ಕಲಬುರಗಿ: ಲಾಲಗೇರಿ ಕ್ರಾಸ್– ಶಹಾಬಜಾರ್ ನಡುವಿನ ಒಳ ಚರಂಡಿ ಕಾಮಗಾರಿಯನ್ನು ಮಾರ್ಚ್ 16ರ ಒಳಗಾಗಿ ಪೂರ್ಣಗೊಳಿಸಿ, ಸಾರ್ವಜನಿಕರ ಸುಗಮ ಓಡಾಟಕ್ಕೆ ಅನುವು ಮಾಡಿಕೊಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಮಹಾನಗರ ಪಾಲಿಕೆ ಹಾಗೂ ಗುತ್ತಿಗೆದಾರರಿಗೆ ಬುಧವಾರ ಸೂಚಿಸಿದೆ.
ಸಾರ್ವಜನಿಕರ ಸುರಕ್ಷತೆ ಹಾಗೂ ಶರಣಬಸವೇಶ್ವರ ಜಾತ್ರೆ ಸಮೀಪಿಸುತ್ತಿದ್ದರೂ ಆಮೆಗತಿಯಲ್ಲಿ ಸಾಗುತ್ತಿರುವ ಒಳ ಚರಂಡಿ ಕಾಮಗಾರಿ ಬಗ್ಗೆ ಆಕ್ಷೇಪಿಸಿ ಜೈ ಭಾರತ ಮಾತಾ ಸೇವಾ ಸಮಿತಿ ರಾಷ್ಟ್ರೀಯ ವಕ್ತಾರ, ವಕೀಲ ವೈಜನಾಥ ಎಸ್.ಝಳಕಿ ಅವರು ಮಂಗಳವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು.
ಹಿರಿಯ ಸಿವಿಲ್ ನ್ಯಾಯಾಧೀಶರೂ ಆಗಿರುವ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ್ ನವಲೆ ಅವರು ಅರ್ಜಿಯನ್ನು ತ್ವರಿತವಾಗಿ ಪರಿಗಣಿಸಿ, ವಿಚಾರಣೆಗೆ ಹಾಜರು ಆಗುವಂತೆ ಪಾಲಿಕೆ ಹಾಗೂ ಗುತ್ತಿಗೆದಾರರಿಗೆ ಆದೇಶಿಸಿದರು. ಗುತ್ತಿಗೆದಾರ ಅಬ್ದುಲ್ ರಷೀದ್ ಹಾಗೂ ಪಾಲಿಕೆಯ ಜೆಇ ರವೀಂದ್ರನಾಥ ಚವ್ಹಾಣ್ ಅವರು ಪ್ರಾಧಿಕಾರದ ಮುಂದೆ ಹಾಜರಾದರು.
‘ಶಹಾಬಜಾರ್‌ನಿಂದ ಲಾಲಗೇರಿ ಕ್ರಾಸ್‌ವರೆಗಿನ ಒಂದು ಬದಿಯ ರಸ್ತೆಯನ್ನು ಸಂಪೂರ್ಣವಾಗಿ ತೋಡಿ, ಒಳಚರಂಡಿ ನಿರ್ಮಾಣ ಮಾಡಲಾಗುತ್ತಿದೆ. ಸಾರ್ವಜನಿಕರ ಸುರಕ್ಷತೆಗಾಗಿ ಯಾವುದೇ ಮುಂಜಾಗ್ರತೆ ತೆಗೆದುಕೊಂಡಿಲ್ಲ. ಕಾಮಗಾರಿ ಇನ್ನೂ ಪ್ರಗತಿಯಲ್ಲಿದ್ದು, ಮಾರ್ಚ್ 18 ಮತ್ತು 19ರಂದು ಶರಣಬಸವೇಶ್ವರ ಜಾತ್ರೆ ನಡೆಯಲಿದೆ. ಲಕ್ಷಾಂತರ ಜನರು ಸೇರುತ್ತಾರೆ. ಹೀಗಾಗಿ, ಸುರಕ್ಷತೆ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ನ್ಯಾ. ಶ್ರೀನಿವಾಸ್ ನವಲೆ ಅವರು ತಾಕೀತು ಮಾಡಿದರು.
‘ಬುಧವಾರ ಬೆಳಿಗ್ಗೆ ದೂರುದಾರರ ಜತೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಚರಂಡಿ ಕಾಮಗಾರಿಯನ್ನು ಮಾರ್ಚ್ 16ರ ಒಳಗಾಗಿ ಪೂರ್ಣಗೊಳಿಸಬೇಕು’ ಎಂದರು.
‘ಗುತ್ತಿಗೆದಾರ ಹಾಗೂ ಪಾಲಿಕೆಯ ಎಂಜಿನಿಯರ್ ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಬುಧವಾರದಿಂದಲೇ ಕಾಮಗಾರಿ ಕೆಲಸವನ್ನು ತ್ವರಿತಗೊಳಿಸಿದ್ದು, 45 ಕಾರ್ಮಿಕರನ್ನು ನಿಯೋಜನೆ ಮಾಡಿದ್ದಾರೆ’ ಎಂದು ಅರ್ಜಿದಾರ ವೈಜನಾಥ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.