ADVERTISEMENT

ಮಳಖೇಡ: ಎಂಜಿನಿಯರಿಂಗ್ ವಿದ್ಯಾರ್ಥಿನಿ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 19:50 IST
Last Updated 18 ಸೆಪ್ಟೆಂಬರ್ 2025, 19:50 IST
<div class="paragraphs"><p>ಸಾವು</p></div>

ಸಾವು

   

ಪ್ರಾತಿನಿಧಿಕ ಚಿತ್ರ

ಸೇಡಂ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಮಳಖೇಡದ ರಾಜಶ್ರೀ ಸಿಮೆಂಟ್ ಕಂಪನಿಯ ಕಾಲೊನಿ ಹಿಂಭಾಗದಲ್ಲಿ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿಯ ಶವ ಗುರುವಾರ ಪತ್ತೆಯಾಗಿದೆ.

ADVERTISEMENT

ಮಳಖೇಡದ ಆದಿತ್ಯ‌ ನಗರದ ನಿವಾಸಿ ಭಾಗ್ಯಶ್ರೀ ಚನ್ನವೀರಪ್ಪ ಸುಲಹಳ್ಳಿ (20) ಮೃತ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ.

ಭಾಗ್ಯಶ್ರೀ ಅವರು ರಾಜಶ್ರೀ ಸಿಮೆಂಟ್ ಕಂಪನಿಯ ಕಾಲೇಜಿನಲ್ಲಿಯೇ ಪಿಯುಸಿ ಅಧ್ಯಯನ ಮಾಡಿದ್ದರು. ನಂತರ ಬೆಂಗಳೂರಿನ ಆಕ್ಸ್‌ಫರ್ಡ್‌ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಅಧ್ಯಯನಕ್ಕೆ ಪ್ರವೇಶ ಪಡೆದಿದ್ದರು. ಸೆ.11ರಂದು ಪ್ರವೇಶ ಪಡೆದು ಶುಲ್ಕ ಭರಿಸಿದ್ದರು. ಸೆ.13ರಂದು ಕಾಲೇಜಿಗೆ ತೆರಳಿ ತರಗತಿಗೆ ಹಾಜರಾಗುವವರಿದ್ದರು.

ಸೆ.11ರಂದು ಮನೆಯಿಂದ ಕಾಣೆಯಾಗಿದ್ದಾರೆ ಎಂದು ಅವರ ತಂದೆ ಮಳಖೇಡ ಪೊಲೀಸ್ ಠಾಣೆಯಲ್ಲಿ ಸೆ.12ರಂದು ದೂರು ನೀಡಿದ್ದರು. ಇದೀಗ ವಿದ್ಯಾರ್ಥಿನಿ ಶವವಾಗಿ ಪತ್ತೆಯಾಗಿದ್ದಾರೆ. ಕಂಪನಿಯ ಕಾಲೊನಿಯ ಗಾರ್ಡನ್ ಪ್ರದೇಶದ ಹಿಂಭಾಗದಲ್ಲಿ ವಾಸನೆ ಬರುತ್ತಿರುವುದನ್ನು ಗಮನಿಸಿದ ಕಂಪನಿ ಭದ್ರತಾ ಸಿಬ್ಬಂದಿ ಶವ ಇರುವುದನ್ನು ಗುರುತಿಸಿ, ಕಂಪನಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಕಂಪನಿ ಅಧಿಕಾರಿಗಳು ಮಳಖೇಡ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ. ಆಗ ವಿದ್ಯಾರ್ಥಿನಿಯ ಗುರುತು ಪತ್ತೆಯಾಗಿದೆ.

ಕೊಲೆ ಶಂಕೆ: ಮೃತ ವಿದ್ಯಾರ್ಥಿನಿಯ ಶವ ಪತ್ತೆಯಾಗುತ್ತಿದ್ದಂತೆಯೇ ಪಾಲಕರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿನಿಯ ಶವವನ್ನು ಕಲಬುರಗಿಯ ಜಿಮ್ಸ್‌ಗೆ ಕಳುಹಿಸಲಾಗಿದೆ. ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ತಂಡ ಮತ್ತು ಬೆರಳಚ್ಚು ತಂಡ ಆಗಮಿಸಿ ಸ್ಥಳ ಪರಿಶೀಲಿಸಿತು‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.