
ಅತಿವೃಷ್ಟಿಯಿಂದಾಗಿ ರೈತರಿಗೆ ಸಂಕಷ್ಟ | ಕಬ್ಬಿನ ದರ ನಿಗದಿಯಲ್ಲಿ ತಾರತಮ್ಯ | ಕಡಿಮೆ ದರ ನೀಡುತ್ತಿರುವ ಕಾರ್ಖಾನೆಗಳು
ಕಲಬುರಗಿ: ಕೂಡಲೇ ರೈತರ ಖಾತೆಗೆ ಬೆಳೆಹಾನಿ ಪರಿಹಾರ ಜಮಾ ಮಾಡಬೇಕು ಎನ್ನುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಜೆಪಿ ಗ್ರಾಮಾಂತರ ಜಿಲ್ಲಾ ರೈತ ಮೋರ್ಚಾದ ವತಿಯಿಂದ ನಗರದಲ್ಲಿ ಭಾನುವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಎಸ್‌ವಿಪಿ ವೃತ್ತದ ಬಳಿ ಸಾಕಷ್ಟು ಸಂಖ್ಯೆಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಜಮಾಯಿಸಿದರು. ಕೊರಳಲ್ಲಿ ಹಸಿರು ಶಾಲು ಧರಿಸಿ, ಕೈಯಲ್ಲಿ ಭಿತ್ತಿಚಿತ್ರ ಹಾಗೂ ಧ್ವಜಗಳನ್ನು ಹಿಡಿದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಬಳಿಕ ಜಿಲ್ಲಾಧಿಕಾರಿ ಕಚೇರಿವರೆಗೂ ಟ್ರ್ಯಾಕ್ಟರ್ ರ‍್ಯಾಲಿ ನಡೆಸಿದರು. ಕೆಲವು ಮುಖಂಡರು ಟ್ರ್ಯಾಕ್ಟರ್ ಹತ್ತಿ ಘೋಷಣೆ ಕೂಗಿದರು. ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿ ತಲುಪಿತು.
ಜಿಲ್ಲಾಧಿಕಾರಿ ಕಚೇರಿ ಎದುರು ‘ರೈತ ವಿರೋಧಿ ಸರ್ಕಾರಕ್ಕೆ ಧಿಕ್ಕಾರ’, ‘ಜನ ವಿರೋಧಿ ಸಿಎಂ, ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗೆ ಧಿಕ್ಕಾರ’ ಎಂದು ಘೋಷಣೆ ಮೊಳಗಿಸಲಾಯಿತು.
ಬಿಜೆಪಿ ಗ್ರಾಮಾಂತರ ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ಬಸವರಾಜ ಮಾಲಿಪಾಟೀಲ ಕಮಲಾಪುರ ಮಾತನಾಡಿ, ‘ಅತಿವೃಷ್ಟಿಯಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ನೆರವಿಗೆ ಬರುತ್ತಿಲ್ಲ’ ಎಂದು ಆರೋಪಿಸಿದರು.
‘ಬೆಳೆಹಾನಿ ಕುರಿತು ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ವಾಸ್ತವ ಅಂಕಿ–ಅಂಶ ನೀಡದ ಕಾರಣ ಹಲವಾರು ರೈತರು ಪರಿಹಾರದಿಂದ ವಂಚಿತರಾಗುತ್ತಿದ್ದಾರೆ. ಸಾಲ ತೀರಿಸಲಾಗದೆ ಆತ್ಮಹತ್ಯೆಯ ದಾರಿ ತುಳಿಯುತ್ತಿದ್ದಾರೆ. ಆದರೂ ರಾಜ್ಯ ಸರ್ಕಾರ ಜಾಣ ಕುರುಡು ಪ್ರದರ್ಶಿಸುತ್ತಿದೆ. ರೈತರಿಗೆ ಸಮರ್ಪಕವಾಗಿ ಪರಿಹಾರ ನೀಡುವ ಕೆಲಸ ಮಾಡಬೇಕು’ ಎಂದು ಒತ್ತಾಯಿಸಿದರು.
‘ಕಬ್ಬಿನ ದರದ ವಿಷಯದಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ. ಬೆಳಗಾವಿ ರೈತರ ಪ್ರತಿ ಟನ್ ಕಬ್ಬಿಗೆ ₹ 3,300 ನಿಗದಿ ಮಾಡಿದೆ. ಆದರೆ, ಇಲ್ಲಿ ಕಬ್ಬು ಬೆಳೆಗಾರರಿಗೆ ಕಾರ್ಖಾನೆಗಳು ಕಡಿಮೆ ದರ ನೀಡುತ್ತಿವೆ. ಎಲ್ಲ ಜಿಲ್ಲೆಗಳಲ್ಲಿಯೂ ಸಮಾನ ದರ ನೀಡುವಂತೆ ಕಾರ್ಖಾನೆಗಳಿಗೆ ತಾಕೀತು ಮಾಡಬೇಕು’ ಎಂದು ಆಗ್ರಹಿಸಿದರು.
ಮಾಜಿ ಸಂಸದ ಡಾ.ಉಮೇಶ ಜಾಧವ ಮಾತನಾಡಿ, ‘ಉತ್ತಮ ಆಡಳಿತ ನೀಡುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಪ್ರತಿ ಬಾರಿ ಸಂವಿಧಾನದ ಬಗ್ಗೆ ಮಾತನಾಡುವವರು ಯಾಕೆ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ’ ಎಂದು ಪ್ರಶ್ನಿಸಿದರು.
ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಬಗಲಿ ಮಾತನಾಡಿ, ‘ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಜನರು ಬೇಸತ್ತಿದ್ದಾರೆ. ಸರ್ಕಾರ ರೈತರ ನೆರವಿಗೆ ಬರಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು. ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು’ ಎಂದು ಎಚ್ಚರಿಸಿದರು.
ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರಿಗೆ ಮನವಿ ಸಲ್ಲಿಸಲಾಯಿತು.
ಶಾಸಕ ಅವಿನಾಶ ಜಾಧವ, ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ, ಮುಖಂಡರಾದ ಅಂಬಾರಾಯ ಅಷ್ಠಗಿ, ಅವ್ವಣ್ಣ ಮ್ಯಾಕೇರಿ, ನಿತಿನ್ ಗುತ್ತೇದಾರ, ಮಲ್ಲಣ್ಣ, ಶ್ರೀಶೈಲ ಪಾಟೀಲ ಕಡಗಂಚಿ, ಶಿವಮೂರ್ತಯ್ಯ ಹಿರೇಮಠ, ಮಲ್ಲಿನಾಥ ಪಾಟೀಲ ಕಾಳಗಿ, ರಾಜು, ಅಣವೀರ ಪಾಟೀಲ, ಡಾ.ಸುಧಾ ಹಾಲಕಾಯಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
‘ಅಧಿವೇಶನದಲ್ಲಿ ಚರ್ಚೆ’
‘ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. ಅವರ ಸಮಸ್ಯೆಗಳ ಕುರಿತು ಚರ್ಚಿಸಲು ಬೆಳಗಾವಿ ಅಧಿವೇಶನದಲ್ಲಿ ಅವಕಾಶ ನೀಡುವಂತೆ ಸಭಾಧ್ಯಕ್ಷರನ್ನು ಒತ್ತಾಯಿಸಲಾಗುವುದು’ ಎಂದು ಶಾಸಕ ಬಸವರಾಜ ಮತ್ತಿಮಡು ತಿಳಿಸಿದರು. ‘ನಮ್ಮ ಪಕ್ಷದಿಂದ ರೈತರಿಗೆ ನ್ಯಾಯ ಕೊಡಿಸಲು ಪ್ರಯತ್ನಿಸಲಾಗುವುದು. ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರ ನೇತೃತ್ವದಲ್ಲಿ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಅಧಿವೇಶನದಲ್ಲಿ ಸರ್ಕಾರವನ್ನು ಒತ್ತಾಯಿಸಲಾಗುವುದು. ನಮ್ಮ ಪಕ್ಷ ರೈತರ ಪರ ಇದೆ. ರೈತರು ಧೃತಿಗೆಡಬೇಕಾದ ಅಗತ್ಯ ಇಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.