ಕಲಬುರಗಿ: ‘ಅತಿವೃಷ್ಟಿ, ಪ್ರವಾಹದಿಂದ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ರೈತರು ಸಂಕಷ್ಟದಲ್ಲಿದ್ದಾರೆ. ಹೆಸರು, ಉದ್ದು, ತೊಗರಿ, ಹತ್ತಿ ಎಲ್ಲ ಬೆಳೆಗಳೂ ನಷ್ಟವಾಗಿವೆ. ಜನರು ಮನೆಗಳನ್ನೂ ಕಳೆದುಕೊಂಡಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ಸಂಕಷ್ಟದಲ್ಲಿರುವ ಜನರಿಗೆ ಸ್ಪಂದಿಸಬೇಕು’ ಎಂದು ಸುಲಫಲ ಮಠದ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಒತ್ತಾಯಿಸಿದರು.
‘ರೈತ ದೇಶದ ಬೆನ್ನೆಲುಬು. ದೇಶದ ರಾಷ್ಟ್ರಪತಿ, ಪ್ರಧಾನಿ, ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ರೈತರು ಬೆಳೆದ ಅನ್ನವನ್ನೇ ತಿನ್ನುತ್ತೇವೆ. ಅದಕ್ಕಾದರೂ ಸಂಕಷ್ಟದಲ್ಲಿರುವ ರೈತರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಕರೆಗೆ ₹25 ಸಾವಿರ ಪರಿಹಾರ ಕೊಟ್ಟು ಸ್ಪಂದಿಸಬೇಕು’ ಎಂದು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, ‘ಜಿಲ್ಲೆಯಲ್ಲಿ ಸಮೀಕ್ಷೆ ನಡೆಸಲು ಹೊಲಗಳಲ್ಲಿ ಬೆಳೆಗಳೇ ಉಳಿದಿಲ್ಲ. ಹೀಗಾಗಿ ಸರ್ಕಾರ ಕೂಡಲೇ ಜಿಲ್ಲೆಯನ್ನು ಹಸಿಬರ ಎಂದು ಘೋಷಿಸಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಹಿಂಗಾರು ಬಿತ್ತನೆಗೆ ಉಚಿತವಾಗಿ ಬಿತ್ತನೆ ಬೀಜ, ರಸಗೊಬ್ಬರ ಕೊಡಬೇಕು’ ಎಂದು ಆಗ್ರಹಿಸಿದರು.
ಮುಖಂಡರಾದ ಎಂ.ಬಿ.ಸಜ್ಜನ್ ಹಾಗೂ ಭೀಮಾಶಂಕರ ಮಾಡಿಯಾಳ ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಆದಿನಾಥ ಹೀರಾ, ಮಹಾಂತಗೌಡ ಪಾಟೀಲ, ನಾಗಮ್ಮ ದೇಸಾಯಿ, ಉಮಾಪತಿ ಪಾಟೀಲ, ಸುಂದರ ಸಾಗರ, ಸೇರಿದಂತೆ ಹಲವರು ಇದ್ದರು.
‘ಕಲಬುರಗಿ ಬಂದ್ 13ರಂದು’ ರೈತ ಮುಖಂಡ ಮೌಲಾ ಮುಲ್ಲಾ ಮಾತನಾಡಿ ‘ನಿರಂತರ ಮಳೆಯಿಂದ ರೈತರ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ. ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿ ಅ.13ರಂದು ಕಲಬುರಗಿ ಬಂದ್‌ಗೆ ಕರೆ ನೀಡಲಾಗಿದೆ’ ಎಂದರು. ‘ಅಂದು ವರ್ತಕರು ಸಂಘಟನೆಗಳು ಸೇರಿದಂತೆ ಎಲ್ಲರೂ ಸ್ವಯಂ ಪ್ರೇರಿತವಾಗಿ ಬಂದ್‌ಗೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.