ADVERTISEMENT

ಕಲಬುರ್ಗಿ: ಎಡೆ ಹೊಡೆಯಲು ನೊಗಕ್ಕೆ ಹೆಗಲು ಕೊಟ್ಟ ರೈತರು

ಮಂಜುನಾಥ ದೊಡಮನಿ
Published 27 ಜುಲೈ 2021, 4:35 IST
Last Updated 27 ಜುಲೈ 2021, 4:35 IST
ಯಡ್ರಾಮಿ ತಾಲ್ಲೂಕಿನ ಕಣಮೇಶ್ವರ ಗ್ರಾಮದ ಕೃಷಿಕರಾದ ಚನ್ನಬಸಪ್ಪ ಮತ್ತು ಪರಶುರಾಮ ಅವರು ಎಡೆ ಹೊಡೆಯಲು ನೊಗಕ್ಕೆ ಹೆಗಲು ಕೊಟ್ಟಿರುವುದು
ಯಡ್ರಾಮಿ ತಾಲ್ಲೂಕಿನ ಕಣಮೇಶ್ವರ ಗ್ರಾಮದ ಕೃಷಿಕರಾದ ಚನ್ನಬಸಪ್ಪ ಮತ್ತು ಪರಶುರಾಮ ಅವರು ಎಡೆ ಹೊಡೆಯಲು ನೊಗಕ್ಕೆ ಹೆಗಲು ಕೊಟ್ಟಿರುವುದು   

ಯಡ್ರಾಮಿ: ಮುಂಗಾರು ಹಂಗಾಮಿನಲ್ಲಿ ಸುರಿದ ಉತ್ತಮ ಮಳೆಗೆ ಬೆಳೆಗಳು ಸಮೃದ್ಧವಾಗಿ ಬೆಳೆದಿದ್ದು, ಎಡೆ ಹೊಡೆಯಲು ಎತ್ತುಗಳಿಲ್ಲದೆ ಇಲ್ಲೊಂದು ಕೃಷಿಕ ಕುಟುಂಬ ನೊಗಕ್ಕೆ ಹೆಗಲು ಕೊಟ್ಟಿದೆ.

ಬೆಳೆಗಳ ನಡುವೆ ಬೆಳೆದು ನಿಂತ ಹುಲ್ಲಿನ ಕಳೆ ತೆಗೆಯಲು ಎತ್ತು ಮತ್ತು ಟ್ರ್ಯಾಕ್ಟರ್ ಬಾಡಿಗೆ ಪಡೆಯಲು ನಮ್ಮ ಬಳಿ ಹಣವಿಲ್ಲ. ಬೆಳೆ ಉಳಿಸಿಕೊಳ್ಳಲು ಆರ್ಥಿಕ ಸಂಕಷ್ಟದ ನಡುವೆಯೂ ನೊಗಕ್ಕೆ ಹೆಗಲು ಕೊಟ್ಟಿದ್ದೇವೆ‘ ಎನ್ನುತ್ತಾರೆ ಕಣಮೇಶ್ವರ ಗ್ರಾಮದ ರೈತ ಸುನಿಲ್ ನಾಟಿಕರ್.

’ಆಳುವ ಸರ್ಕಾರ ಮತ್ತು ಜನಪ್ರತಿನಿಧಿಗಳು ಬಡ ರೈತರನ್ನು ಮರೆತಿದ್ದಾರೆ. ಸಮಸ್ಯೆಗಳನ್ನು ಈಡೇರಿಸುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಯಾರ ಮೇಲೂ ಭರವಸೆ ಇರಿಸಿಕೊಳ್ಳದೆ ನಾವೇ ನೊಗಕ್ಕೆ ಹೆಗಲುಕೊಟ್ಟು ಜಮೀನಿನಲ್ಲಿ ಎತ್ತುಗಳಂತೆ ದುಡಿಯುತ್ತಿದ್ದೇವೆ‘ ಎಂದು ಅಲವತ್ತುಕೊಂಡರು.

ADVERTISEMENT

‘ಮುಂಗಾರಿಗೂ ಮುನ್ನ ನಗರಗಳಿಗೆ ತೆರಳಿ ದುಡಿದು ಕೂಡಿಟ್ಟ ಹಣವನ್ನು ಬಿತ್ತನೆ, ಕಳೆ ತೆಗೆಯಲು ಬಳಸುತ್ತಿದ್ದೆ. ಲಾಕ್‌ಡೌನ್‌ನಿಂದ ಕೆಲಸವೇ ಇರಲಿಲ್ಲ. ಬಿತ್ತನೆಗಾಗಿ ಈಗಾಗಲೇ ₹ 30 ಸಾವಿರ ಖರ್ಚು ಮಾಡಿದ್ದೇವೆ. ಟ್ರ್ಯಾಕ್ಟರ್ ಬಾಡಿಗೆ ಕೊಡಲು ಬಳಿಯಲ್ಲಿ ₹ 2 ಸಾವಿರ ಹಣವಿಲ್ಲ. ಬೇರೆ ದಾರಿ ಇಲ್ಲದೆ ಮಳೆಯಿಂದ ಅಳಿದು ಉಳಿದ ಬೆಳೆಯನ್ನು ಕಾಪಾಡಿಕೊಳ್ಳಲು ಎತ್ತುಗಳಂತೆ ಶ್ರಮಪಡುತ್ತಿದ್ದೇವೆ‘ ಎನ್ನುತ್ತಾರೆ ರೈತ ಚನ್ನಬಸಪ್ಪ‌ನಾಟಿಕರ್.

‘ತಾಲ್ಲೂಕಿನ ಬಹುತೇಕ ರೈತರ ಆರ್ಥಿಕ ಪರಿಸ್ಥಿತಿ ಹೀಗೆಯೇ ಇದೆ. ಬೇಸಿಗೆಯಲ್ಲಿ ದೂರದ ನಗರಗಳಿಗೆ ತೆರಳಿ ಕೂಲಿ ಮಾಡಿ ಸ್ವಲ್ಪ ಹಣ ಉಳಿಸಿ, ಅದನ್ನೇ ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದರು. ಕೊರೊನಾ ಮತ್ತು ಲಾಕ್‌ಡೌನ್‌ ನಮಗೆಲ್ಲ ಆಸರೆಯಾಗಿದ್ದ ಸಣ್ಣ ಹಣಕಾಸಿನ ಅವಕಾಶವನ್ನೂ ಕಸಿದುಕೊಂಡಿತು. ಸರ್ಕಾರ ಕೂಡ ನಮ್ಮ ಕಡೆ ಕಣ್ಣೆತ್ತಿಯೂ ನೋಡುತ್ತಿಲ್ಲ‘ ಎಂದು ಕೃಷಿಕ ಪರಶುರಾಮನಾಟಿಕರ್ ಬೇಸರ ವ್ಯಕ್ತಪಡಿಸಿದರು.

***
ರೈತ ಸಂಪರ್ಕ ಕೇಂದ್ರದಿಂದ ಯಾವುದೇ ಸಹಾಯ ಇರುವುದಿಲ್ಲ. ಕಳೆ ತಗಿಯುವ ಸೈಕಲ್ ಸಿಗುತ್ತದೆ. ಅದನ್ನು ಬಳಸಿಕೊಳ್ಳಬಹುದು.
-ಅನಿಲ ದಸ್ವತ್, ಸಹಾಯಕ ಕೃಷಿ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.