ADVERTISEMENT

ಬಳಕೆಗೆ ಮೊದಲೇ ಹಾಳಾದ ಶುದ್ಧ ನೀರಿನ ಘಟಕ

ಭೀಮನಹಳ್ಳಿ: ಗ್ರಾಮಸ್ಥರಿಗೆ ಕನಸಾಗಿ ಉಳಿದ ಶುದ್ಧ ಕುಡಿಯುವ ನೀರು

ಮಲ್ಲಿಕಾರ್ಜುನ ಎಚ್.ಎಂ
Published 5 ಮೇ 2020, 19:30 IST
Last Updated 5 ಮೇ 2020, 19:30 IST
ಚಿತ್ತಾಪುರ ತಾಲ್ಲೂಕಿನ ಭೀಮನಹಳ್ಳಿ ಗ್ರಾಮದ ನೀರು ಶುದ್ಧೀಕರಣ ಘಟಕ
ಚಿತ್ತಾಪುರ ತಾಲ್ಲೂಕಿನ ಭೀಮನಹಳ್ಳಿ ಗ್ರಾಮದ ನೀರು ಶುದ್ಧೀಕರಣ ಘಟಕ   

ಚಿತ್ತಾಪುರ: ತಾಲ್ಲೂಕಿನ ಭೀಮನಹಳ್ಳಿ ಗ್ರಾಮದಲ್ಲಿ ನೀರು ಶುದ್ಧೀಕರಣ ಘಟಕ ಉಪಯೋಗಿಸುವ ಮೊದಲೇ ಹಾಳಾಗುತ್ತಿದೆ.

ಗ್ರಾಮದ ಹೊರವಲಯದಲ್ಲಿರುವ ನೀರು ಶುದ್ಧೀಕರಣ ಘಟಕವು ಅನಾಥವಾಗಿದೆ. ಘಟಕಕ್ಕೆ ಹೋಗಿ ಬರಲು ರಸ್ತೆ ಇಲ್ಲ. ನೀರು ಶುದ್ಧೀಕರಣ ಯಂತ್ರಗಳು ಹಾಳಾಗುತ್ತಿವೆ. ನೀರಿನ ಸಂಪರ್ಕ ಅಳವಡಿಸಿಲ್ಲ. ಘಟಕದ ಪಕ್ಕದಲ್ಲೇ ಕೊರೆಸಿದ್ದ ಕೊಳವೆ ಬಾವಿ ಬತ್ತಿ ಹೋಗಿದೆ. ಗ್ರಾಮ ಪಂಚಾಯಿತಿಗೆ ಇನ್ನೂ ಹಸ್ತಾಂತರಗೊಳ್ಳದ ಘಟಕವನ್ನು ಬೇರೆಡೆಗೆ ಸ್ಥಳಾಂತರ ಮಾಡುವ ಚಿಂತನೆ ಶುರುವಾಗಿದೆ ಎಂದು ತಿಳಿದು ಬಂದಿದೆ.

ಜನರಿಗೆ ನೀರು ಸರಬರಾಜು ಮಾಡಲು ಒಂದನೇ ವಾರ್ಡಿನಲ್ಲಿ ಪೈಪು ಅಳವಡಿಸಿಲ್ಲ. ಸಾರ್ವಜನಿಕ ನಳಗಳನ್ನು ಕೂಡಿಸಿಲ್ಲ. ಜನರು ಬೇರೆ ವಾರ್ಡಿಗೆ ಹೋಗಿ ನೀರು ತರಬೇಕು. ಎರಡು ದಿನಕ್ಕೊಮ್ಮೆ ಸರಬರಾಜು ಮಾಡುವ ನೀರು ಹಿಡಿದುಕೊಳ್ಳಲು ಜನರು ತೀವ್ರ ಪೈಪೋಟಿ ನಡೆಸುವ ಪರಿಸ್ಥಿತಿ ಇದೆ. ಬೇಕಾದಷ್ಟು ನೀರು ಸಿಗುತ್ತಿಲ್ಲ ಎಂದು ಗ್ರಾಮ ಪಂಚಾಯಿತಿ ವಿರುದ್ಧ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ADVERTISEMENT

ಜನರಿಗೆ ಮನೆಗಳ ಹತ್ತಿರವೇ ನೀರು ಸಿಗುವಂತೆ ಮಾಡಲು ಹೊಸದಾಗಿ 2– 3 ಕಡೆಗೆ ಸ್ಥಾಪಿಸಿರುವ ಕಿರು ನೀರು ಸರಬರಾಜು ಗುಮ್ಮಿಗಳಿಗೆ ನೀರಿನ ಸಂಪರ್ಕವನ್ನೇ ಕಲ್ಪಿಸಿಲ್ಲ. ಜಾನುವಾರುಗಳಿಗೆ ನೀರು ಕುಡಿಯಲೆಂದು ನಾಲ್ಕು ಕಡೆಗೆ ನಿರ್ಮಿಸಿರುವ ತೆರೆದ ತೊಟ್ಟಿಗಳಿಗೆ ನೀರಿನ ಸೌಲಭ್ಯ ಒದಗಿಸಿಲ್ಲ. ಹಾಳಾಗಿರುವ ಪೈಪುಗಳನ್ನು ದುರಸ್ತಿ ಮಾಡಿಸುತ್ತಿಲ್ಲ ಎಂದು ಗ್ರಾಮಸ್ಥರು ಪಂಚಾಯಿತಿ ವಿರುದ್ಧ ಹರಿಹಾಯುತ್ತಿದ್ದಾರೆ.

ಒಂದನೇ ವಾರ್ಡಿನಲ್ಲಿ ಅಗಸರ ಓಣಿಯಲ್ಲಿ ಕೊಳವೆ ಬಾವಿ ಇದೆ. ಅದಕ್ಕೂ ನೀರು ಸರಬರಾಜಿನ ಪೈಪು ಅಳವಡಿಸಿಲ್ಲ. ಕಿರು ನೀರು ಸರಬರಾಜಿನ ಗುಮ್ಮಿಯೂ ಇಲ್ಲ. ಬಡಿಗೇರ ಓಣಿಯಲ್ಲಿ ಜನರಿಗೆ ನೀರು ಪೂರೈಸಲು ನಳದ ಸೌಲಭ್ಯವಿಲ್ಲ. ನೀರು ಸರಬರಾಜು ವ್ಯವಸ್ಥೆಯೂ ಇಲ್ಲ. ಗುಮ್ಮಿ ಇದ್ದರೂ ನೀರಿನ ಸಂಪರ್ಕವಿಲ್ಲ. ಪರ್ತಪ್ಪ ಸಾಹು ಮನೆ ಹತ್ತಿರ ಗುಮ್ಮಿ ಅಗತ್ಯವಿದೆ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಎರಡನೇ ವಾರ್ಡಿನಲ್ಲಿ ನಡಗಟ್ಟಿ ಹತ್ತಿರ ನೀರಿನ ಗುಮ್ಮಿ ಅಗತ್ಯವಿದೆ. ಸಣ್ಣ ಅಗಸಿ ಹತ್ತಿರ ಕೊಳವೆ ಬಾವಿ ಇದೆ. ಉತ್ತಮ ನೀರಿನ ಸಂಪನ್ಮೂಲ ಇದೆ. ಎರಡು ವರ್ಷಗಳ ಹಿಂದೆ ಕೊಳವೆಬಾವಿ ಒಳಗಡೆ ಮೋಟರ್ ಸಿಲುಕಿದೆ. ತೆಗೆದು ದುರಸ್ತಿ ಮಾಡುತ್ತಿಲ್ಲ. ಈ ಕೊಳವೆ ಬಾವಿಯ ನೀರನ್ನು ಅರ್ಧ ಊರಿಗೆ ನೀರು ಸರಬರಾಜು ಮಾಡಬಹುದು. ಜಾನುವಾರುಗಳಿಗೆ ಈ ಕೊಳವೆ ಬಾವಿ ಆಸರೆಯಾಗಿತ್ತು ಎಂದು ಗ್ರಾಮಸ್ಥರು ಹೇಳಿದ್ದಾರೆ.

ಒಂದನೇ ವಾರ್ಡಿನಲ್ಲಿ ನೀರಿನ ಸಮಸ್ಯೆ ಗಮನಕ್ಕೆ ಬಂದಿದೆ. ಕರ್ನಾಟಕ ನೀರಾವರಿ ನಿಗಮದಿಂದ ಹೊಸದಾಗಿ ಕೊರೆಸಿರುವ ಕೊಳವೆ ಬಾವಿಯನ್ನು ಪಂಚಾಯಿತಿಗೆ ಹಸ್ತಾಂತರಿಸಿಲ್ಲ. ಹೊಸದಾಗಿ ಪೈಪ್‌ಲೈನ್ ಕಾಮಗಾರಿ ಮಾಡಿಸಿ ನೀರು ಸರಬರಾಜು ಮಾಡುತ್ತೇವೆ ಎಂದು ಗ್ರಾಮ ಪಂಚಾಯಿತಿ ಪಿಡಿಒ ಮಲ್ಲುಗೌಡ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.