ಎತ್ತಿಪೋತೆ ಜಲಪಾತ
ಚಿಂಚೋಳಿ: ಇಲ್ಲಿನ ವನ್ಯಜೀವಿ ಧಾಮದ ಸೆರಗಿನಲ್ಲಿರುವ ಎತ್ತಿಪೋತೆ ಹಾಗೂ ಮಾಣಿಕಪುರ ಜಲಪಾತಗಳು, ಮುಂಗಾರು ಮಳೆಗೆ ಜೀವ ಪಡೆದಿದ್ದು, ಪ್ರಕೃತಿ ಪ್ರಿಯರು ಹಾಗೂ ಪ್ರವಾಸಿಗರನ್ನು ಸೆಳೆಯುತ್ತಿವೆ.
ಜೂನ್‌ನಲ್ಲಿ ಮಳೆಯ ಕೊರತೆಯಿಂದ ಸೊರಗಿದ್ದ ಜಲಪಾತಗಳು, ಜುಲೈ ಕೊನೆಯ ವಾರದಲ್ಲಿ ಸುರಿದ ಮಳೆಯಿಂದ ಮೈದುಂಬಿಕೊಳ್ಳುತ್ತಿವೆ. ಈ ಎರಡೂ ಜಲಪಾತಗಳ ನೀರು ಬಂದು ಸೇರುವ ಚಂದ್ರಂಪಳ್ಳಿ ಜಲಾಶಯ ಹಸಿರು ಸಿರಿಯಿಂದ ಕಣ್ಮನ ಸೂರೆಗೊಳ್ಳುವಂತಿದೆ. ಆದರೆ ಜಲಾಶಯದ ಬಂಡ್ ನಿರ್ವಹಣೆಯ ಕೊರತೆಯಿಂದ ಗಿಡಗಂಟೆಗಳು ಬೆಳೆದಿವೆ.
ಕುಂಚಾವರಂನಿಂದ ಧರ್ಮಾ ಸಾಗರ ಮಾರ್ಗ ರಸ್ತೆಯಲ್ಲಿ ಗೋಪು ನಾಯಕ ತಾಂಡಾ ಕ್ರಾಸ್‌ನಲ್ಲಿ ಇರುಗಿ ಸಂಗಾಪುರ ಮಾರ್ಗದ ರಸ್ತೆಯಲ್ಲಿ 2 ಕಿ.ಮೀ ಕ್ರಮಿಸಿದರೆ ಎಡಬದಿಗೆ ನೀರಿನ ಭೋರ್ಗರೆತ ಕಿವಿಗಪ್ಪಳಿಸುತ್ತದೆ. ವಾಹನಗಳಿಂದ ಇಳಿದು ಮುಂದಡಿಯಿಟ್ಟರೆ ಇಲ್ಲಿ ಎರಡು ಜಲಪಾತಗಳು ಸಿಗುತ್ತವೆ.
ಈಶಾನ್ಯ ಮತ್ತು ಉತ್ತರ ದಿಕ್ಕಿನಿಂದ ಕಲ್ಲುಬಂಡೆಗಳೊಂದಿಗೆ ಹರಿಯುವ ನೀರಿನ ತಾಣ ಮೊದಲನೇಯದು. ಇಲ್ಲಿಂದ ಪಶ್ಚಿಮಕ್ಕೆ ತೊರೆಗೊಂಟ(ಎತ್ತಿಪೋತೆ ನಾಲೆ) 200 ಮೀ. ಸಾಗಿದರೆ ಎತ್ತಿಪೋತೆ ಜಲಪಾತ ಕಣ್ಮನ ಸೆಳೆಯುತ್ತದೆ. ಇಲ್ಲಿ ಊಟ, ಉಪಹಾರ ಮತ್ತು ಕುಡಿಯಲು ನೀರು ಸಿಗುವುದಿಲ್ಲ. ಕೆಲವೊಮ್ಮೆ ಲಭಿಸಿದರೂ ಗುಣಮಟ್ಟದ ಖಾತ್ರಿಯಿಲ್ಲ.
ಚಿಂಚೋಳಿ ತಾಲ್ಲೂಕಿನ ಚಂದ್ರಂಪಳ್ಳಿ ಜಲಾಶಯದ ಸುತ್ತಲಿನ ಹಸಿರು ಸಿರಿ
ತಾಲ್ಲೂಕಿನ ಮಾಣಿಕಪುರ ಜಲಪಾತವು, ಚಿಂಚೋಳಿ–ಚಂದ್ರಂಪಳ್ಳಿ–ಕೊಳ್ಳೂರು ಮಾರ್ಗವಾಗಿ ಕುಸ್ರಂಪಳ್ಳಿ ತಲುಪಿ, 500 ಮೀ. ಉತ್ತರಕ್ಕೆ ಸಾಗಿದರೆ, ಬಲಕ್ಕೆ ತಿರುಗಿ 2 ಕಿ.ಮೀ. ನಡೆದರೆ ಮಾಣಿಕಪುರ ಜಲಪಾತ ಸೂರೆಗೊಳ್ಳುತ್ತದೆ.
ಮಾಣಿಕಪುರ ಜನವಸತಿ ರಹಿತ ಗ್ರಾಮವಾಗಿದ್ದು, ಸಮೀದಲ್ಲಿ ಹರಿಯುವ ರಾಚೇನಹಳ್ಳಿ ನಾಲಾದಲ್ಲಿ ಸರಣಿ ಜಲಪಾತಗಳನ್ನು ಕಣ್ತುಂಬಿಕೊಳ್ಳಬಹುದು. ಇಲ್ಲಿನ ಹುಲಿ ಮೋಕ್ ವ್ಯಾಲಿ ಅದ್ಭುತ ತಾಣವಾಗಿದೆ. ಎತ್ತಿಪೋತೆ ಜಲಪಾತದಲ್ಲಿ ಇಳಿಯಲು ಬರುವುದಿಲ್ಲ. ಆದರೆ ಮಾಣಿಕಪುರ ಜಲಪಾತದಲ್ಲಿ ಮೋಜು ಮಾಡಬಹುದು. ಇಲ್ಲಿಗೆ ನಡೆದು ಬರುವುದರಿಂದ ಚಾರಣದ ಸವಿಯೂ ದೊರೆಯುತ್ತದೆ.
ಚಿಂಚೋಳಿ ವನ್ಯಜೀವಿಧಾಮ ಪ್ರವಾಸಿಗರನ್ನು ಸೆಳೆಯುತ್ತಿದೆ. ಪ್ರವಾಸಿಗರು ತಿಂಡಿ–ತಿನಿಸು ತಿಂದು, ಪ್ಲಾಸ್ಟಿಕ್ ಬಾಟಲ್‌ಗಳನ್ನು ಎಲ್ಲೆಂದರಲ್ಲಿ ಬಿಸಾಕುವಂತಿಲ್ಲಸಂಜೀವಕುಮಾರ ಚವ್ಹಾಣ, ವಲಯ ಅರಣ್ಯಾಧಿಕಾರಿ ವನ್ಯಜೀವಿಧಾಮ
ಚಿಂಚೋಳಿ ವನ್ಯಜೀವಿ ಧಾಮ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ನದಿ, ತೊರೆ, ಜಲಪಾತಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆಚಿಂಚೋಳಿ ವನ್ಯಜೀವಿ ಧಾಮ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ನದಿ, ತೊರೆ, ಜಲಪಾತಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.