ADVERTISEMENT

ಕಲಬುರಗಿ: ವಿದ್ಯುತ್‌, ಬೆಳೆ ಪರಿಹಾರಕ್ಕೆ ಆಗ್ರಹ; 7ರಿಂದ ಜೀಪ್‌ ಜಾಥಾ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 16:14 IST
Last Updated 4 ಡಿಸೆಂಬರ್ 2021, 16:14 IST
ಮೌಲಾ ಮುಲ್ಲಾ
ಮೌಲಾ ಮುಲ್ಲಾ   

ಕಲಬುರಗಿ: ‘ರೈತರ ಹೊಲಗಳಿಗೆ ಸಮರ್ಪಕ ವಿದ್ಯುತ್‌ ಪೂರೈಸಬೇಕು ಹಾಗೂ ಹಾನಿಗೀಡಾದ ತೊಗರಿ ಬೆಳೆಗೆ ಪ್ರತಿ ಎಕರೆಗೆ ₹ 20 ಸಾವಿರ ಪರಿಹಾರ ನೀಡಬೇಕೆಂದು ಆಗ್ರಹಿಸಿ, ಡಿ. 7ರಿಂದ 11ರವರೆಗೆ ಜಿಲ್ಲೆಯ ವಿವಿಧೆಡೆ ಜೀಪ್‌ ಜಾಥಾ ಹಮ್ಮಿಕೊಳ್ಳಲಾಗಿದೆ’ ಎಂದುಅಖಿಲ ಭಾರತ ಕಿಸಾನ್ ಸಭಾ ಹಾಗೂ ಭಾರತೀಯ ಖೇತ್‌ ಮಜ್ದೂರ್ ಯೂನಿಯನ್‌ ಜಿಲ್ಲಾ ಘಟಕದ ಅಧ್ಯಕ್ಷ ಮೌಲಾ ಮುಲ್ಲಾ ತಿಳಿಸಿದರು.

‘ಮೊದಲ ಹಂತದ ಪ್ರತಿಭಟನೆಯಾಗಿ ಈ ಜಾಥಾ ನಡೆಸಲಾಗುತ್ತಿದೆ. ಇದು ಮುಗಿದ ಮರುದಿನವೇ ಅಂದರೆ, ಡಿ. 11ರಿಂದ ಆಳಂದ ತಾಲ್ಲೂಕು ಪಂಚಾಯಿತಿ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಸಲಾಗುವುದು. ನಮ್ಮ ಬೇಡಿಕೆ ಈಡೇರುವವರೆಗೂ ಇದು ಮುಂದುವರಿಯಲಿದೆ’ ಎಂದು ಅವರು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ರೈತರ ಸಮಸ್ಯೆ ಆಲಿಸುವಲ್ಲಿ ಜೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಪಂಪ್‌ಸೆಟ್‌ಗಳಿಗೆ ತಕ್ಕಷ್ಟು ಸಂಖ್ಯೆಯ ಟ್ರಾನ್ಸ್‌ಫಾರ್ಮರ್‌ ಅಳವಡಿಸುವುದಿಲ್ಲ. ಹೆಚ್ಚಿನ ಬಳಕೆಯ ಕಾರಣ ಟ್ರಾನ್ಸ್‌ಫಾರ್ಮರ್‌ಗಳು ಪದೇಪದೇ ಸುಟ್ಟುಹೋಗುತ್ತಿವೆ. ಹೀಗೆ ಸುಟ್ಟುಹೋದರೆ ಮತ್ತೆ ದುರಸ್ತಿ ಮಾಡಲು ಎರಡು ತಿಂಗಳು ತೆಗೆದುಕೊಳ್ಳುತ್ತಾರೆ. ಅದಕ್ಕೂ ರೈತರು ಲಂಚ ಕೊಡಬೇಕಾದ ಸ್ಥಿತಿ ಇದೆ‌’ ಎಂದು ಅವರು ಆರೋಪಿಸಿದರು.

ADVERTISEMENT

ಸಂಘಟನೆಯ ಜಿಲ್ಲಾ ಘಟಕದ ಕಾರ್ಯದರ್ಶಿ ಭೀಮಾಶಂಕರ ಮಾಡ್ಯಾಳ ಮಾತನಾಡಿ, ‘ಸದ್ಯ ಮಳೆಗೆ ಹಾನಿಯಾದ ಬೆಳೆಗೆ ಪ್ರತಿ ಎಕರೆಗೆ ಕೇವಲ ₹ 4 ಸಾವಿರ ನೀಡಲಾಗುತ್ತಿದೆ. ಇದು ರೈತರು ಖರೀದಿಸಿದ ಬೀಜಗಳ ಬೆಲೆಗೂ ಸಮವಿಲ್ಲ. ಪರಿಹಾರ ಮೊತ್ತವನ್ನು ₹ 20 ಸಾವಿರಕ್ಕೆ ಏರಿಸಬೇಕು’ ಎಂದರು.

ಸಂಘಟನೆ ಮುಖಂಡರಾದ ಭೀಮರಾಯ ಅರಳಗುಂಡಗಿ, ಮಲ್ಲಿಕಾರ್ಜುನ ಕಲ್ಲೂರ, ಶರಣಬಸಪ್ಪ ಗಣಜಲಖೇಡ, ಮಲ್ಲಿನಾಥ ಯಲಶೆಟ್ಟಿ, ಫಕ್ರುಸಾಬ್ ಗೋಳಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.