ADVERTISEMENT

ಅಫಜಲಪುರ | ರೈತರಿಂದ ಜೆಸ್ಕಾಂ ಕಚೇರಿ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 7:37 IST
Last Updated 25 ಫೆಬ್ರುವರಿ 2026, 7:37 IST
ಅಫಜಲಪುರದಲ್ಲಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಹಸಿರು ಸೇನೆಯ ಕಾರ್ಯಕರ್ತರು ಜೆಸ್ಕಾಂ ಎಇಇ ಹಾಗೂ ತಹಶೀಲ್ದಾರ್‌ ಸಂಜುಕುಮಾರ ದಾಸರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಅಫಜಲಪುರದಲ್ಲಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಹಸಿರು ಸೇನೆಯ ಕಾರ್ಯಕರ್ತರು ಜೆಸ್ಕಾಂ ಎಇಇ ಹಾಗೂ ತಹಶೀಲ್ದಾರ್‌ ಸಂಜುಕುಮಾರ ದಾಸರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಅಫಜಲಪುರ: ರೈತರ ವಿವಿಧ ಬೇಡಿಕೆ ಈಡೇರಿಕೆ ಹಾಗೂ ಅಫಜಲಪುರ, ಚೌಡಾಪುರ ಜೆಸ್ಕಾಂ ಕಚೇರಿಗಳಿಂದ ರೈತರಿಗೆ ಆಗುತ್ತಿರುವ ತೊಂದರೆಗಳನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಜೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಜಮಾದಾರ ಮಾತನಾಡಿ, ‘ಬೇಸಿಗೆ ಇರುವುದರಿಂದ ರೈತರು ಬೆಳೆಗಳಿಗೆ ನೀರು ಹಾಯಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಪದೇಪದೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದು, ಸುಟ್ಟುಹೋದ ಟಿ.ಸಿಗಳನ್ನು ಬೇಗನೆ ದುರಸ್ತಿಗೊಳಿಸಿ ಅಳವಡಿಸುವಲ್ಲಿ ವಿಳಂಬವಾಗುತ್ತಿರುವುದರಿಂದ ಬೆಳೆಗಳು ಹಾಳಾಗುತ್ತಿವೆ. ಹಾಗಾಗಿ ಸಂಬಂಧಪಟ್ಟವರು ಸಮಸ್ಯೆಳಿಗೆ ತಕ್ಷಣ ಸ್ಪಂದಿಸಬೇಕು’ ಎಂದು ಒತ್ತಾಯಿಸಿದರು.

ತಾಲ್ಲೂಕು ಅಧ್ಯಕ್ಷ ಶ್ರೀಶೈಲ ಗೋಳೆ ಹಾಗೂ ಪ್ರಧಾನ ಕಾರ್ಯದರ್ಶಿ ಮಂಜುನಾಥ ನಾಯಕೋಡಿ ಮಾತನಾಡಿ, ‘ವಿದ್ಯುತ್ ಸಮಸ್ಯೆ ಹೇಳಿಕೊಂಡು ಕಚೇರಿ ಬರುವ ರೈತರೊಂದಿಗೆ ಅಧಿಕಾರಿಗಳು ಸೌಜನ್ಯದಿಂದ ವರ್ತಿಸಬೇಕು. ಹಣ ಕಟ್ಟಿಸಿಕೊಂಡು ದ್ದಾರೆ ಇಲ್ಲಿವರೆಗೂ ರೈತರಿಗೆ ಆರ್.ಆರ್ ನಂಬರ್ ನೀಡಿಲ್ಲ. ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕು’ ಎಂದರು.

ADVERTISEMENT

ತಹಶೀಲ್ದಾರ್‌ ಸಂಜುಕುಮಾರ ದಾಸರ್ ಹಾಗೂ ಜೆಸ್ಕಾಂ ಎಇಇ ನಾಗರಾಜ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾ ಗೌರವಾಧ್ಯಕ್ಷ ವಿಠ್ಠಲ ಮಾಕಗೌಡ್ರು, ಮುಖಂಡರಾದ ಮೇಲಗಿರಿ ಚಲಗೇರಿ, ಅರವಿಂದ ದೊಡ್ಮನಿ, ತಾಲ್ಲೂಕು ಉಪಾಧ್ಯಕ್ಷ ದತ್ತು ಪೂಜಾರಿ, ವಲಯದ ಅಧ್ಯಕ್ಷ ಸೋಮನಾಥ ನಾಯ್ಕೋಡಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.