ADVERTISEMENT

ಉಕ್ಕಿ ಹರಿಯುತ್ತಿರುವ ಕಾಗಿಣಾ ನದಿ ; ಬೆಳೆಗಳು ಜಲಾವೃತ

ದಂಡೋತಿ ಸೇತುವೆ ಮುಳುಗಡೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2023, 11:34 IST
Last Updated 21 ಜುಲೈ 2023, 11:34 IST
ಚಿತ್ತಾಪುರ ತಾಲ್ಲೂಕಿನ ದಂಡೋತಿ ಗ್ರಾಮದ ಹತ್ತಿರ ಕಾಗಿಣಾ ನದಿ ಸೇತುವೆ ಶುಕ್ರವಾರ ಮುಳುಗಡೆಯಾಗಿರುವುದು
ಚಿತ್ತಾಪುರ ತಾಲ್ಲೂಕಿನ ದಂಡೋತಿ ಗ್ರಾಮದ ಹತ್ತಿರ ಕಾಗಿಣಾ ನದಿ ಸೇತುವೆ ಶುಕ್ರವಾರ ಮುಳುಗಡೆಯಾಗಿರುವುದು   

ಚಿತ್ತಾಪುರ: ಕಳೆದ ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ಕಾಗಿಣಾ ನದಿ ಮೈದುಂಬಿ ಹರಿಯುತ್ತಿದೆ. ದಂಡೋತಿ ಸಮೀಪದ ಕಾಗಿಣಾ ಸೇತುವೆ ಶುಕ್ರವಾರ ಮುಳುಗಡೆಯಾಗಿ ಸಂಚಾರ ಸ್ಥಗಿತಗೊಂಡಿತ್ತು. ಮಧ್ಯಾಹ್ನದ ವೇಳೆಗೆ ನೀರಿನ ಪ್ರಮಾಣ ಕಡಿಮೆಯಾಗಿ ಸೇತುವೇ ಸಂಚಾರಕ್ಕೆ ಮುಕ್ತಗೊಂಡಿತು.

ಸೇತುವೆ ಮುಳುಗಿದ್ದರಿಂದ ಬಸ್‌ಗಳು ಶಹಾಬಾದ್ ಮಾರ್ಗವಾಗಿ ಕಲಬುರಗಿಗೆ ತೆರಳಿದವು. ಚಿತ್ತಾಪುರ-ಕಾಳಗಿ ಬಸ್ ಸಂಚಾರ ಬಂದ್ ಆಗಿತ್ತು. ಸೇಡಂ ಪಟ್ಟಣಕ್ಕೆ ಸಂಚರಿಸುತ್ತಿದ್ದ ಬಸ್ ನೇರವಾಗಿ ಮಳಖೇಡ ಮಾರ್ಗವಾಗಿ ಪ್ರಯಾಣಿಸಿದವು. ಶುಕ್ರವಾರ ಬೆಳಿಗ್ಗೆ ಕಾಗಿಣಾ ನದಿಯ ಉತ್ತರಕ್ಕಿರುವ ದಂಡೋತಿ, ಮಲಕೂಡ, ಇವಣಿ ಗ್ರಾಮದ ವಿದ್ಯಾರ್ಥಿಗಳು ಬೆಳಗ್ಗೆ 7.30ಕ್ಕೆ ಶುರುವಾಗುವ ಪಟ್ಟಣದಲ್ಲಿನ ಕಾಲೇಜುಗಳಿಗೆ ತೆರಳಲಾಗದೇ ಪರದಾಡಿರು. ಪಟ್ಟಣದಿಂದ ದಿನಾಲೂ ಕಲಬುರಗಿ ಕಾಲೇಜು ಮತ್ತು ವಿಶ್ವವಿದ್ಯಾಲಯಕ್ಕೆ ಹೋಗಿ ಬರುತ್ತಿದ್ದ ವಿದ್ಯಾರ್ಥಿಗಳು ಶಹಾಬಾದ್ ಮಾರ್ಗವಾಗಿ ಪ್ರಯಾಣಿಸಿದರು.

ಪ್ರವಾಹದ ನೀರು ನದಿ ದಂಡೆಯಲ್ಲಿರುವ ಹೊಲಗಳಿಗೆ ನುಗ್ಗಿ ಬೆಳೆ ಹಾನಿಯಾಗಿದೆ. ಹೊಲಗಳ ತಗ್ಗು ಪ್ರದೇಶದಲ್ಲಿ ಮಳೆ ನೀರು ಸಂಗ್ರಹಗೊಂಡಿದೆ. ಮುಂಗಾರು ಬೆಳೆಗಳಾದ ಹೆಸರು, ಉದ್ದು, ತೊಗರಿ ಬೆಳೆಗಳು ಜಲಾವೃತವಾಗಿವೆ. ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಹೊಲಗಳಲ್ಲಿನ ಇಳಿಜಾರು‌ ಪ್ರದೇಶದಲ್ಲಿ ನೀರು ಹರಿದು ಬೆಳೆ ಹಾನಿ ಆಗುತ್ತದೆ ಎಂದು ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ADVERTISEMENT

ಸರ್ಕಾರಿ ನೌಕರರ ಪರದಾಟ: ಪಟ್ಟಣದ ಶಾಲಾ ಕಾಲೇಜಿಗೆ, ಸರ್ಕಾರಿ ಕಚೇರಿಗಳಿಗೆ ಬರುವ ಬಹುತೇಕ ಶಿಕ್ಷಕರು, ಉಪನ್ಯಾಸಕರು, ಅಧಿಕಾರಿಗಳು, ನೌಕರರು ಕಲಬುರಗಿಯಲ್ಲೆ ಮನೆ ಮಾಡಿಕೊಂಡಿದ್ದಾರೆ. ದಿನಾಲೂ ತಮ್ಮ ಕರ್ತವ್ಯಕ್ಕೆ ಕಲಬುರಗಿಯಿಂದ ಬಸ್‌ನಲ್ಲಿ, ಕಾರಿನಲ್ಲಿ ಬಂದು ಹೋಗುತ್ತಾರೆ. ಸೇತುವೆ ಮುಳುಗಿದ್ದರಿಂದ ಪಟ್ಟಣಕ್ಕೆ ಬರಲು ತೀವ್ರ ಸಮಸ್ಯೆ ಅನುಭವಿಸಿ, ಶಹಾಬಾದ್ ಮಾರ್ಗವಾಗಿ ಬಂದು ಕರ್ತವ್ಯಕ್ಕೆ ಹಾಜರಾದರು.

ಮಾಸಿಕ ಪರೀಕ್ಷೆ ಮುಂದೂಡಿಕೆ: ನದಿ ಆಚೆಗಿರುವ ಗ್ರಾಮೀಣ ಭಾಗದಿಂದ ವಿದ್ಯಾರ್ಥಿಗಳು ಕಾಲೇಜಿಗೆ ಬರಲಾಗದೆ ಸಮಸ್ಯೆ ಅನುಭವಿಸಿದರು. ಹೀಗಾಗಿ ಪಿಯುಸಿ ವಿದ್ಯಾರ್ಥಿಗಳಿಗೆ ಶುಕ್ರವಾರ ಆಯೋಜಿಸಿದ್ದ ಮಾಸಿಕ ಪರೀಕ್ಷೆ ಮುಂದೂಡಲಾಗಿದೆ ಎಂದು ನಾಗಾವಿ ಶಿಕ್ಷಣ ಸಂಸ್ಥೆ ಪಿಯುಸಿ ‌ಕಾಲೇಜಿನ ಪ್ರಾಂಶುಪಾಲ ವೀರಾರೆಡ್ಡಿ ಶೇರಿ ‘ಪ್ರಜಾವಾಣಿ’ಗೆ ತಿಳಿಸಿದರು.

ವಿದ್ಯುತ್ ಇಲ್ಲದೆ ಪರದಾಟ: ಮಳೆಯಿಂದಾಗಿ ಗುರುವಾರ ದಿನವಿಡಿ ಚಿತ್ತಾಪುರ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಇಲ್ಲದೆ ಜನರು ತೀವ್ರ ತೊಂದರೆ ಅನುಭವಿಸಿದರು. ರಾತ್ರಿಯಿಡಿ ವಿದ್ಯುತ್ ಕೈಕೊಟ್ಟಿದ್ದರಿಂದ ಗ್ರಾಮೀಣರು ಭಾಗ ಕಾರ್ಗತ್ತಲಿನಲ್ಲಿ ಮುಳುಗಿತ್ತು. ಸೊಳ್ಳೆಗಳ ಕಾಟದಿಂದ ನಿದ್ರೆ ಮಾಡಲಾಗದೆ ಜನರು ಚಡಪಡಿಸಿದರು.

ಚಿತ್ತಾಪುರ ತಾಲ್ಲೂಕಿನ ದಂಡೋತಿ ಗ್ರಾಮದ ಹತ್ತಿರ ಹರಿಯುವ ಕಾಗಿಣಾ ನದಿಯಲ್ಲಿ ಶುಕ್ರವಾರ ಮಧ್ಯಾಹ್ನ ಪ್ರವಾಹ ಇಳಿಮುಖವಾಗಿ ಸೇತುವೆ ಸಾರಿಗೆ ಸಂಚಾರಕ್ಕೆ ಮುಕ್ತವಾಗಿದೆ.
ಚಿತ್ತಾಪುರ ತಾಲ್ಲೂಕಿನ ಮರಗೋಳ ಗ್ರಾಮದ ಹೊಲದಲ್ಲಿ ಮಳೆ ನೀರು ನಿಂತು ಹೆಸರು ಬೆಳೆ ಜಲಾವೃತಗೊಂಡಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.