ADVERTISEMENT

ಚಿಂಚೋಳಿ: ಅತಿವೃಷ್ಟಿ, ಅನಾವೃಷ್ಟಿಗೆ ನಲುಗಿದ ರೈತರ ಬದುಕು

ಸರ್ಕಾರದ ನಿರ್ಲಕ್ಷ್ಯ: ಸಿಗದ ಬೆಳೆ ಸಾಲ, ಬರ ಪರಿಹಾರದ ನಿರೀಕ್ಷೆಯಲ್ಲಿ ಸಾವಿರಾರು ರೈತರು

ಜಗನ್ನಾಥ ಡಿ.ಶೇರಿಕಾರ
Published 12 ಡಿಸೆಂಬರ್ 2023, 7:12 IST
Last Updated 12 ಡಿಸೆಂಬರ್ 2023, 7:12 IST
ಚಿಂಚೋಳಿ ತಾಲ್ಲೂಕಿನ ಬಾವನಗುಡಿ ತಾಂಡಾ ಸಮೀಪದ ಜಮೀನಿನಲ್ಲಿ ತೇವಾಂಶ ಕೊರತೆಗೆ ನಲುಗಿದ ತೊಗರಿ ಬೆಳೆ
ಚಿಂಚೋಳಿ ತಾಲ್ಲೂಕಿನ ಬಾವನಗುಡಿ ತಾಂಡಾ ಸಮೀಪದ ಜಮೀನಿನಲ್ಲಿ ತೇವಾಂಶ ಕೊರತೆಗೆ ನಲುಗಿದ ತೊಗರಿ ಬೆಳೆ   

ಚಿಂಚೋಳಿ: ಅತಿವೃಷ್ಟಿ ಮತ್ತು ಅನಾವೃಷ್ಟಿಗೆ ಸಿಲುಕಿದ ತಾಲ್ಲೂಕಿನ ರೈತರು, ತಮ್ಮ ಜೀವನ ಆಧಾರವಾದ ಬೆಳೆಗಳನ್ನು ಕಳೆದುಕೊಂಡು ತ್ರಿಶಂಕು ಸ್ಥಿತಿಗೆ ತಲುಪಿದ್ದಾರೆ. ಜೂನ್, ಆಗಸ್ಟ್, ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿನ ಮಳೆಯ ತೀವ್ರ ಕೊರತೆಗೆ ಬೆಳೆಗಳು ಒಣಗಿವೆ.

ಅತಿವೃಷ್ಟಿಯಿಂದ 3,018 ಹೆಕ್ಟೇರ್ ಬೆಳೆ ಹಾನಿಯಾಗಿದ್ದರೆ, ಬರದಿಂದ 23,413 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಆದರೆ, ಸರ್ಕಾರದಿಂದ ಇನ್ನೂ ಪರಿಹಾರ ಬಂದಿಲ್ಲ. ಪರಿಹಾರಕ್ಕಾಗಿ ರೈತರು ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ.

ಜುಲೈ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಅಧಿಕ ಮಳೆ ಸುರಿದರೂ ರೈತರಿಗೆ ಪ್ರಯೋಜನವಾಗಿಲ್ಲ. ರೈತರಿಗೆ ಬೆಳೆ ನಿರ್ವಹಣೆಯೇ ಕಷ್ಟವಾಯಿತು. ಐನಾಪುರ, ಕೋಡ್ಲಿ, ಚಿಮ್ಮನಚೋಡ ಹಾಗೂ ಕುಂಚಾವರಂ ಭಾಗದಲ್ಲಿ ತೊಗರಿ ಬೆಳೆ ಹಾಳಾಗಿದೆ. ಅಲ್ಲಲ್ಲಿ ನೀರಾವರಿ ಪ್ರದೇಶದಲ್ಲಿನ ತೊಗರಿ ಬೆಳೆಗಳ ಕಾಯಿ ಕಚ್ಚಿದೆ.

ADVERTISEMENT

ಮಳೆಯಾಶ್ರಿತ ಜಮೀನುಗಳಲ್ಲಿ ತೊಗರಿ ಬೆಳೆ ಸರಿಯಾಗಿ ಕಾಯಿ ಕಚ್ಚಿಲ್ಲ. ಮಂಜು ಹಾಗೂ ಮೋಡದಿಂದ ಹೂ ಉದುರಿವೆ. ಇದರ ಜತೆಗೆ ತೇವಾಂಶದ ಕೊರತೆಯಿಂದ ಬೆಳೆಗಳ ಕಾಳುಗಳ ಗಾತ್ರ ಕ್ಷೀಣಿಸಿದೆ. ತೊಗರಿ ಸಿಪ್ಪೆಯಲ್ಲಿ ಕಾಳುಗಳು ಜೋಳ, ಉದ್ದಿನ ಗಾತ್ರದಷ್ಟಿವೆ. ಹಲವು ಕಡೆ ಬಿತ್ತಿದ ಬೀಜವೂ ವಾಪಸ್ ಬಾರದಂತಹ ಸ್ಥಿತಿಯಿದೆ.

ವಿಪರೀತ ಕಳೆ ಬೆಳೆದು ಸಂಕಷ್ಟಕ್ಕೆ ತುತ್ತಾದ ರೈತರು ಸಾಲದ ಸುಳಿಗೆ ಸಿಲುಕುವಂತಾಗಿದೆ. ವಿಪರ್ಯಾಸ ಎಂದರೆ ತಾಲ್ಲೂಕಿನಲ್ಲಿ ರೈತರಿಗೆ ಸುಮಾರು ₹ 3 ಕೋಟಿ ಮೊತ್ತದ ಬೆಳೆ ಸಾಲವನ್ನು ಡಿಸಿಸಿ ಬ್ಯಾಂಕ್ ಮಂಜೂರು ಮಾಡಿದ್ದರೂ ಬಿಡುಗಡೆ ಮಾಡಲಿಲ್ಲ. ಇದರಿಂದ ಬೆಳೆ ಸಾಲ ಸಾವಿರಾರು ರೈತರಿಗೆ ಕನಸಾಗಿಯೇ ಉಳಿದಿದೆ.

ಮುಂಗಾರಿನ ಹಂಗಾಮಿನಲ್ಲಿ 19,693 ರೈತರು ಬೆಳೆ ವಿಮೆ ನೋಂದಾಯಿಸಿದ್ದು, ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ತೊಗರಿ ಬೆಳೆಗೆ ಮಧ್ಯಂತರ ಪರಿಹಾರ ನೀಡಲು ಕಂಪನಿ ಒಪ್ಪಿದೆ ಎಂದು ಸಹಾಯಕ ಕೃಷಿ ನಿರ್ದೆಶಕ ವೀರಶೆಟ್ಟಿ ರಾಠೋಡ್ ತಿಳಿಸಿದರು.

19 ಹಳ್ಳಿಗಳ ಗುರುತು: ‘ಬರಗಾಲದಿಂದ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದಾದ 19 ಹಳ್ಳಿಗಳನ್ನು ಗುರುತಿಸಲಾಗಿದೆ. ಕುಡಿವ ನೀರಿನ ಕೊರತೆ ಎದುರಾದರೆ ಮುನ್ನೆಚ್ಚರಿಕೆ ಕೈಗೊಳ್ಳಲು ಗ್ರಾಮೀಣ ನೀರು ಪೂರೈಕೆ ಮತ್ತು ನೈರ್ಮಲ್ಯ ಇಲಾಖೆ ಸಿದ್ಧತೆ ನಡೆಸಿದೆ’ ಎಂದು ಎಇಇ ರಾಹುಲ್ ಕಾಂಬ್ಳೆ ತಿಳಿಸಿದರು.

‘ಸಮಸ್ಯಾತ್ಮಕ ಹಳ್ಳಿಗಳಲ್ಲಿ ಖಾಸಗಿ ಕೊಳವೆಬಾವಿ, ತೆರೆದ ಬಾವಿ ಗುರುತಿಸಲಾಗಿದೆ. ಟ್ಯಾಂಕರ್ ಮೂಲಕ ಸರಬರಾಜು ಮಾಡಿದರೆ ಪ್ರತಿ ಟ್ಯಾಂಕಿನ ದರ ನಿಗದಿಗೆ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ. ದರ ನಿಗದಿ ಅಂತಿಮವಾಗಿಲ್ಲ’ ಎಂದರು.

ಬರಗಾಲದ ಹಿನ್ನೆಲೆಯಲ್ಲಿ ತಾಲ್ಲೂಕಿನಿಂದ ಮೇವು ನೆರೆ ರಾಜ್ಯಕ್ಕೆ ಸರಬರಾಜು ಆಗದಂತೆ ನೋಡಿಕೊಳ್ಳಲು ಕುಂಚಾವರಂ, ಮಿರಿಯಾಣ, ಕುಸ್ರಂಪಳ್ಳಿಯಲ್ಲಿ ಚೆಕ್ ಪೋಸ್ಟ್ ತೆರೆಯಲಾಗಿದೆ ಎಂದು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಧನರಾಜ ಬೊಮ್ಮಾ ತಿಳಿಸಿದರು.

ಮುಖ್ಯಾಂಶಗಳು

  • ಅತಿವೃಷ್ಟಿಗೆ 3,018 ಹೆಕ್ಟೇರ್ ಬೆಳೆಹಾನಿ

  • ಅನಾವೃಷ್ಟಿಗೆ 23,413 ಹೆಕ್ಟೇರ್ ಬೆಳೆಹಾನಿ

  • ಮಂಜೂರಾದರೂ ದೊರೆಯದ ₹ 3 ಕೋಟಿ ಸಹಕಾರಿ ಸಾಲ

ಗುರುರಾಜ ಪತ್ತಾರ
ಮುಲ್ಲಾಮಾರಿ ನದಿ ದಂಡೆಯಲ್ಲಿರುವ ಹೊಲದಲ್ಲಿ ಬಿತ್ತಿದ್ದ 9 ಎಕರೆ ತೊಗರಿ ಅತಿವೃಷ್ಟಿಯಿಂದ ಹೆಚ್ಚಿನ ಕಳೆ ಬೆಳೆದು ನಿರ್ವಹಣೆ ಮಾಡಲಾಗದೆ ಬೆಳೆಗಳನ್ನು ಕಿತ್ತುಹಾಕಿದ್ದೇನೆ
– ಗುರುರಾಜ ಪತ್ತಾರ ಕೃಷಿಕ
ಸುಬ್ಬಣ್ಣ ಜಮಖಂಡಿ
ಬರ ಎದುರಿಸಲು ತಾಲ್ಲೂಕು ಆಡಳಿತ ಸರ್ವ ಸನ್ನದ್ಧವಾಗಿದೆ. ಸದ್ಯ ಕುಡಿವ ನೀರು ಮೇವಿನ ಅಭಾವ ಎದುರಾಗಿಲ್ಲ. ಕುಡಿವ ನೀರಿಗಾಗಿ ಹಣದ ಅಭಾವವಿಲ್ಲ. ಪರಿಸ್ಥಿತಿ ನಿಯಂತ್ರಣದಲ್ಲಿದೆ
ಸುಬ್ಬಣ್ಣ ಜಮಖಂಡಿ, ತಹಶೀಲ್ದಾರ್ ಚಿಂಚೋಳಿ
ವೀರಭದ್ರಪ್ಪ ಮಲಕೂಡ
ಭಾಷಣದಲ್ಲಿ ಮಾತ್ರ ರೈತರು ದೇಶದ ಬೆನ್ನೆಲುಬು ಎನ್ನುತ್ತಾರೆ. ಆದರೆ ರೈತರ ನೆರವಿಗೆ ಯಾರೂ ಬರುತ್ತಿಲ್ಲ. ರೈತನಿಗೆ ಪ್ರಕೃತಿಯೂ ಸಹಕರಿಸುತ್ತಿಲ್ಲ. ಸರ್ಕಾರವೂ ನೆರವಿಗೆ ಬರುತ್ತಿಲ್ಲ
ವೀರಭದ್ರಪ್ಪ ಮಲಕೂಡ ಗಾರಂಪಳ್ಳಿ ರೈತ
ರಾಜಶೇಖರ ನಿಪ್ಪಾಣಿ
ಪ್ರಸಕ್ತ ವರ್ಷ ಮುಂಗಾರು ರೈತನೊಂದಿಗೆ ಚೆಲ್ಲಾಟವಾಡಿದೆ. ಈಚೆಗೆ ಮಂಜು ಹಾಗೂ ಮೋಡ ಕವಿದ ವಾತಾವರಣದಿಂದ ಬಹುತೇಕ ತೊಗರಿ ಬೆಳೆಯ ಹೂವು ಉದುರಿಹೋಗಿವೆ
ರಾಜಶೇಖರ ನಿಪ್ಪಾಣಿ ಹಸರಗುಂಡಗಿ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.