ಕಲಬುರಗಿ: ‘ವೃದ್ಧಾಪ್ಯ ಬದುಕಿನ ಅಸಹನೀಯ ಅವಸ್ಥೆ ಎನ್ನುವುದು ತಪ್ಪು. 60 ವರ್ಷವಾದ ನಂತರವೇ ಮನುಷ್ಯ ಪಕ್ವವಾದ ಹಣ್ಣಿನಂತಾಗುತ್ತಾನೆ. ಆ ಅವಧಿಯಲ್ಲಿಯೇ ಅಪ್ರತಿಮ ಕಾಣಿಕೆ ಕೊಡುವ ಶಕ್ತಿ ಬರುತ್ತದೆ’ ಎಂದು ರಾಜ್ಯಸಭೆ ಮಾಜಿ ಸದಸ್ಯ ಬಸವರಾಜ ಪಾಟೀಲ ಸೇಡಂ ಅಭಿಪ್ರಾಯಪಟ್ಟರು.
ಲೇಖಕಿ ನೀಲಮ್ಮ ಕತ್ನಳ್ಳಿ ಅವರ ಅಮೃತ ಮಹೋತ್ಸವದ ಪ್ರಯುಕ್ತ ಶಹಾಬಾದ್‌ನ ರೇಣುಕಾ ಪ್ರಕಾಶನ ಹಾಗೂ ಅಭಿನಂದನ ಗ್ರಂಥ ಸಂಪಾದಕ ಮಂಡಳಿಯ ಸಹಯೋಗದಲ್ಲಿ ನಗರದ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ‘ನೀಲಾಂಜನ’ ಅಭಿನಂದನ ಗ್ರಂಥ ಲೋಕರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘60 ವರ್ಷದವರೆಗೂ ಮನುಷ್ಯ ಕಲಿಕೆಗೆ ತೆರೆದುಕೊಳ್ಳುತ್ತಾನೆ. 60 ವರ್ಷ ದಾಟಿದವರು ಕ್ರಿಯಾಶೀಲರಾಗಿರುತ್ತಾರೆ. ನಾನೂ 60 ವರ್ಷಗಳ ನಂತರ ಹೆಚ್ಚು ಕೆಲಸ ಮಾಡಿದ್ದೇನೆ. ಆದ್ದರಿಂದ ಹಿರಿಯರು ಕೇವಲ ವಾಯುವಿಹಾರಕ್ಕೆ ಸೀಮಿತವಾಗಬಾರದು. ಬೇರೆ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಬೇಕು’ ಎಂದರು.
‘ನೀಲಮ್ಮ ಕತ್ನಳ್ಳಿಯವರು ವಿಶಿಷ್ಟ ಪರಿಸ್ಥಿತಿಯಲ್ಲಿ ಮನಸ್ಸಿಗೆ ಆಘಾತವಾಗಿ ಕೆಲ ಕಾಲ ಮನೆಯಲ್ಲಿಯೇ ಕುಳಿತಿದ್ದರು. ಸಮಯಕ್ಕೆ ಮುಂಚೆಯೇ ಬಿಟ್ಟು ಹೋಗುತ್ತಾರೆ ಎಂದುಕೊಂಡಿದ್ದೆವು. ಸಮಾಜದ ಋಣ ಇರುತ್ತದೆ. ಬಸವಣ್ಣನವರ ಬದುಕನ್ನು ಆದರ್ಶವಾಗಿ ತೆಗೆದುಕೊಂಡು ಬದುಕಬೇಕು’ ಎಂದು ಹೇಳಿದರು.
ಹಿರಿಯ ಸಾಹಿತಿ ಎ.ಕೆ.ರಾಮೇಶ್ವರ ಮಾತನಾಡಿ, ‘ನೀಲಮ್ಮ ತಮ್ಮ ವ್ಯಕ್ತಿತ್ವವನ್ನು ತಾವೇ ನಿರ್ಮಾಣ ಮಾಡಿಕೊಂಡಿದ್ದಾರೆ. ಪ್ರೊ. ವಸಂತ ಕುಷ್ಟಗಿಯವರ ಯೋಗ್ಯ ಮಾರ್ಗದರ್ಶನ ಅವರಿಗೆ ಸಿಕ್ಕಿತು. ಗುಮಾಸ್ತೆಯಾಗಿ ಕೆಲಸ ಮಾಡಿದ ಕಾಲೇಜಿನಲ್ಲಿಯೇ ಉಪನ್ಯಾಸಕಿಯಾಗಿ ನೇಮಕವಾಗುವ ಮಟ್ಟಕ್ಕೆ ಅವರು ಬೆಳೆದರು’ ಎಂದರು.
‘ಓದು ಮತ್ತು ಬರಹ ಅಂತರ್ಗತವಾದಾಗ ಒಳ್ಳೆಯ ವ್ಯಕ್ತಿಗಳ ಪರಿಚಯವಾಗುತ್ತದೆ. ಹಾಗೆಯೇ ನೀಲಮ್ಮನವರಿಗೆ ಆಕಾಶವಾಣಿಯ ನಂಟು ಬೆಳೆಯುತ್ತದೆ. ಅವರ ವಿಚಾರಗಳು ಆಕಾಶವಾಣಿಯಲ್ಲಿ ಪ್ರಸಾರವಾಗುತ್ತವೆ’ ಎಂದು ಹೇಳಿದರು.
‘ನೀಲಮ್ಮನವರು ತಮ್ಮನ್ನು ತಾವು ವಿಸ್ತರಿಸಿಕೊಂಡ ಬಗೆಯನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು ಎನ್ನುವ ಉದ್ದೇಶದೊಂದಿಗೆ ಅಭಿನಂದನ ಗ್ರಂಥ ಸಂಪಾದಿಸಲಾಗಿದೆ. ಈ ಗ್ರಂಥದಲ್ಲಿ ಉತ್ತಮವಾದ ಲೇಖನಗಳಿವೆ. ಸಂಕ್ಷಿಪ್ತ ಜೀವನ ಚರಿತ್ರೆ ಇದೆ’ ಎಂದರು.
ಸಾಹಿತಿ ಮಹಿಪಾಲರೆಡ್ಡಿ ಮುನ್ನೂರು ಪುಸ್ತಕ ಪರಿಚಯ ಮಾಡಿದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರನ್ನು ಸನ್ಮಾನಿಸಲಾಯಿತು.
ನಿವೃತ್ತ ಪ್ರಾಚಾರ್ಯ ಕೆ.ವಿಶ್ವನಾಥ ಅಧ್ಯಕ್ಷತೆ ವಹಿಸಿದ್ದರು. ಕಲಬುರಗಿ ಬಸವ ಸಮಿತಿ ಅಧ್ಯಕ್ಷೆ ವಿಲಾಸವತಿ ಖೂಬಾ, ಲೇಖಕಿ ನೀಲಮ್ಮ ಕತ್ನಳ್ಳಿ, ನಿವೃತ್ತ ಪ್ರಾಧ್ಯಾಪಕ ವಿ.ಜಿ.ಪೂಜಾರ, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಅನಿಲಕುಮಾರ ಮರಗೋಳ, ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಜೇಂದ್ರ ಕೊಂಡಾ, ನಿವೃತ್ತ ಪ್ರಾಚಾರ್ಯ ಎಸ್.ಎಸ್.ಮಾಕಲ್ ಹಾಗೂ ಉದ್ಯಮಿ ಮಲ್ಲಿಕಾರ್ಜುನ ಇಂಗಳೇಶ್ವರ ಹಾಜರಿದ್ದರು.
ಸಂಗೀತ ಪ್ರಾಧ್ಯಾಪಕಿ ರೇಣುಕಾ ಹಾಗರಗುಂಡಗಿ ಪ್ರಾರ್ಥಿಸಿದರು. ನಿವೃತ್ತ ಪ್ರಾಧ್ಯಾಪಕಿ ಗೌರಾದೇವಿ ಕತ್ನಳ್ಳಿ ಸ್ವಾಗತಿಸಿದರು. ಶೋಭಾದೇವಿ ಚೆಕ್ಕಿ ನಿರೂಪಿಸಿದರು. ಮಲ್ಲಿನಾಥ ತಳವಾರ ವಂದಿಸಿದರು.
ಪ್ರತಿಯೊಬ್ಬರ ಮೇಲೂ ಇದೆ ಸಮಾಜದ ಋಣ ಉತ್ತಮ ಲೇಖನ ಹೊಂದಿದ ಅಭಿನಂದನ ಗ್ರಂಥ ಓದಿನಿಂದ ಒಳ್ಳೆಯ ವ್ಯಕ್ತಿಗಳ ಪರಿಚಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.