ADVERTISEMENT

ಸಾವಿರ ಶಿಕ್ಷಕರಿಗೆ 14ರಂದು ಸನ್ಮಾನ

ಮಹಾಜನ ಫೌಂಡೇಶನ್ ಚಾರಿಟೇಬಲ್ ಮತ್ತು ವೆಲ್‌ಫೇರ್ ಟ್ರಸ್ಟ್ ವತಿಯಿಂದ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2022, 16:32 IST
Last Updated 11 ಅಕ್ಟೋಬರ್ 2022, 16:32 IST
ಅರುಣಕುಮಾರ ಪಾಟೀಲ
ಅರುಣಕುಮಾರ ಪಾಟೀಲ   

ಕಲಬುರಗಿ: ನಗರದ ಮಹಾಜನ ಫೌಂಡೇಶನ್ ಚಾರಿಟಬಲ್ ಮತ್ತು ವೆಲ್‌ಫೇರ್ ಟ್ರಸ್ಟ್ ವತಿಯಿಂದ ಇದೇ 14ರಂದು ಬೆಳಿಗ್ಗೆ 11ಕ್ಕೆ ಇಲ್ಲಿನ ಆಳಂದ ಚೆಕ್ ಪೋಸ್ಟ್ ಸಮೀಪದ ಎನ್.ಜೆ. ಕಲ್ಯಾಣ ಮಂಟಪದಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯ ಒಂದು ಸಾವಿರಕ್ಕೂ ಅಧಿಕ ಪ್ರಾಥಮಿಕ–ಪ್ರೌಢ ಶಾಲಾ ಶಿಕ್ಷಕರಿಗೆ ಹಾಗೂ ರಾಷ್ಟ್ರ, ರಾಜ್ಯ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ ಎಂದು ಸಮಾರಂಭದ ಸ್ವಾಗತ ಸಮಿತಿ ಅಧ್ಯಕ್ಷ ಅರುಣಕುಮಾರ ಎಸ್. ಪಾಟೀಲ ಕೊಡಲಹಂಗರಗಾ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇದು ಪಕ್ಷಾತೀತ ಹಾಗೂ ಜಾತ್ಯತೀತ ಕಾರ್ಯಕ್ರಮವಾಗಿದೆ. ಅಕ್ಷರದ ಜ್ಞಾನ ನೀಡುತ್ತಿರುವವರನ್ನು ಸನ್ಮಾನಿಸುವ ಜೊತೆಗೆ ಹೊಸ ಶಿಕ್ಷಣ ನೀತಿ ಕುರಿತು ವಿಶೇಷ ಉಪನ್ಯಾಸ ನಡೆಯಲಿದೆ’ ಎಂದರು.

ಸುಲಫಲ ಮಠದ ಡಾ. ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಮುಗಳನಾಗಾಂವಿ ಹಿರೇಮಠ ಸಂಸ್ಥಾನದ ಅಭಿನವ ಸಿದ್ಧಲಿಂಗ ಶಿವಾಚಾರ್ಯರು, ಚೌದಾಪುರಿ ಹಿರೇಮಠ ಸಂಸ್ಥಾನದ ಡಾ. ರಾಜಶೇಖರ ಶಿವಾಚಾರ್ಯರು, ಸಿದ್ಧಮಲ್ಲ ಶಿವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದಾರೆ. ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಉದ್ಘಾಟಿಸಲಿದ್ದು, ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಡಾ.ಉಮೇಶ ಜಾಧವ, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷ ಶಿವಶಂಕ್ರಪ್ಪ ಸಾಹುಕಾರ, ಕೆಕೆಆರ್‌ಟಿಸಿ ಅಧ್ಯಕ್ಷ, ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಶಾಸಕರಾದ ಬಸವರಾಜ ಮತ್ತಿಮಡು, ಸುಭಾಷ ಗುತ್ತೇದಾರ್, ಡಾ. ಅವಿನಾಶ ಜಾಧವ, ವಿಧಾನ ಪರಿಷತ್ ಸದಸ್ಯರಾದ ಬಾಬುರಾವ ಚಿಂಚನಸೂರ,ಸುನೀಲ ವಲ್ಯಾಪುರ, ಬಿ.ಜಿ. ಪಾಟೀಲ ಇತರರು ಭಾಗವಹಿಸಲಿದ್ದಾರೆ ಎಂದರು.

ADVERTISEMENT

ಹೊಸ ಶಿಕ್ಷಣ ನೀತಿ ಕುರಿತು ಅಜೀಮ್ ಪ್ರೇಮ್‌ಜಿ ಪ್ರತಿಷ್ಠಾನದ ರಾಜ್ಯ ಮುಖ್ಯಸ್ಥ ರುದ್ರೇಶ ಎಸ್. ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಹೇಳಿದರು.

ಡಿವೈಎಸ್‌ಪಿ ಜೆ.ಎಚ್. ಇನಾಮದಾರ್, ಸಿಐಡಿ ಡಿವೈಎಸ್‌ಪಿ ಶಂಕರಗೌಡ ಪಾಟೀಲ, ಎಸಿಪಿ ಗಂಗಾಧರ ಮಠಪತಿ, ಕರ್ನಾಟಕ ಆಡಳಿತ ಸೇವೆಗೆ ಆಯ್ಕೆಯಾದ ವಿಜಯಕ್ರಾಂತಿ ವಿಭೂತಿ, ಶ್ರೇಷ್ಠ ಉಪನ್ಯಾಸಕ ಪ್ರಶಸ್ತಿ ಪಡೆದ ಪ್ರೊ. ಬಿ.ಎಸ್.ಮಾಲಿಪಾಟೀಲ್ ಅವರಿಗೆ ವಿಶೇಷ ಸನ್ಮಾನ ಮಾಡಲಾಗುವುದು ಎಂದರು.

ಶ್ರೀಮಂತ ಉದನೂರ, ವೀರಣ್ಣ ಗೋಳೆದ್, ಚಂದ್ರು ಬೆಣ್ಣೂರ, ವಿಜಯಕುಮಾರ ಹಲಕರ್ಟಿ, ಅಂಬಾರಾಯ ಬೆಳಕೋಟಾ, ಜಗನ್ನಾಥ ಪಟ್ಟಣಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.