ADVERTISEMENT

ಕಲಬುರಗಿ ವಿವಿಯಲ್ಲಿ ನಕಲಿ ಉಪನ್ಯಾಸಕರಿಂದ ಮೌಲ್ಯಮಾಪನ!

ಮಲ್ಲಿಕಾರ್ಜುನ ನಾಲವಾರ
Published 16 ಆಗಸ್ಟ್ 2022, 4:09 IST
Last Updated 16 ಆಗಸ್ಟ್ 2022, 4:09 IST
ಗುಲಬರ್ಗಾ ವಿಶ್ವವಿದ್ಯಾಲಯದ ಕಾರ್ಯಸೌಧ
ಗುಲಬರ್ಗಾ ವಿಶ್ವವಿದ್ಯಾಲಯದ ಕಾರ್ಯಸೌಧ   

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗವು ಅರ್ಥಶಾಸ್ತ್ರದ 3ನೇ ಸೆಮಿಸ್ಟರ್‌ನ ಪದವಿ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಅನರ್ಹ ಮತ್ತು ನಕಲಿ ಉಪನ್ಯಾಸಕರನ್ನು ನೇಮಿಸಿಕೊಂಡಿದ್ದು ಬೆಳಕಿಗೆ ಬಂದಿದೆ.

ಪ್ರಸ್ತುತ ವಿಶ್ವವಿದ್ಯಾಲಯದಲ್ಲಿ ರಸಾಯನ ವಿಜ್ಞಾನ, ಅರ್ಥಶಾಸ್ತ್ರ, ಸಮಾಜ ವಿಜ್ಞಾನ, ಭೌತವಿಜ್ಞಾನ, ಗಣಿತ, ಕಂಪ್ಯೂಟರ್ ಸೈನ್ಸ್ ಸೇರಿ ಇತರೆ ವಿಷಯಗಳ ಮೌಲ್ಯಮಾಪಕರ ಪಟ್ಟಿ ಪ್ರಕಟವಾಗಿದೆ.

‘ವಿಶ್ವವಿದ್ಯಾಲಯದ ವೆಬ್‌ಸೈಟ್‌ನ ಪರೀಕ್ಷಾ ವಿಭಾಗದ ಬಿಎ ಅರ್ಥಶಾಸ್ತ್ರ ವಿಷಯದ 3ನೇ ಸೆಮಿಸ್ಟರ್‌ ಮೌಲ್ಯಮಾಪಕರ ಪಟ್ಟಿಯಲ್ಲಿ ಅಫಜಲಪುರದ ಶಿವಲಿಂಗೇಶ್ವರ ಪ್ರಥಮ ದರ್ಜೆ ಕಾಲೇಜಿನ ಶರಣಪ್ಪ ನಾಯಕ್, ನಾಗಪ್ಪ ಬಿ ಮತ್ತು ಡಾ. ಶರಣಪ್ಪ ಡಿ ನಾಯಕ್‌ ಅವರ ಹೆಸರುಗಳನ್ನು ಸೇರಿಸಲಾಗಿದೆ. ಈ ಮೂವರು ಆ ಕಾಲೇಜಿನಲ್ಲಿ ಒಂದು ದಿನವೂ ಪಾಠ ಮಾಡಿಲ್ಲ. ಕಾಲೇಜಿನ ಸಿಬ್ಬಂದಿಗೆ ಮುಖಪರಿಚಯವೂ ಇಲ್ಲ.

ADVERTISEMENT

‘ಮೌಲ್ಯಮಾಪನ ಪಟ್ಟಿಯಲ್ಲಿನ ಶರಣಪ್ಪ ನಾಯಕ್, ನಾಗಪ್ಪ ಬಿ ಮತ್ತು ಡಾ. ಶರಣಪ್ಪ ಡಿ ನಾಯಕ್‌ ನಮ್ಮ ಕಾಲೇಜಿನ ಸಿಬ್ಬಂದಿ ಅಲ್ಲ. ಅವರು ಯಾರು ಎಂಬುದರ ಬಗ್ಗೆ ಮಾಹಿತಿಯೂ ಇಲ್ಲ. ನಮ್ಮ ಕಾಲೇಜಿನ ಹೆಸರು ಹೇಳಿಕೊಂಡು ಮೌಲ್ಯಮಾಪನ ಮಾಡಲು ಅರ್ಜಿ ಸಲ್ಲಿಸಿ, ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಬಗ್ಗೆ ತನಿಖೆಗೆ ಕುಲಪತಿ ಮತ್ತು ಕುಲಸಚಿವರನ್ನು ಭೇಟಿಯಾಗುವೆ’ ಎಂದು ಶಿವಲಿಂಗೇಶ್ವರ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಸಂಜಯಕುಮಾರ ದುಬೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಂದೇ ಕಾಲೇಜಿನ ಮೂವರ ಅಭ್ಯರ್ಥಿಗಳ ಆಯ್ಕೆಗೆ ಅವಕಾಶವಿಲ್ಲ. ಹೇಗೆ ಸೇರ್ಪಡೆಯಾದರು ಎಂಬುದು ತಿಳಿಯದು. ನನಗೂ ಅಚ್ಚರಿಯಾಗಿದೆ. ಈ ಹಿಂದೆ ಕಾಲೇಜಿಗೆ ಪರೀಕ್ಷಾ ಮೇಲ್ವಿಚಾರಕರು ಬಂದಿದ್ದರು. ಅವರಿಗೆ ಪರೀಕ್ಷೆ ಸೇರ್ಪಡೆಗೆ ಸಹಿ ಮಾಡಿಕೊಟ್ಟಿದ್ದೆ. ಬಹುಶಃ ಅದರ ಮೇಲೆ ಹಾಳೆ ಇರಿಸಿ, ಅದರ ನೆರವಿನಿಂದ ನಕಲಿ ದಾಖಲೆ ಸೃಷ್ಟಿಸಿ ಸಲ್ಲಿಸಿರಬಹುದು. ಅವರೆಲ್ಲರೂ ನಕಲಿ ಅಭ್ಯರ್ಥಿಗಳು’ ಎಂದು ಅವರು ತಿಳಿಸಿದರು.

‘ಮೌಲ್ಯಮಾಪನ ಕುಲಸಚಿವ ವಿಭಾಗವು ನಕಲಿ ಅಭ್ಯರ್ಥಿಗಳಿಂದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಆಪತ್ತು ತರುತ್ತಿದೆ. ಪೂರ್ಣಕಾಲಿಕ ಸಂಶೋಧನಾ ವಿದ್ಯಾರ್ಥಿಗಳು ಮೌಲ್ಯಮಾಪನಕ್ಕೆ ಅನರ್ಹರು. ಆದರೆ, ಅವರಿಂದ ಹಣ ಪಡೆದು ಮೌಲ್ಯಮಾಪನಕ್ಕೆ ಅವಕಾಶ ಕಲ್ಪಿಸಲಾಗಿದೆ’ ಎಂದು ಉಪನ್ಯಾಸಕರೊಬ್ಬರು ದೂರಿದರು.

‘ಕಾಲೇಜು ದೃಢೀಕರಣದ ಬಳಿಕ ಅನುಮತಿ’

‘ಉಪನ್ಯಾಸಕರು ಅಲ್ಲದವರ ಹೆಸರು ಸೇರ್ಪಡೆ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವೆ ಡಾ.ಮೇಧಾವಿನಿ ಎಸ್‌.ಕಟ್ಟಿ ತಿಳಿಸಿದರು.

‘ಕಾಲೇಜಿನ ಸೇವಾ ಅನುಭವ ಆಧಾರಿಸಿ ಅರ್ಜಿ ಪಡೆಯಲಾಗುತ್ತದೆ. ಬಿಒಇ ಚೇರ್ಮನ್‌ ಅವರು ಆಯಾ ವಿಭಾಗದವರಿಂದ ಅಭ್ಯರ್ಥಿಗಳ ಪಟ್ಟಿ ಪಡೆದು, ದಾಖಲೆಗಳನ್ನು ಪರಿಶೀಲಿಸಿ, ಯಾವ ಸೆಮಿಸ್ಟರ್‌ಗೆ ಯಾರು ಮೌಲ್ಯಮಾಪನ ಮಾಡಬೇಕು ಎಂಬುದನ್ನು ಸೂಚಿಸಿದ ಬಳಿಕ ನಾವು ತೆಗೆದುಕೊಳ್ಳುತ್ತೇವೆ’ ಎಂದರು.

‘ಅಭ್ಯರ್ಥಿಗಳು ಅನುಭವ, ಕಾಲೇಜು ಅನುಮತಿ ಪತ್ರ ತಂದ ಬಳಿಕ ಮೌಲ್ಯಮಾಪನಕ್ಕೆ ಅನುಮತಿಸಲಾಗುವುದು. ನಕಲಿ ದಾಖಲೆ ಸಲ್ಲಿಸಿದ್ದು ದೃಢಪಟ್ಟರೆ ಕ್ರಮ ತೆಗೆದುಕೊಳ್ಳುತ್ತೇವೆ. ಕೆಲವು ವಿಭಾಗದವರು ನಿವೃತ್ತರ, ಹಳೆ ಅಭ್ಯರ್ಥಿಗಳ ಹೆಸರು ಸೂಚಿಸಿದ್ದು ಗಮನಕ್ಕೆ ಬಂದಿದೆ’ ಎಂದು ಹೇಳಿದರು.

ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುವಂತೆ ನಾನೇ ಪರಿಶೀಲಕರಿಗೆ ಸೂಚಿಸಿದ್ದೆ. ಆಯ್ಕೆಯಲ್ಲಿ ಸ್ವಲ್ಪ ತಪ್ಪು ಆಗಿರಬಹದು. ಮೌಲ್ಯಮಾಪನ ಕುಲಸಚಿವರನ್ನು ಭೇಟಿಯಾಗಿ ತಿದ್ದುಪಡಿ ಮಾಡಿ, ಸಮಸ್ಯೆ ಬಗೆಹರಿಸಲಾಗುವುದು
-ಕೈಲಾಶಬಾಬು, ಬಿಒಇ ಚೇರ್ಮನ್‌

ಈ ಹಿಂದೆ ಮೌಲ್ಯಮಾಪನ ಮಾಡಿದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಸಂಬಂಧಪಟ್ಟವರು ನಮ್ಮ ಗಮನಕ್ಕೆ ತಂದರೆ ಅವರ ನಿಜಾಂಶ ತಿಳಿಯುತ್ತದೆ. ಈ ಬಗ್ಗೆ ಪರಿಶೀಲಿಸಿ, ಮೌಲ್ಯಮಾಪನಕ್ಕೆ ಅವರಿಗೆ ಅವಕಾಶ ಕೊಡುವುದಿಲ್ಲ
-ಪ್ರೊ.ಕೆ.ಆರ್‌. ಸಂಗಮ್, ಅರ್ಥಶಾಸ್ತ್ರ ವಿಭಾಗದ ಪರಿಶೀಲಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.