ADVERTISEMENT

ಚಿಂಚೋಳಿ | ಐನಾಪುರದಲ್ಲಿ ಭೂಮಿಯಿಂದ ಸದ್ದು; ಬೆಚ್ಚಿದ ಜನ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 6:44 IST
Last Updated 1 ನವೆಂಬರ್ 2025, 6:44 IST
   

ಚಿಂಚೋಳಿ: ತಾಲ್ಲೂಕಿನ ಐನಾಪುರ ಹಾಗೂ ಸುತ್ತಲಿನ ಗ್ರಾಮದಲ್ಲಿ ಶುಕ್ರವಾರ ನಸುಕಿನ ಜಾವ ಭೂಮಿಯಿಂದ ಸದ್ದು ಬಂದಿದ್ದು ಜನರ ಬೆಚ್ಚಿ ಬಿದ್ದಿದ್ದಾರೆ.

ನಸುಕಿನ 5.47ರ ನಿಮಿಷಕ್ಕೆ ಭೂಮಿಯಿಂದ ಗರ್ ಗರ್ ಎಂದು ಸದ್ದು ಬಂದಿದೆ. ಆಗ ಇದು ಭೂಕಂಪನವೇ ಇರಬಹುದೆಂದು ಶಂಕಿಸಿದ ಜನ ಮನೆಗಳಿಂದ ಹೊರ ಬಂದಿದ್ದಾರೆ.

‘ಐನಾಪುರ, ಬೆನಕೆಪಳ್ಳಿ, ಖಾನಾಪುರ ಮತ್ತು ಭೂಂಯಾರ್ ಕೆ. ಹಾಗೂ ಭೂಂಯಾರ್ ಬಿ. ಗ್ರಾಮಗಳಲ್ಲಿ ಭೂಮಿಯಿಂದ ಸದ್ದು ಬಂದಿದೆ’ ಎಂದು ಐನಾಪುರ ಗ್ರಾಮದ ಮುಖಂಡ ರಮೇಶ ಪಡಶೆಟ್ಟಿ ತಿಳಿಸಿದ್ದಾರೆ.

ADVERTISEMENT

ಕಳೆದ ಕೆಲ ದಿನಗಳಿಂದ ಬೀದರ್ ಜಿಲ್ಲೆಯ ಚಿಟ್ಟಗುಪ್ಪ ಮತ್ತು ಹುಮನಾಬಾದ್‌ ತಾಲ್ಲೂಕಿನ ಗ್ರಾಮಗಳಲ್ಲಿ ಭೂಮಿಯಿಂದ ಸದ್ದು ಕೇಳಿಸುವುದು ಮತ್ತು ಲಘು ಕಂಪನದ ಅನುಭವಗಳು ಉಂಟಾಗಿದ್ದರ ಬೆನ್ನಲ್ಲಿಯೇ ಅದು ತಾಲ್ಲೂಕಿನ ಕೆಲ ಗ್ರಾಮಗಳಿಗೆ ವ್ಯಾಪಿಸಿದ್ದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

‘ಬೀದರ್ ಜಿಲ್ಲೆಯಲ್ಲಿ ಲಘು ಕಂಪನ ಸಂಭವಿಸಿದ ವರದಿಗಳು ಬಂದಿದ್ದು ಇದರಿಂದಲೇ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಭೂಮಿಯಿಂದ ಸದ್ದು ಬಂದ ಅನುಭವ ಜನರಿಗೆ ಆಗಿದೆ’ ಎಂದು ತಹಶೀಲ್ದಾರ್‌ ಸುಬ್ಬಣ್ಣ ಜಮಖಂಡಿ ತಿಳಿಸಿದರು. ಆದರೆ ತಾಲ್ಲೂಕಿನಲ್ಲಿ ಭೂಮಿ ಕಂಪನ ಅಥವಾ ಲಘು ಕಂಪನದ ವರದಿಗಳಿಲ್ಲ’ ಎಂದರು.

ನೈಸರ್ಗಿಕ ವಿಕೋಪ ನಿರ್ವಹಣೆ ಕೇಂದ್ರ ದೃಢಪಡಿಸಿದ ಲಘುಕಂಪನ: ಬೀದರ್ ಜಿಲ್ಲೆಯ ಹಳ್ಳಿಖೇಡ(ಕೆ) ಗ್ರಾಮದಲ್ಲಿ ಗುರುವಾರ ರಾತ್ರಿ 9.15ಕ್ಕೆ ಲಘು ಕಂಪನ ಉಂಟಾಗಿದ್ದು ಅದರ ತೀವ್ರತೆ 2.4 ದಾಖಲಾಗಿದೆ. ಶುಕ್ರವಾರ ಬೆಳಿಗ್ಗೆ 5.47ಕ್ಕೆ ಮುದ್ನಾಳದಲ್ಲಿ 3.0 ತೀವ್ರತೆಯ ಲಘು ಕಂಪನವಾಗಿರುವುದು ದೃಢಪಟ್ಟಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಕೇಂದ್ರದ ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.