ADVERTISEMENT

ಜನಗಣತಿಯಲ್ಲಿ ಆರ್ಥಿಕ ಸ್ಥಿತಿಗತಿ ಮಾನದಂಡವಾಗಲಿ: ದಯಾನಂದ ಅಗಸರ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 6:59 IST
Last Updated 26 ಜುಲೈ 2025, 6:59 IST
ಪ್ರೊ.ದಯಾನಂದ ಅಗಸರ
ಪ್ರೊ.ದಯಾನಂದ ಅಗಸರ   

ಕಲಬುರಗಿ: ‘ಎಲ್ಲ ಜಾತಿ, ಜನಾಂಗಗಳಲ್ಲಿ ಬಡವರೂ ಇದ್ದಾರೆ, ಶ್ರೀಮಂತರೂ ಇದ್ದಾರೆ. ಸಮಾಜದಲ್ಲಿ ಸಾಮಾಜಿಕ ಸಮಾನತೆ ಬರಲು ಆರ್ಥಿಕ ಸಮಾನತೆ ಬಹುಮುಖ್ಯವಾಗಿದೆ. ಹಾಗಾಗಿ, ಸರ್ಕಾರಗಳು ನಡೆಸಲಿರುವ ಜನಗಣತಿ ಅಥವಾ ಜಾತಿಗಣತಿ ಸಮೀಕ್ಷೆಯಲ್ಲಿ ಆರ್ಥಿಕ ಸ್ಥಿತಿಗತಿಯು ಪ್ರಮುಖ ಮಾನದಂಡವಾಗಬೇಕು’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ದಯಾನಂದ ಅಗಸರ ಒತ್ತಾಯಿಸಿದರು.

‘ಜನಗಣತಿ ಸಮೀಕ್ಷೆಯಲ್ಲಿ ಆರ್ಥಿಕ ಮಾನದಂಡದ ಕುರಿತಂತೆ ಆರ್ಥಿಕ ತಜ್ಞರು, ಸಾಹಿತಿಗಳು, ಸಾಮಾಜಿಕ ಕಾಳಜಿಯ ವ್ಯಕ್ತಿಗಳು ಮೇ, ಜೂನ್‌, ಜುಲೈ ತಿಂಗಳಲ್ಲಿ ಸಮಾಲೋಚನಾ ಸಭೆಗಳನ್ನು ನಡೆಸಿದ್ದಾರೆ. ‘ಜನ ಕಲ್ಯಾಣ ವೇದಿಕೆ’ ಅಸ್ತಿತ್ವಕ್ಕೆ ತರಲು ನಿರ್ಧರಿಸಲಾಗಿದೆ. ಅದಕ್ಕಾಗಿ, ನಿರ್ವಹಣಾ ಮಂಡಳಿ, ಸಮಾಲೋಚನಾ ಮಂಡಳಿ ಮತ್ತು ಸಂಸ್ಥಾಪಕ ಮಂಡಳಿಯನ್ನು ರಚಿಸಿಕೊಳ್ಳಲಾಗಿದೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಜಾತಿ ಆಧಾರಿತವಾಗಿ ಸರ್ಕಾರಿ ಸೌಲಭ್ಯ, ಮೀಸಲಾತಿ ಲಾಭ ಪಡೆದಿರುವವರೇ ಎಲ್ಲಾ ಬಗೆಯ ಅನುಕೂಲಗಳನ್ನು ಪಡೆಯುತ್ತಿದ್ದಾರೆ. ಹೀಗಾಗಿ ನೈಜ ಫಲಾನುಭವಿಗಳಿಗೆ ಸೌಲಭ್ಯ ಸಿಗುತ್ತಿಲ್ಲ. ಕಾರಣ, ಜನಗಣತಿ/ಜಾತಿಗಣತಿಯ ಸಮೀಕ್ಷೆಯಲ್ಲಿ ಆರ್ಥಿಕ ಸ್ಥಿತಿಗತಿಯು ಪ್ರಮುಖ ಮಾನದಂಡವಾಗಬೇಕು ಮತ್ತು ಬಡತನ ರೇಖೆಯ ಶ್ರೇಣಿವಾರು ವಿಂಗಡಣೆಯು ಕೂಡ ಆಗಬೇಕಿದೆ. ಎಲ್ಲ ಜಾತಿ, ಜನಾಂಗಗಳಲ್ಲಿರುವ ಕಡುಬಡವರು ಮತ್ತು ಬಡವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದು ಅತ್ಯವಶ್ಯವಾಗಿದೆ. ಜನಗಣತಿ ಸಮೀಕ್ಷೆ ನಮೂನೆ ಪಡೆದು ಸಭೆಯಲ್ಲಿ ಚರ್ಚಿಸಲಾಗುವುದು’ ಎಂದರು.

ADVERTISEMENT

‘ಶಿಕ್ಷಣ, ಆರೋಗ್ಯ, ಉದ್ಯೋಗ, ಕೃಷಿ ಹೀಗೆ ಇತರ ಕ್ಷೇತ್ರಗಳಲ್ಲಿ ಜಾತಿ/ ಜನಾಂಗದಲ್ಲಿ ಶೇಕಡಾವಾರು ಸೌಲಭ್ಯ ಹಾಗೂ ಮೀಸಲಾತಿಗಳು ಅಗತ್ಯವಿರುವ ದುರ್ಬಲರಿಗೆ, ಶೋಷಿತರಿಗೆ ಮಾತ್ರ ಸಿಗುವಂತಾಗಬೇಕು. ಈ ಬಗ್ಗೆ ಜನ ಕಲ್ಯಾಣ ವೇದಿಕೆ ಮೂಲಕ ಕೇಂದ್ರ, ರಾಜ್ಯ ಸರ್ಕಾರದ ಗಮನ ಸೆಳೆಯಲು ಮೊದಲು ಮನವಿಪತ್ರಗಳನ್ನು ಸಲ್ಲಿಸುವುದರೊಂದಿಗೆ ಒತ್ತಡ ತರಲು ಪ್ರಯತ್ನಿಸಲಾಗುವುದು. ಈ ಬೇಡಿಕೆಯನ್ನು ಒಪ್ಪದಿದ್ದರೆ ಕಾನೂನಾತ್ಮಕ ಮತ್ತು ಜನಾಂದೋಲನದ ಹೋರಾಟಕ್ಕೆ ಮುಂದಾಗಬೇಕು ಎಂಬ ಅಭಿಪ್ರಾಯ ವೇದಿಕೆ ಸಭೆಯಲ್ಲಿ ವ್ಯಕ್ತವಾಗಿದೆ’ ಎಂದು ತಿಳಿಸಿದರು.

ಪ್ರಮುಖರಾದ ದಯಾನಂದ ಪಾಟೀಲ, ಎಂ.ಎಸ್‌.ಪಾಟೀಲ ನರಿಬೋಳ, ಕೈಲಾಶನಾಥ ದೀಕ್ಷಿತ್‌, ಅಶೋಕ ಗುರೂಜಿ, ಸುಧೀರ ಉಪಾಧ್ಯ, ಶಾದಾಬ ಫಾತಿಮಾ ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.