ADVERTISEMENT

ಮುಖ್ಯಮಂತ್ರಿ ಸ್ಥಾನ ಇರುವುದೇ ರೆಕಾರ್ಡ್ ಮುರಿಯಲು: ಎಚ್‌.ಸಿ.ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2025, 13:21 IST
Last Updated 23 ಫೆಬ್ರುವರಿ 2025, 13:21 IST
ಡಾ.ಎಚ್‌.ಸಿ. ಮಹದೇವಪ್ಪ
ಡಾ.ಎಚ್‌.ಸಿ. ಮಹದೇವಪ್ಪ   

ಕಲಬುರಗಿ: ‘ನಾಯಕತ್ವ ಬದಲಾವಣೆಯಾಗುವ ವಿಚಾರ ಇಲ್ಲವೇ ಇಲ್ಲ. ಮುಖ್ಯಮಂತ್ರಿ ಸ್ಥಾನ ಇರುವುದೇ ರೆಕಾರ್ಡ್ ಮುರಿಯುವುದಕ್ಕೆ. ಅವಕಾಶ ಸಿಕ್ಕಾಗ ರಾಜ್ಯದ ಅಭಿವೃದ್ಧಿ ಮಾಡಬೇಕು, ಜನರ ಹಿತಕಾಪಾಡಿ ಶೋಷಿತರನ್ನು ರಕ್ಷಣೆ ಮಾಡಬೇಕು’ ಎನ್ನುವ ಮೂಲಕ ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರು ಮುಖ್ಯಮಂತ್ರಿ ಬದಲಾವಣೆಯ ಊಹಾಪೋಹಗಳನ್ನು ತಳ್ಳಿ ಹಾಕಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಸಿ.ಎಂ ಬದಲಾವಣೆ ತೀರ್ಮಾನವನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ. ನಾನು, ಇನ್ಯಾರೋ ಮಾತನಾಡಿ ನಿರ್ಧಾರ ಮಾಡುವುದಕ್ಕೆ ಆಗಲ್ಲ. ಈಗಾಗಲೇ ಹೈಕಮಾಂಡ್ ನಿರ್ಧರಿಸಿದ್ದು, ಏನೇ ಮಾಡಬೇಕಾದರೂ ಅವರ ವ್ಯಾಪ್ತಿಗೆ ಬರುತ್ತದೆ’ ಎಂದರು.

ದಲಿತ ಸಿ.ಎಂ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ದಲಿತರು ಇಡೀ ದೇಶದಲ್ಲಿ ಗಣನೀಯ ಪ್ರಮಾಣದಲ್ಲಿದ್ದಾರೆ. ಡಾ.ಬಿ.ಆರ್. ಅಂಬೇಡ್ಕರ್ ಸಹ ಅಧಿಕಾರ ನಿರ್ಣಯ ಸ್ತರದಲ್ಲಿ ದಲಿತರು ಇರಬೇಕೆಂದು ಬಯಸಿದ್ದರು. ಪಕ್ಷ ಯಾವಾಗ ಸೂಕ್ತ ಸಮಯದಲ್ಲಿ ನಿರ್ಧಾರ ಮಾಡುತ್ತಾರೋ, ಜನರ ಆಶೀರ್ವಾದ ಸಿಗುತ್ತದೆಯೋ ಆ ಸಮಯದಲ್ಲಿ ಆಗುತ್ತದೆ’ ಎಂದು ಹೇಳಿದರು.

ADVERTISEMENT

‘ದಲಿತ ಸಮಾವೇಶ ಮಾಡಲು ಯಾರ ಅಪಸ್ವರವೂ ಇಲ್ಲ. ರಾಜಕೀಯ ಪಕ್ಷಗಳು, ಸಂಘಟನೆಗಳು, ಸಮಾಜದ ಸಮಾವೇಶಗಳು ನಡೆಯುತ್ತಲೇ ಇರುತ್ತವೆ. ದಲಿತರ ಸಮಸ್ಯೆಗಳು ಇರುವತನಕ ಅವು ನಿರಂತರವಾಗಿ ನಡೆಯುತ್ತವೆ. ಅದು ಅಂಬೇಡ್ಕರ್ ಕೊಟ್ಟಿರುವ ಮಂತ್ರ. ಅದನ್ನು ಯಾರೂ ಬೇಡ ಎನ್ನಲು ಆಗಲ್ಲ. ಪಕ್ಷದ ವೇದಿಕೆಯಲ್ಲಿ ಮಾಡುವಾಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮಾಡುವಂತೆ ಹೇಳಿದ್ದಾರೆ. ಯಾವುದಾದರೂ ವಿಷಯ ಮಾತಾಡುವಾಗ ಪಕ್ಷಕ್ಕೆ ಮುಜುಗರ ಆಗದಂತೆ ನೋಡಿಕೊಳ್ಳಲು ಸೂಚಿಸಿದ್ದಾರೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.