ಚಿಂಚೋಳಿ: ಕೃಷಿ ಮತ್ತು ತೋಟಗಾರಿಕೆಯಲ್ಲಿ ವಿನೂತನ ಪ್ರಯೋಗಗಳನ್ನು ನಡೆಸಿ, ಹೊಸ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸಿ. ಇಲಾಖೆಯಲ್ಲಿ ಕಣ್ಣಿಗೆ ಕಾಣುವ ಬದಲಾವಣೆಯನ್ನು ತಮ್ಮ ಸಾಧನೆಯ ಮೂಲಕ ತೋರಿಸಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮದ್ ಪಟೇಲ್ ತಿಳಿಸಿದರು.
ಇಲ್ಲಿನ ತಾಲ್ಲೂಕು ಪಂಚಾಯಿತಿಯಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ವಿನೂತನ ಪ್ರಯೋಗಗಳಿಗೆ ಅನುದಾನ ಬೇಕಿದ್ದರೆ ತಿಳಿಸಿ, ಜಿಲ್ಲಾ ಪಂಚಾಯಿತಿ ಸಿಇಒ ಅವರೊಂದಿಗೆ ಚರ್ಚಿಸಿ ಅನುದಾನ ಕೊಡಿಸಲು ಪ್ರಯತ್ನಿಸುತ್ತೇನೆ ಎಂದರು.
ಮುಂಡಗೋಡ, ಚಿತ್ರದುರ್ಗ, ದಾವಣಗೆರೆ, ದಾಂಡೇಲಿ ಹವಾಗುಣ, ನಮ್ಮ ಹವಾಗುಣ ಒಂದಕ್ಕೊಂದು ಹೋಲಿಕೆಯಾಗುತ್ತವೆ. ಹೀಗಾಗಿ ಕಾಳು ಮೆಣಸು, ಯಾಲಕ್ಕಿ, ಅಡಿಕೆ, ಕಾಜು, ಶುಂಠಿ ಮೊದಲಾದವುಗಳನ್ನು ಬೇಸಾಯ ಮಾಡಲು ರೈತರಿಗೆ ಪ್ರೋತ್ಸಾಹಿಸಬೇಕು. ಇದರಿಂದ ರೈತರ ಜೀವನ ಮಟ್ಟ ಸುಧಾರಿಸುತ್ತದೆ ಎಂದರು.
ಸರ್ಕಾರಿ ಶಾಲೆಯ ಫಲಿತಾಂಶ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಸೊಳ್ಳೆ ಪ್ರತಿರೋಧಕ ದ್ರವದ ಗುಡ್‌ನೈಟ್ ಲಿಕ್ವಿಡೇಟರ್ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಬಳಸುವಂತೆ ಸೂಚಿಸಿದರು.
ಎಲ್ಲ ರೈತರು ಕಡ್ಡಾಯವಾಗಿ ಬೆಳೆ ವಿಮೆ ನೋಂದಾಯಿಸಬೇಕು. ಕಳೆದ ವರ್ಷ ಜಿಲ್ಲೆಗೆ 600 ಕೋಟಿಗೂ ಹೆಚ್ಚು ಪರಿಹಾರ ಬಂದಿದೆ. ಈ ವರ್ಷ ದಾಖಲೆಯ ಪ್ರಮಾಣದಲ್ಲಿ ವಿಮೆ ನೋಂದಣಿಗೆ ಅವರು ಸಲಹೆ ನೀಡಿದರು.
ತಾಲ್ಲೂಕು ಪಂಚಾಯಿತಿ ಶಂಕರ ರಾಠೋಡ ಮಾತನಾಡಿದರು.
ಸಭೆಯಲ್ಲಿ ಬಿಇಒ ವಿ.ಲಕ್ಷ್ಮಯ್ಯ, ಜಯಪ್ಪ ಚಾಪಲ್, ಸಿಡಿಪಿಒ ಸವಿತಾ, ಪಂಚಾಯತ್ ರಾಜ್ ಇಲಾಖೆಯ ಎಇಇ ಪ್ರವೀಣಕುಮಾರ, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೆಶಕ ಡಾ.ಮಲ್ಲಿಕಾರ್ಜುನ ಗುತ್ತೇದಾರ, ಟಿಎಚ್‌ಒ ಡಾ.ಮಹಮದ್ ಗಫಾರ್, ಅನುಸೂಯಾ ಚವ್ಹಾಣ, ಸಾಮಾಜಿಕ ಅರಣ್ಯ ಇಲಾಖೆಯ ಅಂಕುಶ ಉಪಸ್ಥಿತರಿದ್ದರು. ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು.
ಕಳೆದ ವರ್ಷದ ಬೆಳೆ ವಿಮೆ ಪರಿಹಾರದ ಬಾಕಿ ಹಣ ಬಿಡುಗಡೆಗೆ ಸಮಗ್ರ ವರದಿ ಸಿದ್ಧಪಡಿಸಿ ಜಿಲ್ಲಾಧಿಕಾರಿಗಳ ಮೂಲಕ ಕಳುಹಿಸಲಾಗುತ್ತಿದೆ. ಈ ಸಂಬಂಧ ಎರಡು ಸಭೆಗಳು ನಡೆಸಲಾಗಿದೆ ಶೀಘ್ರವೇ ಹಣ ಬಿಡುಗಡೆಯಾಗಲಿದೆ.ಸಮದ್ ಪಟೇಲ್ ಜಂಟಿ ನಿರ್ದೆಶಕರು ಕೃಷಿ ಇಲಾಖೆ ಕಲಬುರಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.