ಕಲಬುರಗಿ: ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯ ವ್ಯಾಪ್ತಿಯ ಕಲಬುರಗಿ ಮತ್ತು ಬೀದರ್ ವ್ಯಾಪ್ತಿಯಲ್ಲಿ ಶನಿವಾರ ನಡೆದ ಸ್ನಾತಕ ಕೋರ್ಸ್‌ಗಳ ರಿಪೀಟರ್ಸ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಒಂದೂವರೆ ಗಂಟೆ ತಡವಾಗಿ ವಿತರಿಸಿದ್ದರಿಂದ ವಿದ್ಯಾರ್ಥಿಗಳು ಪರಿತಪಿಸಿದರು.
ಶನಿವಾರ ಮಧ್ಯಾಹ್ನ 2ಕ್ಕೆ ಬಿಬಿಎ ಪ್ರಥಮ ಸೆಮಿಸ್ಟರ್‌ನ ಬ್ಯುಸಿನೆಸ್ ಆರ್ಗನೈಜೇಷನ್ (ಒಇ), ಬಿಎ ಪ್ರಥಮ ಸೆಮಿಸ್ಟರ್‌ನ ಅರ್ಥಶಾಸ್ತ್ರ, ಬಿಕಾಂ ಪ್ರಥಮ ಸೆಮಿಸ್ಟರ್‌ನ ಅಕೌಂಟಿಂಗ್ ಫಾರ್ ಎವರಿಒನ್, ಬಿಎಸ್‌ಸಿ ಪ್ರಥಮ ಸೆಮಿಸ್ಟರ್‌ನ ಪ್ರಾಣಿವಿಜ್ಞಾನ ಸೇರಿದಂತೆ ಇತರೆ ವಿಷಯಗಳ ಪರೀಕ್ಷೆ ನಿಗದಿಯಾಗಿತ್ತು.
‘ಮಧ್ಯಾಹ್ನ 1.30ಕ್ಕೆ ಪರೀಕ್ಷಾ ನೋಡಲ್ ಕೇಂದ್ರಗಳಿಗೆ ತಲುಪಬೇಕಿದ್ದ ಪ್ರಶ್ನೆ ಪತ್ರಿಕೆಗಳು 2.30 ಆದರೂ ಬರಲಿಲ್ಲ. ಪರೀಕ್ಷಾ ಕೇಂದ್ರಗಳ ಕೊಠಡಿ ಮೇಲ್ವಿಚಾರಕರು ವಿವಿಯ ಮೌಲ್ಯಮಾಪನ ವಿಭಾಗಕ್ಕೆ ಕರೆ ಮಾಡಿದ್ದರೂ ಸರಿಯಾಗಿ ಸ್ಪಂದನೆಯೇ ಸಿಗಲಿಲ್ಲ. ಆತಂಕದಿಂದ ವಿದ್ಯಾರ್ಥಿಗಳು ಉಪನ್ಯಾಸಕರೊಂದಿಗೆ ವಾಗ್ವಾದಕ್ಕೆ ಇಳಿದರು. ನೋಡಲ್ ಕೇಂದ್ರಗಳ ಮೇಲ್ವಿಚಾರಕರು ಪರಸ್ಪರ ಮಾತನಾಡಿಕೊಂಡು, ವಿವಿಯ ಪರೀಕ್ಷಾ ವಿಭಾಗದ ಮೇಲೆ ಒತ್ತಡ ಹಾಕಿದ ಬಳಿಕ 2.40ರ ಸುಮಾರಿಗೆ ತರಾತುರಿಯಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಮೇಲ್ ಮೂಲಕ ಕಳುಹಿಸಿದರು’ ಎಂದು ಪರೀಕ್ಷಾ ಕೇಂದ್ರದ ಮೇಲ್ವಿಚಾರಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಬಂದಂತಹ ಮೇಲ್‌ಗಳನ್ನು ಪರಿಶೀಲಿಸಿ, ವಿಷಯವಾರು ಪ್ರಶ್ನೆ ಪತ್ರಿಕೆಗಳನ್ನು ವಿಂಗಡಣೆ ಮಾಡಿ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಜೆರಾಕ್ಸ್ ಮಾಡಿ ವಿದ್ಯಾರ್ಥಿಗಳ ಕೈಗೆ ಇರಿಸುವ ವೇಳೆಗೆ ಮಧ್ಯಾಹ್ನ 3.30 ಆಗಿತ್ತು ಎಂದರು.
‘ವಿಳಂಬವಾಗಿ ಪ್ರಶ್ನೆ ಪತ್ರಿಕೆಗಳನ್ನು ಕಳುಹಿಸುವುದು, 80 ವಿದ್ಯಾರ್ಥಿಗಳಿದ್ದಲ್ಲಿ 20 ಪ್ರಶ್ನೆ ಪತ್ರಿಕೆಗಳನ್ನು ರವಾನಿಸುವುದು ಮತ್ತು 12 ಜನ ವಿದ್ಯಾರ್ಥಿಗಳಿದ್ದರೆ ಅನಾವಶ್ಯಕವಾಗಿ 80 ಪ್ರಶ್ನೆ ಪತ್ರಿಕೆಗಳನ್ನು ಕಳುಹಿಸುವಂತಹ ಬೇಜಾವಬ್ದಾರಿಯ ವರ್ತನೆ ಆಗಾಗ ನಡೆಯುತ್ತಿದೆ. ವಿಶ್ವವಿದ್ಯಾಲಯದ ಗಮನಕ್ಕೆ ತಂದರೂ ತಮ್ಮ ತಪ್ಪನ್ನು ತಿದ್ದಿಕೊಳ್ಳುತ್ತಿಲ್ಲ. ಫಲಿತಾಂಶ ಪ್ರಕಟಣೆಗೂ ವಿಳಂಬ ಮಾಡುವ ಮೌಲ್ಯಮಾಪನ ವಿಭಾಗ, ಪ್ರಶ್ನೆ ಪತ್ರಿಕೆ ಕಳುಹಿಸುವಲ್ಲಿಯೂ ವಿಳಂಬ ಮಾಡಿ, ವಿದ್ಯಾರ್ಥಿ ಜೀವನದ ಜತೆಗೆ ಚೆಲ್ಲಾಟ ಆಡುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ನೋಡಲ್ ಪರೀಕ್ಷಾ ಕೇಂದ್ರದ ಉಪನ್ಯಾಸಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.
‘ಎನ್‌ಇಪಿ ಅನ್ವಯ ನಿಗದಿತ ಅವಧಿಯಿಂದ ಪರೀಕ್ಷೆ ಶುರುವಾದ ಒಂದು ಗಂಟೆಯ ಒಳಗೆ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ದಾಖಲಾತಿಯನ್ನು ಯುಯುಸಿಎಂಎಸ್‌ನಲ್ಲಿ ದಾಖಲಿಸಬೇಕು. ಶನಿವಾರ ಮಧ್ಯಾಹ್ನ ಐದಾರು ಪ್ರಶ್ನೆ ಪತ್ರಿಕೆಗಳ ಪರೀಕ್ಷೆ ಒಂದೂವರೆ ಗಂಟೆ ತಡವಾಗಿ ಶುರುವಾಗಿವೆ. ಹಾಜರಾತಿ ದಾಖಲಿಸುವುದು ಹೇಗೆ? ಪರೀಕ್ಷೆಯಲ್ಲಿ ಗೈರು ಎಂದು ತೋರಿಸಿದರೆ ವಿದ್ಯಾರ್ಥಿಗಳ ಒಂದು ವರ್ಷದ ಭವಿಷ್ಯ ಹಾಳಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.