ADVERTISEMENT

ಸಾಧನೆಗೆ ವಿದ್ಯೆ ಅವಶ್ಯಕ: ದಾಕ್ಷಾಯಣಿ ಎಸ್.ಅಪ್ಪ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2019, 12:05 IST
Last Updated 19 ಏಪ್ರಿಲ್ 2019, 12:05 IST
ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ದಾಕ್ಷಾಯಣಿ ಎಸ್.ಅಪ್ಪ ಮಾತನಾಡಿದರು
ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ದಾಕ್ಷಾಯಣಿ ಎಸ್.ಅಪ್ಪ ಮಾತನಾಡಿದರು   

ಕಲಬುರ್ಗಿ: ‘ಜೀವನದಲ್ಲಿ ಉನ್ನತ ಸಾಧನೆ ಮಾಡಲು ವಿದ್ಯೆ ಅವಶ್ಯಕವಾಗಿದೆ’ ಎಂದು ಶರಣಬಸವೇಶ್ವರ ಸಂಸ್ಥಾನದ ದಾಕ್ಷಾಯಣಿ ಎಸ್.ಅಪ್ಪ ಅಭಿಪ್ರಾಯಪಟ್ಟರು.

ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಶೈಕ್ಷಣಿಕ ವರ್ಷದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಶರಣಬಸವೇಶ್ವರ ವಿದ್ಯಾವರ್ಧಕ ಸಂಘವು ಮಹಿಳೆಯರಿಗೆ ಹಲವಾರು ವರ್ಷಗಳಿಂದ ಜ್ಞಾನದಾಸೋಹ ಮಾಡುತ್ತ ಬಂದಿದೆ. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಶರಣಬಸವಪ್ಪ ಅಪ್ಪ ಅವರು ಹೆಣ್ಣು ಮಕ್ಕಳಿಗಾಗಿ ಎಂಜಿನಿಯರಿಂಗ್, ಎಂಬಿಎ, ವಿಜ್ಞಾನ, ಕಲಾ, ವಾಣಿಜ್ಯ ಮತ್ತು ಪತ್ರಿಕೋದ್ಯಮ ಕಾಲೇಜುಗಳನ್ನು ಆರಂಭಿಸಿ, ವಿದ್ಯಾವಂತರನ್ನಾಗಿ ಮಾಡಿದ್ದಾರೆ. ಈ ಸಂಸ್ಥೆಯಲ್ಲಿ ಕಲಿತಿರುವ ಎಷ್ಟೋ ಮಹಿಳೆಯರು ಇಂದು ಉನ್ನತ ಸ್ಥಾನದಲ್ಲಿದ್ದಾರೆ’ ಎಂದರು.

ADVERTISEMENT

ನ್ಯಾಯಧೀಶೆ ಸೂರ್ಯಪ್ರಭ ಎಚ್.ಡಿ. ಮಾತನಾಡಿ, ‘ವಿದ್ಯಾರ್ಥಿಗಳು ಶ್ರಮವಹಿಸಿದರೆ ಮಾತ್ರ ಜೀವನದಲ್ಲಿ ಉನ್ನತ ಸಾಧನೆಗೈಯಲು ಸಾಧ್ಯವಾಗುತ್ತದೆ. ಯಶಸ್ಸಿಗೆ ಸರಳ ಮಾರ್ಗವಿಲ್ಲ. ಅದಕ್ಕಾಗಿ ವಿದ್ಯಾರ್ಥಿಗಳು ಶ್ರಮವಹಿಸಿದರೆ ಮಾತ್ರ ಸಾಧನೆಯ ಹಾದಿ ಸುಲಭವಾಗುತ್ತದೆ. ಶಿಸ್ತು, ಶ್ರದ್ಧೆ, ಕಠಿಣಶ್ರಮ ಇವು ಮೂರು ನಿಮ್ಮನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತವೆ’ ಎಂದು ತಿಳಿಸಿದರು.

ಶರಣಬಸವ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಡಾ.ಲಿಂಗರಾಜ ಶಾಸ್ತ್ರಿ ಮಾತನಾಡಿದರು. ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ನೀಲಾಂಬಿಕಾ ಶೇರಿಕಾರ ಸ್ವಾಗತಿಸಿದರು.

ಪಿಎಚ್.ಡಿ ಪದವಿ ಪಡೆದಿರುವ ಡಾ.ಎನ್.ಎಸ್.ಹೂಗಾರ, ಡಾ.ಸಿದ್ದಲಿಂಗರೆಡ್ಡಿ ಮತ್ತು ಮಹಾವಿದ್ಯಾಲಯದಲ್ಲಿ 25 ವರ್ಷಗಳಿಂದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥೆ ಪ್ರೊ. ಜಾನಕಿ ಹೊಸೂರು ಅವರನ್ನು ಸನ್ಮಾನಿಸಲಾಯಿತು.

ಪ್ರೊ.ಶಾಂತಲಾ ನಿಷ್ಠಿ, ಪ್ರೊ.ಸಾವಿತ್ರಿ ಜಂಬಲದಿನ್ನಿ, ಡಾ.ಇಂದಿರಾ ಶೆಟಕಾರ, ಡಾ.ಸೀಮಾ ಪಾಟೀಲ, ಡಾ.ಪುಟ್ಟಮಣಿ ದೇವಿದಾಸ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.