ADVERTISEMENT

ಜುಲೂಸ್‌ ರದ್ದು, ಮನೆಯಲ್ಲೇ ಈದ್‌ಗೆ ಸಿದ್ಧತೆ

ದಕ್ಷಿಣ ಭಾರತದ ಪ್ರಸಿದ್ಧ ವರ್ಣರಂಜಿತ ಮೆರವಣಿಗೆ ಇಲ್ಲ, ಮುಸ್ಲಿಂ ಸಮುದಾಯಕ್ಕೆ ಸಡಗರ ಕೊರೊನಾ ಅಡ್ಡಗಾಲು

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2020, 10:40 IST
Last Updated 30 ಅಕ್ಟೋಬರ್ 2020, 10:40 IST
ಕಲಬುರ್ಗಿಯ ಹಳೆ ಜೇವರ್ಗಿ ರಸ್ತೆಯಲ್ಲಿ ಉಮರ್ ಮಸೀದಿ ವಿದ್ಯುತ್ ದೀಪಾಲಂಕಾದಿಂದ ಕಂಗೊಳಿಸುತ್ತಿದ್ದು ಗುರುವಾರ ಕಂಡುಬಂತು
ಕಲಬುರ್ಗಿಯ ಹಳೆ ಜೇವರ್ಗಿ ರಸ್ತೆಯಲ್ಲಿ ಉಮರ್ ಮಸೀದಿ ವಿದ್ಯುತ್ ದೀಪಾಲಂಕಾದಿಂದ ಕಂಗೊಳಿಸುತ್ತಿದ್ದು ಗುರುವಾರ ಕಂಡುಬಂತು   

ಕಲಬುರ್ಗಿ: ಕೊರೊನಾ ವೈರಾಣು ಹರಡದಂತೆ ಎಚ್ಚರಿಕೆ ವಹಿಸುವ ಹಿನ್ನೆಲೆಯಲ್ಲಿ ಈ ಬಾರಿ ಈದ್‌ ಮಿಲಾದ್‌ ಹಬ್ಬವನ್ನು ಸಾಂಕೇತಿಕವಾಗಿ ಆಚರಿಸಲು ನಿರ್ಧರಿಸಲಾಗಿದೆ. ಗುಲಬರ್ಗಾ ಜಿಲ್ಲಾ ಮರ್ಕಜಿ ಶೀರತ್‌ ಕಮಿಟಿ ವತಿಯಿಂದ ಈದ್‌ ಅಂಗವಾಗಿ ಆಯೋಜಿಸುತ್ತಿದ್ದ ವರ್ಣರಂಜಿತ ಬೃಹತ್ ಮೆರವಣಿಗೆ (ಜುಲೂಸ್‌), ಬಹಿರಂಗ ಸಮಾರಂಭ, ನೃತ್ಯ, ಗಾಯನ ಕಾರ್ಯಕ್ರಮಗಳಿಗೂ ಈ ಬಾರಿ ಅವಕಾಶ ನೀಡಿಲ್ಲ.

ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿಯೇ ಸಿಹಿ ತಿಂಡಿಗಳನ್ನು ಮಾಡಿಕೊಂಡು, ಅಲ್ಲಾಹುನ ಪ್ರಾರ್ಥನೆ ಮಾಡಿ, ಮನೆಯಲ್ಲೇ ನಮಾಜ್‌ ಕೂಡ ಮಾಡಬೇಕು. ಸಾರ್ವಜನಿಕವಾಗಿ ಯಾವುದೇ ಕಾರ್ಯಕ್ರಮ ಆಯೋಜಿಸುವಂತಿಲ್ಲ ಎಂದು ಜಿಲ್ಲಾ ವಕ್ಫ್ ಅಧಿಕಾರಿ ಹಜರತ್ ಅಲಿ ನದಾಫ್ ಕೂಡ ಈಗಾಗಲೇ ಆದೇಶ ಹೊರಡಿಸಿದ್ದಾರೆ.

ಈ ಕುರಿತು ಗುರುವಾರ ನಡೆದ ಸಭೆಯಲ್ಲಿಯೂ ವಿವಿಧ ಮೆರವಣಿಗೆ ಸಮಿತಿ, ಮಸೀದಿಗಳ ಮುಖಂಡರು, ಮೌಲ್ವಿಗಳು, ಟ್ರಸ್ಟ್‌ಗಳ ಸದಸ್ಯರು ಸೇರಿ ಚರ್ಚಿಸಿದರು. ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಸರಳವಾಗಿ ಹಾಗೂ ಸಾಂಕೇತಿಕವಾಗಿ ಮಾತ್ರ ಹಬ್ಬವನ್ನು ಆಚರಿಸಲು ನಿರ್ಧರಿಸಿದರು.

ADVERTISEMENT

42 ವರ್ಷಗಳ ಸಂಭ್ರಮ: ಜಿಲ್ಲಾ ಮರ್ಕಜಿ ಶೀರತ್‌ ಕಮಿಟಿ ವತಿಯಿಂದಲೇ ಕಳೆದ 42 ವರ್ಷಗಳಿಂದ ಬೃಹತ್‌, ವರ್ಣರಂಜಿತ ಮೆರವಣಿಗೆ ಆಯೋಜಿಸುತ್ತ ಬರಲಾಗಿದೆ.‌ ದಕ್ಷಿಣ ಭಾರತದ ವಿವಿಧ ರಾಜ್ಯಗಳಿಂದಲೂ ಮೆರವಣಿಗೆ ಸಮಿತಿಗಳು, ಕಲಾತಂಡಗಳು ಬಂದು ಪಾಲ್ಗೊಳ್ಳುತ್ತಿದ್ದವು. ವಿವಿಧ ರಾಜ್ಯಗಳಿಂದ ಸುಮಾರು 1.5 ಲಕ್ಷಕ್ಕೂ ಹೆಚ್ಚು ಜನ ಈ ಹಬ್ಬದ ವೈಭೋಗವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಇಳಿಸಂಜೆಗೆ ಆರಂಭವಾಗುವ ಚೇತೋಹಾರಿ ಮೆರವಣಿಗೆ ನಸುಕಿನವರೆಗೂ ನಡೆಯುತ್ತಿತ್ತು. ಸಣ್ಣ ಸಣ್ಣ ವಾಹನಗಹಳನ್ನು ಅಲಂಕಾರ ಮಾಡಿ, ವಿದ್ಯುದ್ದೀಪಗಳ ಮಾಲೆ ಜೋಡಿಸಿ, ಮಕ್ಕಳಿಗೆ ಸಿಂಗಾರ ಮಾಡಿ, ಲೇಜಿಮ್‌ ಕುಣಿತ, ಕವಾಲಿ, ಗಜಲ್‌ ಹಾಡಿನೊಂದಿಗೆ ನಡೆಯುತ್ತಿದ್ದ ಸಂಭ್ರಮ ಈ ಬಾರಿ ಇಲ್ಲ.

ಸಮಿತಿಯಿಂದ 43ನೇ ಉತ್ಸವ ಆಚರಿಸಲಾಗುತ್ತಿದೆ. ಆದರೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ರಾಜ್ಯ ವಕ್ಫ ಮಂಡಳಿಯು ಕೋವಿಡ್‌ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿವೆ. ಹೀಗಾಗಿ, ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೈಬಿಡಲಾಗಿದೆ. ಬೆರಳೆಣಿಕೆಯಷ್ಟು ಜನ ಮಾತ್ರ ಮಸೀದಿಗಳಲ್ಲಿ ಸೇರಿ ನಮಾಜ್‌ ಮಾಡಬೇಕು. ನಂತರ ಮನೆಗಳಲ್ಲೇ ಈದ್‌ ಮುಗಿಸಬೇಕು ಸಮಾಜದ ಮುಖಂಡರು ನಿರ್ಧರಿಸಿದ್ದಾರೆ.

ಮೊಹಲ್ಲಾಗಳಲ್ಲಿ ನಡೆಯುವ ಯಾವುದೇ ರೀತಿಯ ಹಗಲು ಮತ್ತು ರಾತ್ರಿಯ ಪ್ರವಚನ, ಮಸೀದಿ ಮತ್ತು ದರ್ಗಾಗಳಲ್ಲಿ ಸಮಾರಂಭ, ಸಾರ್ವಜನಿಕ ಪ್ರದೇಶಗಳಲ್ಲಿ ಧ್ವನಿವರ್ಧಕಗಳು, ಡಿಜಿಟಲ್ ಸೌಂಡ್ ಸಿಸ್ಟಮ್ (ಡಿಜೆ) ಬಳಕೆಯನ್ನೂ ಕೈ ಬಿಡಲಾಗಿದೆ. ಜತೆಗೆ, 60 ವರ್ಷ ಮೇಲ್ಪಟ್ಟವರು ಹಾಗೂ 10 ವರ್ಷದೊಳಗಿನ ಮಕ್ಕಳು ಮಸೀದಿ, ದರ್ಗಾಗಳಿಗೆ ಬರುವುದನ್ನೂ ಮಂಡಳಿ ನಿಷೇಧಿಸಿದ್ದರಿಂದ, ಅಲ್ಲಿಯೂ ಯಾವುದೇ ವಿಶೇಷ ಕಾರ್ಯಕ್ರಮಗಳು ಇರುವುದಿಲ್ಲ ಎಂದು ಮೌಲಾನಾ ಮುಫ್ತಿ ಮಹಮದ್‌ ತಿಳಿಸಿದ್ದಾರೆ.

box-1

ಝಗಮಗಿಸುವ ವಿದ್ಯುದ್ದೀಪಾಲಂಕಾರ

ಕಲಬುರ್ಗಿ: ಪ್ರವಾದಿ ಮಹಮದ್ ಅವರ ಜನ್ಮದಿನದ ಹಬ್ಬ ಮುಸ್ಲಿಂ ಸಮುದಾಯದ ಅತಿ ದೊಡ್ಡ ಹಾಗೂ ಸಂಭ್ರಮದ ಆಚರಣೆ. ಈ ಬಾರಿ ಸರಳವಾಗಿ ಆಚರಿಸಲು ನಿರ್ಧರಿಸಿದ್ದರೂ, ಸಂಭ್ರಮಕ್ಕೇನೂ ಕೊರತೆ ಇಲ್ಲ. ಈಗಾಗಲೇ ನಗರದ ಮೂಲೆಮೂಲೆಯಲ್ಲಿ ಇರುವ ಮಸೀದಿಗಳಲ್ಲಿ ವಿದ್ಯುದ್ದೀಪಾಲಂಕಾರ ಮಾಡಲಾಗಿದೆ.‌

ಹಲವು ಯುವಕ ಮಂಡಳಿಗಳು, ಮಸೀದಿಯ ಮೇಲುಸ್ತುವಾರಿ ಮುಖಂಡರು ಸೇರಿಕೊಂಡು ಪ್ರಮುಖ ರಸ್ತೆಗಳನ್ನು ವರ್ಣರಂಜಿತ ವಿದ್ಯುತ್‌ ದೀಪಗಳಿಂದ ಅಲಂಕರಿಸಿದ್ದು, ಜನರ ಕಣ್ಮನ ಸೆಳೆಯುತ್ತಿದೆ. ರಸ್ತೆಯ ಇಕ್ಕೆಲಗಳಲ್ಲಿ, ಮಧ್ಯದ ವಿಭಜಗದಲ್ಲಿ ಗಿಡ– ಮರ, ವಿದ್ಯುತ್‌ ಕಂಬ ಹೀಗೆ ಯಾವುದನ್ನೂ ಬಿಡದೇ ವರ್ಣರಂಜಿತ ದೀಪಾಲಂಕಾರ ಮಾಡಿದ್ದು ಚೇತೋಹಾರಿಯಾಗಿದೆ.

ಅದರಲ್ಲೂ ಮುಸ್ಲಿಂ ಚೌಕ್‌ ಕೇಂದ್ರವಾಗಿರಿಸಿಕೊಂಡು– ದರ್ಗಾ ರಸ್ತೆ, ಸಾತ್‌ ಗುಂಬಜ್‌, ಚುನ್ನಿ ಮಾರ್ಕೆಟ್‌, ಕಪಡಾ ಬಜಾರ್‌, ಸೂಪರ್‌ ಮಾರ್ಕೆಟ್‌, ಎಪಿಎಂಸಿ ರಸ್ತೆ, ಗಂಜ್‌ ಪ್ರದೇಶದ ಕೊನೆಯವರೆಗೂ ಸಾಲುಸಾಲು ಸರಗಳ ದೀಪಾಲಂಕಾರ ಕಣ್ಣು ಕೋರೈಸುತ್ತಿವೆ.

ಇಲ್ಲಿನ ಹಳೆ ಜೇವರ್ಗಿ ರಸ್ತೆ, ರೈಲು ನಿಲ್ದಾಣದ ಮಾರ್ಗ, ಎಪಿಎಂಸಿ ಸರ್ಕಲ್‌, ಹುಮನಾಬಾದ್‌ ರಿಂಗ್‌ ರಸ್ತೆ, ಸಂತ್ರಾಸವಾಡಿ, ಖೂನಿ ಹವಾಲಾ, ಇಸ್ಲಾಂ ಕಾಲೊನಿ, ಗಾಜಿ ಮೊಹಲ್ಲ, ಕೆಬಿಎನ್‌ ದರ್ಗಾ, ಎಂಎಸ್‌ಕೆ ಮಿಲ್‌ ಪ್ರದೇಶ ಸೇರಿದಂತೆ ಜಿಲ್ಲೆಯಲ್ಲಿ ಇರುವ ಸುಮಾರು 430ಕ್ಕೂ ಹೆಚ್ಚು ಮಸೀದಿಗಳನ್ನು ಅಲಂಕಾರ ಮಾಡಲಾಗಿದೆ ಎಂದು ಕಮಿಟಿ ಮುಖಂಡರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.