ಶಹಾಬಾದ್: ಕೆಟ್ಟು ನಿಂತ ಬೋರ್‌ವೆಲ್‌ಗಳು, ದುರಸ್ತಿ ಕಾಣದ ಪೈಪ್‌ಲೈನ್‌ಗಳು, ಸಮಸ್ಯೆ ಹೊತ್ತು ನಿಂತ ಶುದ್ಧ ಕುಡಿಯುವ ನೀರಿನ ಘಟಕಗಳು, ಕಾಮಗಾರಿ ಮಾಡಿದರೂ ಮನೆಗೆ ಬಾರದ ನೀರು.
ಶಹಾಬಾದ್ ತಾಲ್ಲೂಕು ವ್ಯಾಪ್ತಿಯ ಹಳ್ಳಿಗಳಲ್ಲಿ ದಿನ ನಿತ್ಯ ಕೇಳಿಬರುವ ಮಾತುಗಳು ಇವು.
ತಾಲ್ಲೂಕು ವ್ಯಾಪ್ತಿಗಳಲ್ಲಿ ಸುಮಾರು 17 ಹಳ್ಳಿಗಳು ಬರುತ್ತವೆ. ಆದರೆ ತೊನಸನಹಳ್ಳಿ, ತರನಳ್ಳಿ, ಹೊನಗುಂಟ, ಕಡಿಹಳ್ಳಿಯಲ್ಲಿ ನಿತ್ಯ ನೀರಿನ ಸಮಸ್ಯೆ ಇದ್ದು, ಜನ ಪರದಾಡುತ್ತಿದ್ದಾರೆ. ಬೇಸಿಗೆಯಿಂದ ನೀರಿನ ಸಮಸ್ಯೆ ಇನ್ನಷ್ಟು ಉಲ್ಬಣವಾಗಿದ್ದು, ತರನಳ್ಳಿ ಗ್ರಾಮದಲ್ಲಿ ನೀರಿನ ಸಮಸ್ಯೆ ಹೆಚ್ಚಿದೆ.
ಗ್ರಾಮದಲ್ಲಿ ಸರಿಯಾದ ನೀರಿನ ಮೂಲ ಇಲ್ಲದ ಕಾರಣ ದೇವನತೆಗನೂರು ಗ್ರಾಮದಿಂದ ಪೈಪ್‌ಲೈನ್ ಮೂಲಕ ತರನಳ್ಳಿಗೆ ನೀರು ತರಲಾಗಿದೆ. ಅಲ್ಲಿ ಬಂದ ನೀರನ್ನು ಗ್ರಾಮದ ಬಾವಿಯೊಂದರಲ್ಲಿ ಶೇಖರಿಸಿ ಅಲ್ಲಿಂದ ಎತ್ತರವಾಗಿ ನಿರ್ಮಿಸಿದ ಎರಡು ಟ್ಯಾಂಕರ್‌ಗೆ ನೀರು ತುಂಬಲಾಗುತ್ತದೆ. ಅಲ್ಲಿಂದ ಗ್ರಾಮಕ್ಕೆ ನೀರು ಸರಬರಾಜು ಮಾಡಲಾಗುತ್ತದೆ.
ಆದರೆ ಕೆಲ ಜನ ಮಧ್ಯದಲ್ಲಿಯೇ ಪೈಪ್‌ಲೈನ್‌ನಿಂದ ನೇರವಾಗಿ ಮನೆಗಳಿಗೆ ಮತ್ತು ಕಲ್ಲಿನ ಪಾಲಿಶ್ ಮಷಿನ್ ಇಂಡಸ್ಟ್ರಿಯಲ್ ಉದ್ದೇಶಕ್ಕಾಗಿ ಸಂಪರ್ಕ ಪಡೆದಿರುವುದರಿಂದ ಬರುವ ಅಲ್ಪಸ್ವಲ್ಪ ನೀರೂ ಬರುತ್ತಿಲ್ಲ. ಗ್ರಾಮಕ್ಕೆ 24/7 ನೀರು ಒದಗಿಸುವ ಉದ್ದೇಶದಿಂದ ಜೆಜೆಎಂ ಕಾಮಗಾರಿ ಆರಂಭಿಸಿ ಕಾಮಗಾರಿ ಪೂರ್ಣಗೊಳಿಸಿ ಮೀಟರ್ ಅಳವಡಿಸಲಾಗಿದೆ. ಆದರೆ ನಲ್ಲಿಗಳಲ್ಲಿ ಒಂದು ಹನಿ ನೀರು ಕೂಡ ಬರುತ್ತಿಲ್ಲ. ಗ್ರಾಮದಲ್ಲಿ ನಲ್ಲಿಗಳು ಅಳವಡಿಸಿದ್ದು, ಅವುಗಳು ತುಕ್ಕು ಹಿಡಿದಿವೆ, ಮನೆಗಳ ಮುಂದೆ ನಲ್ಲಿಗಳ ಮೇಲೆ ಕಲ್ಲು ಬಂಡೆಗಳನ್ನು ಮುಚ್ಚಿರುವ ದೃಶ್ಯಗಳು ಸಾಮಾನ್ಯವಾಗಿವೆ.
ಈ ವಿಷಯ ಗೊತ್ತಿದ್ದರೂ ಅಧಿಕಾರಿಗಳು ಮಾತ್ರ ಕಣ್ಣುಮುಚ್ಚಿ ಕುಳಿತಿದ್ದಾರೆ. ಹೂಳು ತುಂಬಿದ ಬಾವಿಯಲ್ಲಿ ನಿತ್ಯ ನೀರು ಸಂಗ್ರಹಿಸುತ್ತಿದ್ದಾರೆ. ಇಲ್ಲಿನ ನೀರು ಕುಡಿಯುವುದು ಹಾಗೂ ಸ್ನಾನಕ್ಕೂ ಯೋಗ್ಯವಿಲ್ಲದೇ ಗಬ್ಬು ವಾಸನೆ ಬರುತ್ತಿದೆ. ಹಲವು ಬಾರಿ ಪಂಚಾಯಿತಿ ಪಿಡಿಒ ಹಾಗೂ ತಾಲ್ಲೂಕು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಕಾಗಿಣಾ ಹಾಗೂ ಭೀಮಾನದಿ ಸಂಗಮಕ್ಕೆ ಹೊಂದಿಕೊಂಡ ಹೊನುಗುಂಟ ಗ್ರಾಮದಿಂದ ಕಡಿಹಳ್ಳಿಗೆ ಸರಬರಾಜು ಆಗಬೇಕಿದ್ದ ನೀರಿನ ಪೈಪ್‌ಲೈನ್ ಹಾಳಾಗಿರುವುದರಿಂದ ಕಡಿಹಳ್ಳಿ ಗ್ರಾಮದ ನೀರಿನ ಸಮಸ್ಯೆಗೆ ಕಾರಣವಾಗಿದೆ. ಹೊನಗುಂಟ ಗ್ರಾಮದಿಂದ ತೊನಸನಹಳ್ಳಿಗೆ ಸುಮಾರು ₹ 1 ಕೋಟಿ ವೆಚ್ಚದಲ್ಲಿ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡ ನಂತರ ನೀರಿನ ಸಮಸ್ಯೆ ಬಗೆಹರಿಯುತ್ತದೆ ಎಂದು ಹೇಳಲಾಗುತ್ತಿದೆ.
ಗ್ರಾಮದಲ್ಲಿ ನೀರಿಗಾಗಿ ದಿನನಿತ್ಯ ಪರದಾಡುವಂತಾಗಿದೆ. ಅಧಿಕಾರಿಗಳಿಗೆ ಹಲವು ಬಾರಿ ಮನವಿ ನೀಡಿದರೂ ಸ್ಪಂದಿಸುತ್ತಿಲ್ಲ ಮಹಾದೇವ ತರನಳ್ಳಿ.–ಗ್ರಾಮಸ್ಥರು, ತರನಳ್ಳಿ
ತಾಲ್ಲೂಕು ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಲಾಗುವುದು.–ಮಲ್ಲಿನಾಥ ರಾವೂರ, ತಾಲ್ಲೂಕು ಪಂಚಾಯಿತಿ ಇಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.