ADVERTISEMENT

ಕಲಬುರಗಿ: ವಿಮಾನ ನೈಟ್ ಲ್ಯಾಂಡಿಂಗ್ ಕನಸಿಗೆ ರೆಕ್ಕೆ

ಮಲ್ಲಿಕಾರ್ಜುನ ನಾಲವಾರ
Published 17 ಆಗಸ್ಟ್ 2022, 4:43 IST
Last Updated 17 ಆಗಸ್ಟ್ 2022, 4:43 IST
ಕಲಬುರಗಿ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ಡಿವಿಒಆರ್/ಡಿಎಂಇ ತಂತ್ರಜ್ಞಾನ ಅಳವಡಿಕೆ ಕಾರ್ಯ
ಕಲಬುರಗಿ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ಡಿವಿಒಆರ್/ಡಿಎಂಇ ತಂತ್ರಜ್ಞಾನ ಅಳವಡಿಕೆ ಕಾರ್ಯ   

ಕಲಬುರಗಿ: ಕಲಬುರಗಿ ನಿಲ್ದಾಣದಲ್ಲಿ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ ವಿಮಾನವನ್ನು ಸುಲಭವಾಗಿ ಧರೆಗೆ ಇಳಿಸುವ ಮತ್ತು ನೈಟ್ ಲ್ಯಾಂಡಿಂಗ್‌ಗೆ ನೆರವಾಗುವ ಡಿವಿಒಆರ್/ಡಿಎಂಇ ತಂತ್ರಜ್ಞಾನ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ.

ವಿಮಾನ ಇರುವ ದೂರ ಮತ್ತು ಸುರಕ್ಷಿತ ನೆಲದ ಕುರಿತ ಸಂಕೇತವನ್ನು ಪೈಲಟ್‌ಗೆ ರವಾನಿಸುವ ಅಂತರ
ರಾಷ್ಟ್ರೀಯ ಗುಣಮಟ್ಟದ ಸುಧಾರಿತ ‘ಡಿವಿಒಆರ್’ (ಡಾಪ್ಲರ್ ವೆರಿ ಹೈ ಫ್ರಕ್ವೆನ್ಸಿ ಒಮ್ನಿ ರೇಂಜ್) ಮತ್ತು ‘ಡಿಎಂಇ’ (ದೂರ ಅಳೆಯುವ ಸಾಧನ–ಡಿಸ್ಟೆನ್ಸ್ ಮೇಜರಿಂಗ್ ಇಕ್ಯುಪ್ಮೆಂಟ್) ತಂತ್ರಜ್ಞಾನ ಸ್ಥಾಪನೆಯಲ್ಲಿ ದೆಹಲಿಯ ತಜ್ಞರ ತಂಡ ನಿರತವಾಗಿದೆ.

‘ರಾತ್ರಿ ವೇಳೆ ರೆಡಾರ್‌ ಸಿಸ್ಟಂ ಜತೆಗೆಡಿವಿಒಆರ್/ಡಿಎಂಇ ಕೆಲಸ ಮಾಡಲಿದ್ದು, ಪೈಲಟ್‌ಗಳಿಗೆಸಂಕೇತಗಳ ಮೂಲಕ ಮಾರ್ಗದರ್ಶನ ನೀಡುತ್ತದೆ. ನಿಲ್ದಾಣದಿಂದ ವಿಮಾನ ಇರುವ ದೂರ ಮತ್ತು ಸುರಕ್ಷಿತ ಭೂಸ್ಪರ್ಶ ಬಗ್ಗೆ ಸಂಕೇತಗಳನ್ನು ಪೈಲಟ್‌ಗೆ ರವಾನಿ
ಸುತ್ತದೆ. ಈ ಸಿಗ್ನಲ್‌ಗಳನ್ನು ಬಳಸಿಕೊಂಡು ಪೈಲಟ್‌ ವಿಮಾನದ ಹಾರಾಟದ ಸ್ಥಾನ ಮತ್ತು ದಿಕ್ಕನ್ನು ನಿರ್ಧರಿಸಲು ಸಹಾಯ ಮಾಡುತ್ತದೆ‌’ ಎಂದು ತಾಂತ್ರಿಕ ಪರಿಣಿತರು ತಿಳಿಸಿದರು.

ADVERTISEMENT

‘ನೂತನ ತಂತ್ರಜ್ಞಾನದಿಂದ 200 ಕಿ.ಮೀ ದೂರದವರೆಗೆ ಸಂಕೇತಗಳನ್ನು ಪೈಲಟ್‌ಗೆ ಕಳುಹಿಸಬಹುದು. ಡಿವಿಒಆರ್/ಡಿಎಂಇ ಒಗ್ಗೂಡಿ ಕೆಲಸ ಮಾಡಲಿದ್ದು, ‘ಡಿವಿಒಆರ್’ ವಿಮಾನ ಹೋಗಬೇಕಾದ ಸರಿಯಾದ ಮಾರ್ಗ ಮತ್ತು ‘ಡಿಎಂಇ’ ನಿಗದಿತ ಗುರಿ ಎಷ್ಟು ದೂರದಲ್ಲಿ ಇದೆ ಎಂಬುದನ್ನು ತಿಳಿಸುತ್ತದೆ’ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಂಗಳೂರು, ತಿರುಪತಿ, ದೆಹಲಿ (ಹಿಂಡನ್‌) ಮಾರ್ಗದಲ್ಲಿ ಸಂಚರಿಸುವ ವಿಮಾನಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿದೆ. ಮುಂಬೈಗೂ ವಿಮಾನ ಸಂಚಾರ ಆರಂಭಿಸುವಂತೆ ಸಾಕಷ್ಟು ಬೇಡಿಕೆ ಇದೆ. ಕಲಬುರಗಿ ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆ ವಿಮಾನ ಇಳಿಸುವ ಸೌಲಭ್ಯ ಕಲ್ಪಿಸಿದರೆ ವಿಮಾನಯಾನ ಸಂಸ್ಥೆಗಳು ತಾವಾಗಿಯೇ ಪ್ರಯಾಣಿಕ ಸೇವೆ ಕೊಡಲು ಮುಂದೆ ಬರಲಿವೆ. ಜೊತೆಗೆ ಕಾರ್ಗೊ ಸಂಚಾರಕ್ಕೂ ಅವಕಾಶ ಸಿಗಲಿದೆ’ ಎಂದು ಅವರು ತಿಳಿಸಿದರು.

ವಾಣಿಜ್ಯ ಚಟುವಟಿಕೆಗಳಿಗೆ ಆದ್ಯತೆ: ವಿವಿಧ ಕಂಪನಿಗಳು, ಸಿಮೆಂಟ್‌ ಉದ್ಯಮ, ಚೇಂಬರ್ ಆಫ್‌ ಕಾಮರ್ಸ್‌ ಸದಸ್ಯರು, ವ್ಯಾಪಾರಿಗಳು, ವಿಶ್ವವಿದ್ಯಾಲಯ ಉಪನ್ಯಾಸಕರು, ಆಸ್ಪತ್ರೆಗಳ ವೈದ್ಯರು ಬೆಂಗಳೂರು, ದೆಹಲಿಯೊಂದಿಗೆ ಒಡನಾಟ ಹೊಂದಿದ್ದಾರೆ.

ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣ: ಜ್ಞಾನೇಶ್ವರರಾವ್

‘ವಿಮಾನ ನಿಲ್ದಾಣ ಪ್ರಾಧಿಕಾರದ ತಾಂತ್ರಿಕ ವಿಭಾಗದ ತಂಡದವರು ಡಿವಿಒಆರ್/ಡಿಎಂಇ ಅಳವಡಿಕೆ ಕಾರ್ಯದಲ್ಲಿ ನಿರತವಾಗಿದ್ದಾರೆ. ಸೆಪ್ಟೆಂಬರ್ ಅಂತ್ಯದೊಳಗೆ ಜೋಡಣೆ ಕೆಲಸ ಮುಗಿಯುವ ಸಾಧ್ಯತೆ ಇದೆ’ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಜ್ಞಾನೇಶ್ವರರಾವ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಡಿವಿಒಆರ್/ಡಿಎಂಇ ಅಳವಡಿಕೆ ಪೂರ್ಣಗೊಂಡ ಬಳಿಕ ರಾತ್ರಿ ಲ್ಯಾಂಡಿಂಗ್‌ಗೂ ಬಳಸಿಕೊಳ್ಳಬಹುದು. ಹಳೆಯ ನೇವಿಷಗೇಷನ್ ವ್ಯವಸ್ಥೆ ಬಿದ್ದಾಪುರ ಕಾಲೊನಿಯಿಂದ ತೆರವುಗೊಳಿಸಲಾಗುವುದು’ ಎಂದರು.

ಕಾರ್ಯ ನಿರ್ವಹಣೆ ಹೇಗೆ?

‘ಡಿವಿಒಆರ್‌ ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯ ನೆಲ ಆಧಾರಿತ ನೇವಿಗೇಷನ್ ಪ್ರಮಾಣಿತ ಸಾಧನ. ನಿಲ್ದಾಣದಿಂದ ವಿಮಾನ ಪ್ರಯಾಣದ ದಿಕ್ಕು ಮತ್ತು ಅದರ ಗಮ್ಯವನ್ನು ತಿಳಿಯಲು ಪೈಲಟ್‌ಗೆ ಸಹಾಯ ಮಾಡುತ್ತದೆ’ ಎಂದು ಸಾಫ್ಟ್‌ವೇರ್ ಎಂಜಿನಿಯರ್‌ ಸುನೀಲ ಕುಲಕರ್ಣಿ ತಿಳಿಸಿದರು.

‘ಡಿಎಂಇ ಡಿವಿಒಆರ್‌ನ ಸಹ ಉಪಕರಣವಾಗಿದ್ದು, ವಿಮಾನದಿಂದ ರನ್‌ವೇ ದೂರದ ಸಂಕೇತವನ್ನು ಒದಗಿಸುತ್ತದೆ. ಈ ಎರಡರ ಸಂಯೋಜನೆಯು ವಿಮಾನವು ಒಂದು ನಿರ್ದಿಷ್ಟ ಮಾರ್ಗದಲ್ಲಿ ಸರಿಯಾಗಿ ಸಾಗಲು ಸಹಾಯ ಮಾಡುತ್ತದೆ. ಅದು ಹಾರುತ್ತಿರುವ ದಿಕ್ಕಿನ ಮಾಹಿತಿ ಮತ್ತು ತಿಳಿದ ಸ್ಥಳದಿಂದ ನಿಖರವಾದ ದೂರವನ್ನೂ ನೀಡುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.