ADVERTISEMENT

ಸುಳ್ಳು ಮಾಹಿತಿ: 371 (J) ಪ್ರಮಾಣ ಪತ್ರ ರದ್ದು

ಹೈ.ಕ. ಮೀಸಲಾತಿ ಅಡಿ ಬಡ್ತಿ ಪಡೆದಿದ್ದ ಸರ್ವೆಯರ್‌

​ಪ್ರಜಾವಾಣಿ ವಾರ್ತೆ
Published 29 ಮೇ 2020, 14:11 IST
Last Updated 29 ಮೇ 2020, 14:11 IST
ಕಲಬುರ್ಗಿ ಜಿಲ್ಲೆ ಆಡಳಿತ ಕಚೇರಿ
ಕಲಬುರ್ಗಿ ಜಿಲ್ಲೆ ಆಡಳಿತ ಕಚೇರಿ   

ಕಲಬುರ್ಗಿ: ಭೂ ದಾಖಲೆಗಳ ಇಲಾಖೆಯ ಸರ್ವೆಯರ್‌ ನಾಗಪ್ಪ ಶಂಕ್ರೆಪ್ಪ ಅವರಿಗೆ‌ ನೀಡಿದ್ದ 371 (ಜೆ) ಅರ್ಹತಾ ಪ್ರಮಾಣಪತ್ರವನ್ನು ರದ್ದು ಪಡಿಸಿ ಉಪ ವಿಭಾಗಾಧಿಕಾರಿ ರಾಮಚಂದ್ರ ಗಡದೆ ಆದೇಶ ಹೊರಡಿಸಿದ್ದಾರೆ.

ಈ ಪ್ರಮಾಣ ಪತ್ರದ ಆಧಾರದ ಮೇಲೆ ಸರ್ಕಾರದಿಂದ ಸಿಗುವ ಸೌಲಭ್ಯ ಪಡೆದಿದ್ದರೆ ಅಂತಹ ಎಲ್ಲ ಸೌಲಭ್ಯಗಳನ್ನು ತಕ್ಷಣವೇ ಹಿಂಪಡೆಯಬೇಕು ಎಂದೂ ಆದೇಶಿಸಿದ್ದಾರೆ.

‘ಇವರು 25.7.2019ರಂದು ಅರ್ಹತಾ ಪ್ರಮಾಣ ಪತ್ರ ಪಡೆದು, ಅದರ ಆಧಾರದ ಮೇಲೆ ಸರ್ವೆಯರ್‌ ಹುದ್ದೆಯಿಂದ ತಪಾಸಕರಾಗಿ ಬಡ್ತಿ ಹೊಂದಿದ್ದರು.ಇವರು 371 (ಜೆ) ಅರ್ಹತಾ ಪ್ರಮಾಣ ಪತ್ರ ಪಡೆಯಲು ಅರ್ಹರಲ್ಲ. ಹೀಗಾಗಿ ಅವರ ಪ್ರಮಾಣಪತ್ರ ರದ್ದುಪಡಿಸಬೇಕು’ ಎಂದುಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಉಪಾಧ್ಯಕ್ಷ ರಜಾಕ್‌ ಉಸ್ತಾದ್‌ ಮನವಿ ಸಲ್ಲಿಸಿದ್ದರು.

ADVERTISEMENT

‘ನಾಗಪ್ಪ ಅವರ ತಂದೆ 17.10.2015ರಂದು ಮರಣ ಹೊಂದಿದ್ದಾರೆ. ಅರ್ಜಿದಾರರ ತಾಯಿ ಸೋನಾಬಾಯಿ ಅವರು ಗೋವಾದಲ್ಲಿ ಮೊಮ್ಮಗಳ ಹತ್ತಿರ ವಾಸವಾಗಿದ್ದಾರೆ. ನಾಗಪ್ಪ ಅವರ ತಂದೆ–ತಾಯಿ ವಿಜಯಪುರ ವಿಳಾಸದವರು ಎಂದು ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿಯವರು ದಾಖಲೆ ಸಲ್ಲಿಸಿದ್ದರು. ತಂದೆ–ತಾಯಿ ಕಲಬುರ್ಗಿಯಲ್ಲಿ ಇದ್ದ ಬಗ್ಗೆ ದಾಖಲೆ ನೀಡುವಂತೆ ಕೇಳಿದರೆ ಅರ್ಜಿದಾರ ಯಾವುದೇ ದಾಖಲೆ ನೀಡಿಲ್ಲ. ಕಲಬುರ್ಗಿ ಕಂದಾಯ ನಿರೀಕ್ಷಕರಿಂದ ಪಡೆದ ಪಂಚನಾಮೆ ವರದಿ ಮಾತ್ರ ಸಲ್ಲಿಸಿದ್ದಾರೆ. ನಾಗಪ್ಪ ಅವರ ಸೇವಾ ಪುಸ್ತಕ ಪರಿಶೀಲಿಸಿದಾಗ ಅವರು ವಿಜಯಪುರ ಜಿಲ್ಲೆಯವರು ಎಂಬುದು ಕಂಡು ಬರುತ್ತದೆ’ ಎಂದು ಉಪ ವಿಭಾಗಾಧಿಕಾರಿ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಶಿಸ್ತು ಕ್ರಮ ಕೈಗೊಳ್ಳಿ: ‘ನಾಗಪ್ಪ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದು ಸಾಬೀತಾಗಿದ್ದು, ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು’ ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಉಪಾಧ್ಯಕ್ಷ ರಜಾಕ್‌ ಉಸ್ತಾದ್‌ ಆಗ್ರಹಿಸಿದ್ದಾರೆ.

‘ಭೂ ದಾಖಲೆಗಳ ಇಲಾಖೆಯ ನಾಲ್ವರು ನೌಕರರು ಕಲ್ಯಾಣ ಕರ್ನಾಟಕದವರಲ್ಲದಿದ್ದರೂ ಸುಳ್ಳು ಮಾಹಿತಿ ನೀಡಿ 371 (ಜೆ) ಅರ್ಹತಾ ಪ್ರಮಾಣ ಪತ್ರ ಪಡೆದಿದ್ದರು. ಆ ಬಗ್ಗೆ ಮಾಹಿತಿ ಸಂಗ್ರಹಿಸಿ ದೂರು ನೀಡಿ ಅವು ರದ್ದಾಗುವಂತೆ ನೋಡಿಕೊಂಡಿದ್ದೇವೆ. ನಮ್ಮವರ ಮೀಸಲಾತಿ ಅವಕಾಶವನ್ನು ಅನ್ಯರು ಕಬಳಿಸುವುದು ಸರಿಯಲ್ಲ. ಯಾರಾದರೂ ಹೀಗೆ ಮಾಡಿದ್ದರೆ ಅವರ ಕಚೇರಿ ನೌಕರರು ನಮಗೆ ಮಾಹಿತಿ ನೀಡಿದರೆ ನಾವು ಹೋರಾಟ ನಡೆಸುತ್ತೇವೆ’ ಎಂದು ರಜಾಕ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.