ಚಿಂಚೋಳಿ: ತವರು ಮನೆಯಿಂದ ಬಂಗಾರ ಹಾಗೂ ಹಣ ತರುವಂತೆ ಪೀಡಿಸುತ್ತಿದ್ದ ಪತ್ನಿ ಹಾಗೂ ಗಂಡನ ಮನೆಯವರ ಕಿರುಕುಳದಿಂದ ಪತ್ನಿ ನೇಣುಹಾಕಿಕೊಂಡು ಗಂಡನ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗಿರಿಜಾ ಮಲ್ಲಿಕಾರ್ಜುನ (23) ಮೃತರು. ‘ಈ ಸಂಬಂಧ ಗಿರಿಜಾ ಅವರ ಪತಿ ಮಲ್ಲಿಕಾರ್ಜುನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ತಾಲ್ಲೂಕಿನ ಬೆಡಕಪಳ್ಳಿ ಗ್ರಾಮದ ರವಿಕುಮಾರ ಅವರ ಪುತ್ರಿ ಗಿರಿಜಾ ಅವರನ್ನು ಅಣವಾರ ಗ್ರಾಮದ ಮಲ್ಲಿಕಾರ್ಜುನ ಪ್ರಭುನಾಥ ಅವರೊಂದಿಗೆ 2024ರ ಜನವರಿ 8ರಂದು ವಿವಾಹ ಮಾಡಿಕೊಡಲಾಗಿತ್ತು.
‘ಮದುವೆ ಕಾಲಕ್ಕೆ ₹1 ಲಕ್ಷ ಹಾಗೂ 20 ಗ್ರಾಂ ಬಂಗಾರ ವರದಕ್ಷಿಣೆಯಾಗಿ ನೀಡಲಾಗಿತ್ತು. ಮದುವೆಯಾದ 3–4 ತಿಂಗಳಿನಿಂದಲೇ ಪತಿಯ ಮನೆಯವರು ಪೀಡಿಸುತ್ತಿದ್ದರು. ತವರಿಗೆ ಬಂದಾಗ ಅವಳು ಕಿರುಕುಳ ಕುರಿತು ನನ್ನಲ್ಲಿ ಅಳಲು ತೋಡಿಕೊಂಡಿದ್ದಳು. ಆದರೂ ನಾನು ಅವಳಿಗೆ ಗಂಡನ ಮನೆಗೆ ಕಳುಹಿಸಿಕೊಟ್ಟಿದ್ದೆ. ಅ.8ರಂದು ನಮ್ಮ ಮನೆಯ ಕಾರ್ಯಕ್ರಮವಿತ್ತು. ಆಗ 5 ಗ್ರಾಂ ಬಂಗಾರ ಭಾವನಿಗೆ ನೀಡಿದ್ದೇವೆ. ಆದರೆ, ನನ್ನ ತಂಗಿಯನ್ನು ತವರಿಗೆ ಬರುವಂತೆ ನನ್ನ ಪತ್ನಿ ಕರೆದಾಗ ಗಂಡ ಕಳುಹಿಸಲು ಒಪ್ಪುತ್ತಿಲ್ಲ ಎಂದು ನೋವು ತೋಡಿಕೊಂಡಿದ್ದಳು’ ಎಂದು ಮೃತಳ ಅಣ್ಣ ಬಸವರಾಜ ರವಿಕುಮಾರ ದೂರಿನಲ್ಲಿ ತಿಳಿಸಿದ್ದಾರೆ.
‘ಆಗ ನಾನು ನೀವು ಕೇಳಿದಂತೆ ನಿಮಗೆ 5 ಗ್ರಾಂ ಬಂಗಾರ ನೀಡಿದ್ದೇವೆ. ಹಬ್ಬಕ್ಕೆ ನನ್ನ ತಂಗಿಯನ್ನು ಯಾಕೆ ಕಳುಹಿಸುವುದಿಲ್ಲ ಎಂದು ಕೇಳಿದಾಗ ‘ಕರೆದುಕೊಂಡು ಹೋಗಿ’ ಎಂದಿದ್ದನು. ಅದೇ ದಿನ ನಾನು ಬೆಂಗಳೂರಿನಿಂದ ಬರುವಾಗ ನನಗೆ ಕರೆಮಾಡಿದ ಮಲ್ಲಿಕಾರ್ಜುನ ‘ನಿನ್ನ ತಂಗಿ ನೇಣು ಹಾಕಿಕೊಂಡಿದ್ದಾರೆ’ ಎಂದು ಹೇಳಿ ಫೋನ್ ಕರೆ ಕಟ್ ಮಾಡಿದ್ದ. ನನ್ನ ತಂಗಿ ಸಾವಿಗೆ ಅವಳ ಪತಿ ಮಲ್ಲಿಕಾರ್ಜುನ ಪ್ರಭುನಾಥ, ಅತ್ತೆ ಶಿವಾನಂದಮ್ಮ ಕಿರುಕುಳವೇ ಕಾರಣ’ ಎಂದೂ ದೂರಿನಲ್ಲಿ ವಿವರಿಸಿದ್ದಾರೆ.
ಈ ಕುರಿತು ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಬ್ ಇನ್‌ಸ್ಪೆಕ್ಟರ್ ಗಂಗಮ್ಮ ಜಿನಿಕೇರಿ ತನಿಖೆ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.