
ಚಿಂಚೋಳಿಯ ಬಸ್ ನಿಲ್ದಾಣದ ಎದುರುಗಡೆ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರಿಗೆ ಮನವಿ ಸಲ್ಲಿಸಿದರು
ಚಿಂಚೋಳಿ: ಕಲಬುರಗಿ ಜಿಲ್ಲೆಯನ್ನು ಹಸಿ ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಿ ಬೆಳೆ ವಿಮೆ ನೋಂದಾಯಿಸಿದ ಎಲ್ಲಾ ರೈತರಿಗೆ ವಿಮಾ ಪರಿಹಾರ ಧನ ಮಂಜೂರು ಮಾಡಿ ಬಿಡುಗಡೆ ಮಾಡುವುದು ಸೇರಿದಂತೆ ರಾಷ್ಟ್ರೀಯ ವಿಪತ್ತು ಮಾರ್ಗಸೂಚಿ ಅಡಿಯಲ್ಲಿ ಪರಿಹಾರ ಧನ ರೈತರ ಖಾತೆಗೆ ಜಮಾ ಮಾಡಲು ಚಿಂಚೋಳಿ ತಾಲ್ಲೂಕು ಕರ್ನಾಟಕ ಪ್ರಾಂತ ರೈತ ಸಂಘದ 14ನೇ ಸಮ್ಮೇಳನ ಒತ್ತಾಯಿಸಿದೆ.
ಇಲ್ಲಿನ ಬಸ್ ನಿಲ್ದಾಣದ ಎದುರು ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸ್ಸಪ್ಪ ಮಮಶೆಟ್ಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರೈತರು ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರಿಗೆ ಮನವಿ ಸಲ್ಲಿಸಿದರು.
ಎತ್ತಿಪೋತೆ ಜಲಪಾತ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಬೇಕು, ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪರಿಹಾರ ಧನ ನೀಡಬೇಕು, ಅರಣ್ಯ ಭೂಮಿ ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕುಪತ್ರ ನೀಡಬೇಕು, ಕಬ್ಬು ಬೆಳೆಗಾರರ ಹಿತ ರಕ್ಷಿಸಬೇಕು, 60 ವರ್ಷ ವಯಸ್ಸಾದ ರೈತರಿಗೆ ಪಿಂಚಣಿ ನೀಡಬೇಕು, ತಾಲ್ಲೂಕಿನಲ್ಲಿ ಹಾಳಾಗಿರುವ ರಸ್ತೆಗಳನ್ನು ಡಾಂಬರೀಕರಣ ನಡೆಸಬೇಕು ಎಂಬುದು ಸೇರಿದಂತೆ 30 ಬೇಡಿಕೆಗಳ ಈಡೇರಿಸಲು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಾಫರಖಾನ ಮಿರಿಯಾಣ, ಸಿದ್ದಲಿಂಗಯ್ಯ ಸ್ವಾಮಿ, ಶಂಕ್ರಯ್ಯ ಸ್ವಾಮಿ, ವೈಜನಾಥ ಸಾತಪನೋರ್, ಸಿದ್ದಪ್ಪ ಭೂತಾಳೆ, ಗೋಪಾಲ ಭಜಂತ್ರಿ, ಶಿವಕುಮಾರ ಸಾಲೇಬೀರನಹಳ್ಳಿ, ಗೋವರ್ಧನರೆಡ್ಡಿ, ನಾಮದೇವ ರಾಠೋಡ್ ಮೊದಲಾದವರು ಇದ್ದರು.
ಅಂಬಿಗರ ಚೌಡಯ್ಯನವರ ಭವನದಲ್ಲಿ ಸಮ್ಮೇಳನ ನಡೆಸಿ ಧ್ವಜಾರೋಹಣ ನಡೆಸಲಾಯಿತು. ಇದೇ ವೇಳೆ ವಿವಿಧ ಹಕ್ಕೊತ್ತಾಯದ ನಿರ್ಣಯಗಳನ್ನು ಅಂಗೀಕರಿಸಲಾಯಿತು. ನೂತನ ಪದಾಧಿಗಳನ್ನು ಆಯ್ಕೆ ಮಾಡಲಾಯಿತು. ಸಂಘದ ತಾಲ್ಲೂಕು ಅಧ್ಯಕ್ಷರಾಗಿ ಜಾಫರಖಾನ ಮಿರಿಯಾಣ, ಉಪಾಧ್ಯಕ್ಷರಾಗಿ ಸಿದ್ದಲಿಂಗಯ್ಯಸ್ವಾಮಿ ಯಂಪಳ್ಳಿ, ಶಂಕ್ರಯ್ಯ ಸ್ವಾಮಿ ಬುರುಗಪಳ್ಳಿ, ಕಾರ್ಯದರ್ಶಿಯಾಗಿ ವೈಜನಾಥ ಸಾತಪನೋರ್, ಕೋಶಾಧ್ಯಕ್ಷರಾಗಿ ಸಿದ್ಧಾರ್ಥ ಠಾಕೂರ ಅವರನ್ನು ಆಯ್ಕೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.