕೊಡಲಾಗದ ಕಾರಣ ಸಂತ್ರಸ್ತೆಯ ತಂದೆ– ತಾಯಿಯನ್ನು ಮಹೇಶ ಮತ್ತು ಸಂಗಡಿಗರಿಂದ ಕೊಲೆ ಮಾಡಿಸಿದ್ದಾರೆ. ಸಂಚಿನಲ್ಲಿ ಮಹೇಶನ ತಂದೆ ಸುಭಾಷ ಹಾಗೂ ಒಬ್ಬ ಪೊಲೀಸ್‌ ಕಾನ್‌ಸ್ಟೆಬಲ್‌ ಸಹ ಭಾಗಿಯಾಗಿದ್ದಾರೆ’ ಎಂದು ದೂರಿದರು.

ADVERTISEMENT

‘ಜೋಡಿ ಕೊಲೆ ಬಗ್ಗೆ 15 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ, ಪ್ರಕರಣದಲ್ಲಿ ಆರೋಪಿ–1 ಸುಭಾಷ ರಾಠೋಡ, ಆರೋಪಿ– 2 ವಸಂತ ರಾಠೋಡ ಎಂಬುವವರನ್ನೇ ಬಂಧಿಸಿಲ್ಲ. ಹೀಗಾಗಿ ಪೊಲೀಸರು ರಾಜಕೀಯ ಒತ್ತಡಕ್ಕೆ ಸಿಲುಕಿರುವ ಅನುಮಾನ ಬರುತ್ತಿದೆ. ತಂದೆ– ತಾಯಿಯನ್ನು ಕಳೆದುಕೊಂಡು ಮಕ್ಕಳಿಗೆ ಇದೂವರೆಗೆ ಯಾವುದೇ ಜನಪ್ರತಿನಿಧಿಗಳು ಸಾಂತ್ವನ ಹೇಳಿಲ್ಲ. ಪ್ರಮುಖ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು, ಮಕ್ಕಳ ಜೀವನ ಭದ್ರತೆಗೆ ಕ್ರಮ ಕೈಗೊಳ್ಳಬೇಕು’ ಎಂದೂ ಆಗ್ರಹಿಸಿದರು.

ಸಂತ್ರಸ್ತ ಮಕ್ಕಳು ಹಾಗೂ ಅವರ ಚಿಕ್ಕಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.