ADVERTISEMENT

ರಾಷ್ಟ್ರೋತ್ಥಾನ ಪರಿಷತ್ ವತಿಯಿಂದ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2021, 5:15 IST
Last Updated 11 ನವೆಂಬರ್ 2021, 5:15 IST
ಕಲಬುರಗಿಯ ಎನ್‌ಜಿಒ ಕಾಲೊನಿಯಲ್ಲಿ ರಾಷ್ಟ್ರೋತ್ಥಾನ ಪರಿಷತ್‌ನ ಶಾಲಾ ಕಟ್ಟಡ ನಿರ್ಮಾಣಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರ ಕರ್ನಾಟಕ ಪ್ರಾಂತದ ಸಹ ಸಂಘಚಾಲಕ ಅರವಿಂದರಾವ ದೇಶಪಾಂಡೆ ಭೂಮಿಪೂಜೆ ನೆರವೇರಿಸಿದರು. ವಿಶ್ವ ಹಿಂದೂ ಪರಿಷತ್‌ನ ಕೇಂದ್ರೀಯ ಸಹ ಕಾರ್ಯದರ್ಶಿ ಗೋಪಾಲ್, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಇದ್ದಾರೆ
ಕಲಬುರಗಿಯ ಎನ್‌ಜಿಒ ಕಾಲೊನಿಯಲ್ಲಿ ರಾಷ್ಟ್ರೋತ್ಥಾನ ಪರಿಷತ್‌ನ ಶಾಲಾ ಕಟ್ಟಡ ನಿರ್ಮಾಣಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರ ಕರ್ನಾಟಕ ಪ್ರಾಂತದ ಸಹ ಸಂಘಚಾಲಕ ಅರವಿಂದರಾವ ದೇಶಪಾಂಡೆ ಭೂಮಿಪೂಜೆ ನೆರವೇರಿಸಿದರು. ವಿಶ್ವ ಹಿಂದೂ ಪರಿಷತ್‌ನ ಕೇಂದ್ರೀಯ ಸಹ ಕಾರ್ಯದರ್ಶಿ ಗೋಪಾಲ್, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಇದ್ದಾರೆ   

ಕಲಬುರಗಿ: ‘ಗುಣಮಟ್ಟದ ಶಿಕ್ಷಣ, ಸಂಸ್ಕಾರ ನೀಡುವ ಶಾಲೆಯನ್ನು ಕಲಬುರಗಿಯಲ್ಲಿ ಆರಂಭಿಸಲಾಗುವುದು. ಶಾಲೆ ಬೆಳೆಯಲು ಎಲ್ಲರ ಸಹಕಾರವೂ ಮುಖ್ಯ’ ಎಂದು ವಿಶ್ವ ಹಿಂದೂ ಪರಿಷತ್‌ನ ಕೇಂದ್ರೀಯ ಸಹ ಕಾರ್ಯದರ್ಶಿ ಗೋಪಾಲ್ ಹೇಳಿದರು.

ಶರಣಸಿರಸಗಿ ಮತ್ತು ಎನ್‌ಜಿಒ ಕಾಲೊನಿಯಲ್ಲಿ ರಾಷ್ಟ್ರೋತ್ಥಾನ ಪರಿಷತ್‌ ವತಿಯಿಂದ ನೂತನ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಬುಧವಾರ ಭೂಮಿಪೂಜೆ ನೆರವೇರಿಸಿ ಮತನಾಡಿದ ಅವರು, ‘ನಗರದಲ್ಲಿ ಶರಣಬಸವೇಶ್ವರ ಶಾಲೆ, ಚಂದ್ರಕಾಂತ ಪಾಟೀಲ ಶಾಲೆ ಸೇರಿದಂತೆ ಇನ್ನಿತರ ಉತ್ತಮ ಶಾಲೆಗಳು ಇವೆ. ಅಲ್ಲಿ ಉತ್ತಮ ಶಿಕ್ಷಣವೂ ಸಿಗುತ್ತಿದೆ. ಅದರ ಜತೆಗೆ ರಾಷ್ಟ್ರೀಯತೆ, ದೇಶ ಮೊದಲು ಎಂಬ ವಿಷಯವನ್ನು ಪರಿಷತ್ತಿನ ಶಾಲೆಯಲ್ಲಿ ಕಲಿಸಲಾಗುವುದು’ ಎಂದರು.

‘ಪೋಷಕರು ತಮ್ಮ ಮಕ್ಕಳು ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ ಓದಬೇಕು ಎಂದು ಬಯಸುತ್ತಾರೆ. ಆದರೆ, ರಾಷ್ಟ್ರೀಯ ಸ್ವಯಂ ಸಂಘದ (ಆರ್‌ಎಸ್‌ಎಸ್‌) ನೀತಿ ಅನ್ವಯ ಪ್ರಾಥಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲಿ ಆಗಬೇಕು. ನಾವು ಇಂಗ್ಲಿಷ್‌ ಮಾಧ್ಯಮ ಶಾಲೆ ಆರಂಭಿಸದಿದ್ದರೆ ಪೋಷಕರು ಬೇರೆ ಶಾಲೆಗಳಿಗೆ ಮಕ್ಕಳನ್ನು ಕಳಿಸುತ್ತಾರೆ. ಆಗ ಅವರು ಉತ್ತಮ ಸಂಸ್ಕಾರದಿಂದ ವಂಚಿತರಾಗುತ್ತಾರೆ’ ಎಂದರು.

ADVERTISEMENT

‘ಎನ್‌ಜಿಒ ಕಾಲೊನಿಯಲ್ಲಿ ನಿರ್ಮಾಣವಾಗುವ ಶಾಲೆಯಲ್ಲಿ 5ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುವುದು. ಆರನೇ ತರಗತಿಯಿಂದ ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ಇರುತ್ತದೆ. ಶರಣಸಿರಸಗಿಯ ಶಾಲೆಯಲ್ಲಿ ಪ್ರಾರಂಭದಿಂದಲೇ ಇಂಗ್ಲಿಷ್ ಮಾಧ್ಯಮ (ಸಿಬಿಎಸ್‌ಇ) ಶಿಕ್ಷಣ ನೀಡಲಾಗುವುದು ಎಂದು ತಿಳಿಸಿದರು.

ಎನ್‌ಜಿಒ ಕಾಲೊನಿಯಲ್ಲಿ ನಿರ್ಮಾಣವಾಗುವ ಶಾಲೆಗೆ ₹3.50 ಕೋಟಿ ಬೇಕಾಗಬಹುದು. ಅದರಲ್ಲಿ ಅರ್ಧದಷ್ಟು ಹಣವನ್ನು ನೀಡುವವರ ಹೆಸರನ್ನು ಶಿಶುಮಂದಿರ, ಪ್ರಾಥಮಿಕ ಅಥವಾ ಪ್ರೌಢಶಾಲೆಗೆ ಇಡಲಾಗುವುದು. ಶರಣಸಿಸಗಿಯ ಶಾಲೆಗೆ ₹10ರಿಂದ 15 ಕೋಟಿ ಬೇಕಾಗಬಹುದು. ಶಾಲೆಯ ಜತೆಗೆ ಸಂಘದ ಚಟುವಟಿಕೆಗಳಿಗೆ ಬೇಕಾದ ಸೌಕರ್ಯಗಳನ್ನು ಅಲ್ಲಿ ಕಲ್ಪಿಸಲಾಗುವುದು’ ಎಂದರು.

ಆರ್‌ಎಸ್‌ಎಸ್‌ ಉತ್ತರ ಕರ್ನಾಟಕ ಪ್ರಾಂತದ ಸಹ ಸಂಘಚಾಲಕ ಅರವಿಂದರಾವ್ ದೇಶಪಾಂಡೆ ಮಾತನಾಡಿ, ಇಲ್ಲಿನ ಭೂಮಿಪೂಜೆಯು ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣ ಕ್ರಾಂತಿಗೆ ನಾಂದಿ ಹಾಡಿದಂತಾಗಿದೆ. ಎರಡು ವರ್ಷಗಳಲ್ಲಿ ಕಟ್ಟಡ ನಿರ್ಮಾಣವಾಗಲಿದೆ’ ಎಂದರು.

ಶಿಕ್ಷಣದ ಮೂಲಕ ಸಂಸ್ಕಾರ, ರಾಷ್ಟ್ರೀಯತೆ, ದೇಶಭಕ್ತಿಯ ಗುಣಗಳನ್ನು ಬಿತ್ತಬೇಕಿದೆ. 46 ಕಡೆ ರಾಷ್ಟ್ರೋತ್ಥಾನ ಪರಿಷತ್‌ನ ಶಾಲೆಗಳಿವೆ. ಸಂಸ್ಕಾರಯುತ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ, ಜೀವನ ಎಲ್ಲ ಅಂಗಗಳಲ್ಲಿ ಪರಿವರ್ತನೆ ತರುವ ಕೆಲಸ ಪರಿಷತ್ತು ಮಾಡುತ್ತಿದೆ’ ಎಂದರು.

ರಾಷ್ಟ್ರೋತ್ಥಾನ ಪರಿಷತ್‌ ಪ್ರಧಾನ ಕಾರ್ಯದರ್ಶಿ ದಿನೇಶ್‌ ಹೆಗಡೆ ಮಾತನಾಡಿ, ‘ರಾಷ್ಟ್ರೋತ್ಥಾನ ಪರಿಷತ್‌ 1965ರಲ್ಲಿ ಬೆಂಗಳೂರಿನಲ್ಲಿ ಸಾಹಿತ್ಯಿಕ ಚಟುವಟಿಕೆಗಳನ್ನು ನಡೆಸುವ ಉದ್ದೇಶದಿಂದ ಆರಂಭವಾಯಿತು. 250ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಲಾಗಿದೆ ಎಂದರು.

‘2025ಕ್ಕೆ ಆರ್‌ಎಸ್‌ಎಸ್‌ಗೆ 100 ವರ್ಷ ತುಂಬಿದರೆ, ಪರಿಷತ್ತಿಗೆ 60 ವರ್ಷ ತುಂಬಲಿದೆ. ಆ ವೇಳೆಗೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಶಾಲೆಗಳನ್ನು ಪ್ರಾರಂಭಿಸುವ ಉದ್ದೇಶ ಇದೆ. ಈಗಾಗಲೇ ಮೈಸೂರು, ಧಾರವಾಡ, ಹಾವೇರಿಯಲ್ಲಿ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ. ಯಾದಗಿರಿ ಮತ್ತು ಬೀದರ್‌ನಲ್ಲೂ ಶಾಲೆಗಳನ್ನು ಆರಂಭಿಸಲಾಗುವುದು’ ಎಂದರು.

ಸಂಸದ ಡಾ.ಉಮೇಶ ಜಾಧವ, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಶಾಸಕರಾದ ಬಸವರಾಜ ಮತ್ತಿಮೂಡ, ಡಾ.ಅವಿನಾಶ ಜಾಧವ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಮಾಜಿ ಸಚಿವ ರೇವೂನಾಯಕ ಬೆಳಮಗಿ, ಕೂಡಾ ಅಧ್ಯಕ್ಷ ದಯಾಘನ ದಾರವಾಡಕರ್, ಮುಖಂಡ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಇದ್ದರು.

‘2023ರ ಡಿಸೆಂಬರ್‌ನಲ್ಲಿ ರಾಮಮಂದಿರ ಪೂರ್ಣ’

ಕಲಬುರಗಿ: ‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ವೇಗವಾಗಿ ನಡೆದಿದ್ದು, 2023ರ ಡಿಸೆಂಬರ್‌ ವೇಳೆಗೆ ರಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಲಾಗುವುದು’ ಎಂದು ಆಯೋಧ್ಯೆ ರಾಮಮಂದಿರ ನಿರ್ಮಾಣ ಉಸ್ತುವಾರಿ ಹಾಗೂ ವಿಶ್ವ ಹಿಂದೂ ಪರಿಷತ್ತಿನ ಕೇಂದ್ರೀಯ ಸಹಕಾರ್ಯದರ್ಶಿ ಗೋಪಾಲ್ ತಿಳಿಸಿದರು.

ನಗರದಲ್ಲಿ ಬುಧವಾರ ಭೂಮಿಪೂಜಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಮಂದಿರ ನಿರ್ಮಾಣಕ್ಕೆ 45 ದಿನಗಳಲ್ಲಿ ₹3,200 ಕೋಟಿ ದೇಣಿಗೆ ಸಂಗ್ರಹವಾಗಿದೆ’ ಎಂದರು.

‘ಮಂದಿರ ನಿರ್ಮಾಣವಾದ ಬಳಿಕ ಹಲವರು ಭೇಟಿ ನೀಡಲು ಬಯಸಿದ್ದಾರೆ. ಅದರ ಬದಲು ಈಗಲೇ ನಿರ್ಮಾಣ ಕಾರ್ಯವನ್ನು ನೋಡಿದರೆ, ಮಂದಿರದ ಭವ್ಯತೆ ತಿಳಿಯುತ್ತದೆ. ಹೀಗಾಗಿ ಎಲ್ಲರೂ ಮಂದಿರ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಬೇಕು’ ಎಂದರು.

‘ಈ ಮೊದಲು ರಾಮನ ಮೂರ್ತಿ ಸರ್ಕಾರದ ಅಧೀನದಲ್ಲಿತ್ತು. ಈಗ ರಾಮ ಭಕ್ತರ ಕೈಯಲ್ಲಿದೆ. ಈಗ ಭೇಟಿ ನೀಡಿದರೆ, ಮೂರ್ತಿಯನ್ನು ಸುಲಭವಾಗಿ ನೋಡಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.