ADVERTISEMENT

ಕಲಬುರ್ಗಿ: ರೈತರ ಹೋರಾಟ ಬೆಂಬಲಿಸಿ ಜಾಥಾ ಇಂದು

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2020, 12:28 IST
Last Updated 4 ಡಿಸೆಂಬರ್ 2020, 12:28 IST

ಕಲಬುರ್ಗಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ದೆಹಲಿಯಲ್ಲಿ ರೈತ ಸಮುದಾಯ ನಡೆಸಿದ ಹೋರಾಟಕ್ಕೆ ಬಂಬಲಾರ್ಥವಾಗಿ, ರೈತ ಕಾರ್ಮಿಕ ಹೋರಾಟ ವೇದಿಕೆ ನೇತೃತ್ವದಲ್ಲಿ ನಗರದಲ್ಲಿ ಡಿ. 5ರಂದು ಜಾಥಾ ನಡೆಸಲಾಗುವುದು ಎಂದು ವೇದಿಕೆ ನವ ಕರ್ನಾಟಕ ರೈತ ಸಂಘದ ಅಧ್ಯಕ್ಷ ದಯಾನಂದ ಪಾಟೀಲ ತಿಳಿಸಿದರು.

‘ಶನಿವಾರ ಬೆಳಿಗ್ಗೆ 11.30ಕ್ಕೆ ಇಲ್ಲಿನ ವೀರಶೈವ ಕಲ್ಯಾಣ ಮಂಟಪದಿಂದ ಪಾದಯಾತ್ರೆ ಮೂಲಕ ಮೆರವಣಿಗೆ ಆರಂಭಿಸಲಾಗುವುದು. ಜಗತ್‌ ವೃತ್ತದಲ್ಲಿ ಸಮಾವೇಶಗೊಂಡು ಬಸವಣ್ಣ ಹಾಗೂ ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಅಲ್ಲಿಂದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದವರೆಗೂ ಮೆರವಣಿಗೆ ನಡೆಸಲಾಗುವುದು. ಈ ವೃತ್ತದಲ್ಲಿ ವಿವಿಧ ಸಂಘಟನೆಗಳು ಸಂಯುಕ್ತವಾಗಿ ಹೋರಾಟ ನಡೆಸಲಿವೆ’ ಎಂದು ಅವರು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕೃಷಿಗೆ ಮಾರಕವಾಗುವು ಕಾಯ್ದೆ ತಿದ್ದುಪಡಿಗಳನ್ನು ಕೈಬಿಡಬೇಕು, ಡಾ.ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು, ರೈತರ, ಕೃಷಿಕೂಲಕಾರರ ಬ್ಯಾಂಕ್ ಸಾಲದ ಬಡ್ಡಿ ಮನ್ನಾ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿರಿಸಿಕೊಂಡು ಹೋರಾಟ ನಡೆಸಲಾಗುವುದು. ಇದಕ್ಕೆ ಜಿಲ್ಲೆಯ ರೈತರ, ಕೃಷಿ ಕಾರ್ಮಿಕರು ಕೈಜೋಡಿಸಬೇಕು’ ಎಂದು ಅವರು ಕೋರಿದರು.

ADVERTISEMENT

‘ಮೈ ಕೊರೆಯು ಚಳಿಯಲ್ಲಿ ಹೋರಾಟ ಮಾಡುತ್ತಿರುವ ರೈತರ ಮೇಲೆ ಜಲಫಿರಂಗಿ ಸಿಡಿಸಿ ಹಿಂಸೆ ಮಾಡಿದ ಪ್ರಧಾನಿ ಕ್ಷಮೆ ಯಾಚಿಸಬೇಕು.‌ ಸಂಸತ್ತಿನಲ್ಲಿ ಚರ್ಚೆ ಮಾಡದೆ ಮಸೂದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದ್ದು ಯಾಕೆ? ಕಾಯ್ದೆಗಳು ಕಾರ್ಪೊರೇಟ್ ಕಂಪನಿಗಳ ಪರವಾಗಿವೆ ಎಂಬ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ನಿಲುವು ಕೈಬಿಡುತ್ತಿಲ್ಲ. ಕಂಪನಿಗಳ ಹಿತ ಕಾಯುವ ಮೂಲಕ ದೇಶದ ರೈತರನ್ನು ನಾಶ ಮಾಡಲು ಹೊರಟಿದ್ದಾರೆ’ ಎಂದು ಕಿಡಿಕಾರಿದರು.

ರೈತ ಸಂಘ– ಹಸಿರು ಸೇನೆಯ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಜಗದೇವಿ ಹೆಗಡೆ, ಖಂಡರಾದ ವೀರನಗೌಡ ಪಾಟೀಲ ಮಲ್ಲಾಬಾದಿ, ಸಾಯಿಬಣ್ಣ ಹೋಳಕರ್, ಸಂಗನಗೌಡ ಪಾಟೀಲ ಯಳಸಂಗಿ, ಶರಣಗೌಡ ಪಾಟೀಲ ಜನವಾಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.