ಕಲಬುರಗಿ: ಮತೀಯ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಜೇವರ್ಗಿ ತಾಲ್ಲೂಕಿನ ಆಂದೋಲಾದ ಕರುಣೇಶ್ವರ ಮಠದ ಸಿದ್ದಲಿಂಗ ಸ್ವಾಮೀಜಿ ವಿರುದ್ಧ ಆಳಂದ ತಾಲ್ಲೂಕಿನ ನರೋಣಾ ಠಾಣೆಯ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ.
ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಆವರಣದಲ್ಲಿ ಮುಸ್ಲಿಮರು ಅನಧಿಕೃತವಾಗಿ ಸಮಾಧಿ ನಿರ್ಮಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಆಂದೋಲಾ ಸ್ವಾಮೀಜಿ, ‘ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಮುಸ್ಲಿಮರು ಯಾವುದೇ ಅನುಮತಿ ಇಲ್ಲದೇ, 10ರಿಂದ 15 ಅಡಿ ವಿಸ್ತಾರದ ಒಂದು ಸಮಾಧಿ ನಿರ್ಮಿಸಿದ್ದಾರೆ. ಅಲ್ಲಿ ನಮಾಜ್ ಮಾಡುತ್ತಿದ್ದಾರೆಂಬ ಮಾಹಿತಿ ಬಂದಿದೆ. ಜಿಲ್ಲಾಡಳಿತ ಕೂಡಲೇ ಎಚ್ಚೆತ್ತು ಆ ಸಮಾಧಿ ನೆಲಸಮಗೊಳಿಸಬೇಕು. ಇಲ್ಲದಿದ್ದರೆ, ಆಗಸ್ಟ್ 10ರಂದು ಶ್ರೀರಾಮ ಸೇನೆಯಿಂದ ಆ ಅನಧಿಕೃತ ಸಮಾಧಿ ನೆಲಸಮಗೊಳಿಸಲಾಗುವುದು’ ಎಂದು ತಿಳಿಸಿದ್ದರು. ಆದರೆ, ಸ್ಥಳಕ್ಕೆ ನಮ್ಮ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದಾಗ ಅದು ಶತಮಾನಗಳಷ್ಟು ಹಿಂದಿನ ಸಮಾಧಿಯಾಗಿದ್ದು, ಹೊಸ ಸಮಾಧಿ ನಿರ್ಮಾಣ ಮಾಡಿರುವುದು ಕಂಡು ಬಂದಿಲ್ಲ’ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.
‘ಆಂದೋಲಾ ಸ್ವಾಮೀಜಿ ಸಮಾಜದಲ್ಲಿ ಶಾಂತಿ ಹಾಗೂ ಸಾಮರಸ್ಯಕ್ಕೆ ಧಕ್ಕೆ ತರುವ ಹಾಗೂ ಎರಡು ಧರ್ಮಗಳ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸಿ ಕೋಮು ಗಲಭೆ ಉಂಟು ಮಾಡುವ ಉದ್ದೇಶದಿಂದ ಆಧಾರರಹಿತ ಹೇಳಿಕೆ ನೀಡಿದ್ದಾರೆ’ ಎಂದು ದೂರಿನಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.