ADVERTISEMENT

ಕಲಬುರಗಿ: ಬೆಂಕಿ ನಂದಿಸಲು ಒಂದೇ ಜಲವಾಹನ!

ಕಲಬುರಗಿ ವಿಭಾಗೀಯ ಕೇಂದ್ರ ಕಚೇರಿಯಲ್ಲಿ ವಾಹನಗಳ ಕೊರತೆ

ಮಲ್ಲಿಕಾರ್ಜುನ ನಾಲವಾರ
Published 16 ಏಪ್ರಿಲ್ 2025, 7:25 IST
Last Updated 16 ಏಪ್ರಿಲ್ 2025, 7:25 IST
ಕಲಬುರಗಿ ಅಗ್ನಿಶಾಮಕ ಠಾಣೆಯ ಕಚೇರಿ ಮುಂಭಾಗದಲ್ಲಿ ತುರ್ತು ಸ್ಪಂದನ, ತುರ್ತು ರಕ್ಷಣಾ ಸಾಮಗ್ರಿಗಳ ಸಾಗಾಟ ಹಾಗೂ ಜಲವಾಹನ ನಿಂತಿರುವುದು
ಕಲಬುರಗಿ ಅಗ್ನಿಶಾಮಕ ಠಾಣೆಯ ಕಚೇರಿ ಮುಂಭಾಗದಲ್ಲಿ ತುರ್ತು ಸ್ಪಂದನ, ತುರ್ತು ರಕ್ಷಣಾ ಸಾಮಗ್ರಿಗಳ ಸಾಗಾಟ ಹಾಗೂ ಜಲವಾಹನ ನಿಂತಿರುವುದು   

ಕಲಬುರಗಿ: ಬೆಂಕಿ ಅವಘಡಗಳು ಸಂಭವಿಸಿದಾಗ ಕಲಬುರಗಿ ನಗರದಲ್ಲಿ ಬೆಂಕಿ ಆರಿಸಲು ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಕಲಬುರಗಿ ವಿಭಾಗೀಯ ಕಚೇರಿಯಲ್ಲಿ ಇರುವುದೊಂದೇ ಜಲವಾಹನ!

ಕಲಬುರಗಿ ನಗರದಲ್ಲಿ ನಂದೂರು–ಕೆಸರಟಗಿ, ಕಪನೂರು ವ್ಯಾಪ್ತಿಯಲ್ಲಿ ನೂರಾರು ಎಕರೆಯಲ್ಲಿ ಕೈಗಾರಿಕಾ ಪ್ರದೇಶವಿದೆ. ಟೈರ್, ಪ್ಲಾಸ್ಟಿಕ್ ತ್ಯಾಜ್ಯ ಸಂಸ್ಕರಣ ಘಟಕಗಳು, ಗೋದಾಮುಗಳು, ವಾಹನಗಳ ಬಿಡಿ ಭಾಗಗಳ ಉದ್ಯಮಗಳಿವೆ. ಪ್ರಮುಖ ವಾಹನ ಕಂಪನಿಗಳ ಶೋರೂಮ್‌ಗಳು, ಹತ್ತಿ ಸಂಸ್ಕರಣ ಘಟಕಗಳೂ ಇವೆ.

ಎಪಿಎಂಸಿ ಮಾರುಕಟ್ಟೆ, ಬಹುಮಹಡಿಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳು, ವಿಶ್ವವಿದ್ಯಾಲಯಗಳು, ಸರ್ಕಾರಿ ಕಚೇರಿಗಳ ಕಟ್ಟಡಗಳಿವೆ. ಏಕಕಾಲದಲ್ಲಿ ಎರಡ್ಮೂರು ಕಡೆ, ಇಲ್ಲವೇ ಒಂದೇ ಕಡೆ ದೊಡ್ಡ ಮಟ್ಟದಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದರೂ ತ್ವರಿತ ಕಾರ್ಯಾಚರಣೆಗೆ ಜಲವಾಹನಗಳ ಕೊರತೆ ಇನ್ನಿಲ್ಲದಂತೆ ಕಾಡುತ್ತಿದೆ.

ADVERTISEMENT

ನಗರದ ವಿಸ್ತೀರ್ಣ, ಜನಸಂಖ್ಯೆ, ಕಟ್ಟಡಗಳು ಹಾಗೂ ಕೈಗಾರಿಗಳ ಘಟಕಗಳು ಹೊಂದಿರುವ ದೃಷ್ಟಿಯಿಂದ ಇನ್ನೂ ಎರಡು ಅಗ್ನಿ ಶಾಮಕ ಠಾಣೆಗಳು ಹಾಗೂ ಐದು ಜಲವಾಹನಗಳ ಅಗತ್ಯವಿದೆ. ಆದರೆ, ಠಾಣೆಯಲ್ಲಿ ಇರುವುದು 16 ಸಾವಿರ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಒಂದೇ ಜಲವಾಹನ. ಇದಕ್ಕೆ ಬೆಂಬಲವಾಗಿ ಕೇವಲ 500 ಲೀಟರ್ ಸಾಮರ್ಥ್ಯ ತುರ್ತು ಸ್ಪಂದನ ವಾಹನ (ಕ್ಯೂಆರ್‌ವಿ) ಇದೆ. ಒಂದೇ ಕಡೆ ಅಗ್ನಿ ಆಕಸ್ಮಿಕ ಸಂಭವಿಸಿದರೆ ಬೆಂಕಿ ನಂದಿಸಲು ತೊಡಕಾಗುತ್ತಿದೆ.

‘ಕೇಂದ್ರ ಸರ್ಕಾರವು 15 ವರ್ಷ ಮೀರಿದ ವಾಹನಗಳನ್ನು ಬಳಸುವಂತಿಲ್ಲ ಎಂಬ ನಿಯಮ ಜಾರಿಗೆ ತಂದಿತ್ತು. ಇದರಿಂದಾಗಿ ಕೆಲವು ಠಾಣೆಗಳಲ್ಲಿ ವಾಹನಗಳು ಕಡಿತವಾದವು. ಕಲಬುರಗಿ ಠಾಣೆಯಲ್ಲಿದ್ದ ನಾಲ್ಕು ವಾಹನಗಳ ಪೈಕಿ ಒಂದನ್ನು ಉಳಿಸಿಕೊಂಡು ಮೂರು ವಾಹನಗಳನ್ನು ಕೊರತೆ ಇರುವ ಠಾಣೆಗಳಿಗೆ ನೀಡಲಾಗಿದೆ. ಈಗ ಕಲಬುರಗಿ ನಗರ ಹೆಚ್ಚುವರಿ ಜಲವಾಹನಗಳಿಗೆ ಎದುರು ನೋಡುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಗ್ನಿಶಾಮಕ ಠಾಣೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

12 ಗಂಟೆಗಳಲ್ಲಿ ಐದು ಬಾರಿ ಕಾರ್ಯಾಚರಣೆ: ‘ಕೇಂದ್ರ ಬಸ್ ನಿಲ್ದಾಣ ರಸ್ತೆಯ ಫರ್ನಿಚರ್ ಅಂಗಡಿ ಹಾಗೂ ಮಾಲಗತ್ತಿ ಕ್ರಾಸ್‌ನ ಶೆಡ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿತ್ತು. 12 ಗಂಟೆಗಳ ಅವಧಿಯಲ್ಲಿ ಒಂದೇ ವಾಹನ ಬಳಸಿ ಎರಡೂ ಕಡೆ ಐದು ಬಾರಿ ಕಾರ್ಯಾಚರಣೆ ನಡೆಸಿದ್ದೇವೆ. ಏಕಕಾಲದಲ್ಲಿ ಎರಡ್ಮೂರು ಕಡೆಯಿಂದ ಕರೆಗಳು ಬಂದರೆ ನಿಭಾಯಿಸುವುದು ಕಷ್ಟವಾಗುತ್ತಿದೆ’ ಎಂದು ಕಾನ್‌ಸ್ಟೆಬಲ್‌ ಒಬ್ಬರು ತಿಳಿಸಿದರು.

ದೊಡ್ಡ ಪ್ರಮಾಣದಲ್ಲಿ ಅಗ್ನಿ ಅನಾಹುತ ಸಂಭವಿಸಿದರೆ ತಾಲ್ಲೂಕುಗಳಿಂದ ಜಲವಾಹನಗಳನ್ನು ತರಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿದ್ದೇವೆ. ಹೆಚ್ಚುವರಿ ವಾಹನಗಳಿಗೆ ಮನವಿ ಮಾಡಲಾಗಿದೆ
ಮಲ್ಲಿಕಾರ್ಜುನ ಜಿಲ್ಲಾ ಅಗ್ನಿಶಾಮಕ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.